ದಾವಣಗೆರೆ:
ಶುಕ್ರವಾರ ಆಲಿಕಲ್ಲು ಸಹಿತ ಸುರಿದ ಭಾರೀ ಮಳೆ, ಗಾಳಿಯಿಂದಾಗಿ ಮನೆ, ಬೆಳೆ ಹಾನಿಗೆ ಒಳಗಾಗಿದ್ದು, ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಆಲೂರು ಗ್ರಾಮದ ವಿವಿಧ ಸ್ಥಳಗಳಿಗೆ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್.ಬಸವಂತಪ್ಪ ಮತ್ತಿತರರು ಶನಿವಾರ ಭೇಟಿ ನೀಡಿ, ಸಂತ್ರಸ್ಥರಿಗೆ ಧೈರ್ಯ ತುಂಬಿದರು.
ತಾಲೂಕಿನ ಆಲೂರು ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸುರಿದ ಆಲಿಕಲ್ಲು ಸಹಿತ ಭಾರೀ ಮಳೆಯಿಂದಾಗಿ ಆಲಿಕಲ್ಲು ಹೊಡೆತಕ್ಕೆ ಮನೆಯ ಹೆಂಚುಗಳು, ಕಿಟಕಿಗಳು ಪುಡಿಪುಡಿಯಾಗಿವೆ. ಬೀಸಿದ ಬಿರುಗಾಳಿಗೆ ಗಾಳಿಯಿಂದ ಮನೆಗಳ ಶೀಟುಗಳು ಹಾರಿ ಹೋಗಿವೆ. ಅಲ್ಲದೇ, ಮಳೆಯ ಅಬ್ಬರಕ್ಕೆ ಅಡಿಕೆ, ಬಾಳೆ, ಎಲೆ ಬಳ್ಳಿ ತೋಟಗಳು ಸಂಪೂರ್ಣ ನಾಶವಾಗಿವೆ.
ಭಾರೀ ಮಳೆ ಗಾಳಿಯಿಂದಾಗಿ ದೊಡ್ಡ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಸಹ ಕಡಿತಗೊಂಡಿದೆ. ಹೀಗಾಗಿ ಗ್ರಾಮಸ್ಥರು ಜೀವ ಕೈಯಲ್ಲಿಡಿದುಕೊಂಡೇ ರಾತ್ರಿ ಕಳೆಯಬೇಕಾದ ಬಗ್ಗೆ ಜಿಪಂ ಸದಸ್ಯ ಕೆ.ಎಸ್.ಬಸವಂತಪ್ಪನವರ ಗಮನಕ್ಕೆ ಗ್ರಾಮಸ್ಥರು ತಂದರು.
ಹಾನಿಗೀಡಾದ ಮನೆ, ತೋಟಗಳಿಗೆ ವೀಕ್ಷಣೆ ಮಾಡಿದ ನಂತರ ಸಂತ್ರಸ್ಥ ಗ್ರಾಮಸ್ಥರು, ರೈತರನ್ನುದ್ದೇಶಿಸಿ ಮಾತನಾಡಿದ ಬಸವಂತಪ್ಪ, ಸಂಬಂಧಿಸಿದ ಕಂದಾಯ ಅಧಿಕಾರಿಗಳು, ಕೃಷಿ, ತೋಟಗಾರಿಕೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ಪರಿಹಾರ ಕೊಡಿಸಲು ಪ್ರಯತ್ನಿಸುತ್ತೇನೆ. ವಿದ್ಯುತ್ ಕಂಬಗಳನ್ನು ಅಳವಡಿಸಿ, ವಿದ್ಯುತ್ ಸಂಪರ್ಕ ತಕ್ಷಣ ಕಲ್ಪಿಸಲು ಮನವಿ ಮಾಡುವೆ ಎಂದು ಭರವಸೆ ನೀಡಿದರು.
ಮಳೆ, ಗಾಳಿ, ಆಲಿಕಲ್ಲು ಹೊಡೆತಕ್ಕೆ ತತ್ತರಿಸಿದ್ದ ಆಲೂರು ಗ್ರಾಮಕ್ಕೆ ತಹಸೀಲ್ದಾರ್ ಭೇಟಿ ನೀಡಿ, ಗ್ರಾಮದಲ್ಲಿ ಆಗಿರುವ ಹಾನಿ ಬಗ್ಗೆ ಸ್ಥಳ ಪರಿಶೀಲಿಸಿದರು. ತಕ್ಷಣವೇ ಸರ್ಕಾರದ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಮಾರ್ಗಸೂಚಿ ಪ್ರಕಾರ ಪರಿಹಾರ ವಿತರಿಸಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮಹೇಶ್ವರಪ್ಪ, ತಿಪ್ಪಣ್ಣ, ಹನುಮಂತಪ್ಪ, ನಾಗಪ್ಪ, ಹೇಮಣ್ಣ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
