ಮಳೆಯಿಂದಾಗಿ ಶಾಲೆಗೆ ತೆರಳದಂತಾದ ಮಕ್ಕಳು

ಹರಪನಹಳ್ಳಿ:

     ಮಳೆ ಸುರಿದು ಹಳ್ಳ ತುಂಬಿರುವ ಕಾರಣ ತಾಲ್ಲೂಕಿನ ಪುಣ್ಯನಗರ ರಸ್ತೆ ಸಮರ್ಪಕ ಕಡಿತಗೊಂಡು ಇಲ್ಲಿನ ಮಕ್ಕಳು ಶಾಲೆಗೆ ತೆರಳದಂತ ದುಸ್ಥಿತಿ ಉಂಟಾಗಿದೆ.

    ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಪುಣ್ಯನಗರ 200 ಜನಸಂಖ್ಯೆ ಹೊಂದಿರುವ ಪುಟ್ಟ ಗ್ರಾಮ. ಊರಲ್ಲಿ ಶಾಲೆಗಳು ಇಲ್ಲದ ಕಾರಣ ಶಾಲಾ-ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳು ಬೇರೆ ಹಳ್ಳಿ ಅಥವಾ ಪಟ್ಟಣ ಅವಲಂಬಿಸಬೇಕಾಗಿದೆ. ಇದೆಲ್ಲಕ್ಕಿಂತಲೂ ಈ ಊರಿಗೆ ಸಮರ್ಪಕ ರಸ್ತೆ ಇಲ್ಲದಿರುವು ದೊಡ್ಡ ಸಮಸ್ಯೆ ಆಗಿ ಕಾಡುತ್ತಿದೆ.

   ಗ್ರಾಮಕ್ಕೆ ಡಾಂಬರ್ ರಸ್ತೆ ಇರಲಿ, ಸರಿಯಾದ ಕಚ್ಚಾ ರಸ್ತೆ ಸಹ ಇಲ್ಲ. ಮಳೆಗಾಲದಲ್ಲಿ ರಸ್ತೆ ಸಂಪರ್ಕವೇ ಕಡಿತಗೊಳ್ಳುತ್ತದೆ. ಗ್ರಾಮದಿಂದ ಕೇವಲ 1 ಕಿ.ಮೀ ಅಂತರದಲ್ಲಿ ಪ್ರಮುಖ ರಸ್ತೆಯಿದೆ. ಈ ಮಾರ್ಗ ಮಧ್ಯೆ ಹಳ್ಳವೊಂದು ಹರಿಯುತ್ತಿದ್ದು, ಮಳೆಗಾಲದಲ್ಲಿ ಈ ರಸ್ತೆ ದಾಟುವುದು ತುಂಬಾ ಕಷ್ಟಕರವಾಗಿ ಪರಿಣಮಿಸಿದೆ. ಇಲ್ಲಿರುವ ಚೆಕ್ ಡ್ಯಾಮ್ ಮೇಲಿನ ಚಿಕ್ಕ ದಾರಿಯಲ್ಲಿ ಸಾಗಬೇಕಾದ ಅನಿವಾರ್ಯತೆ ಬಂದೋದಗಿದೆ.

    ಪುಣ್ಯನಗರದ 15 ಮಕ್ಕಳು ಪ್ರಾಥಮಿಕ, ಪ್ರೌಢ ಶಾಲೆಗೆ 3 ಕಿಲೋ ಮೀಟರ್ ದೂರದ ಮತ್ತಿಹಳ್ಳಿ ಗ್ರಾಮಕ್ಕೆ ತೆರಳ ಬೇಕಾಗಿದೆ. ಆದರೆ ಈಚೆಗೆ ಸುರಿದ ಬಾರಿ ಮಳೆಗೆ ಹಳ್ಳ ಮೈದುಂಬಿ ಹರಿಯುತ್ತಿದೆ. ಇದಕ್ಕೆ ಅಡ್ಡಲಾಗಿ ನಿರ್ಮಿಸಿರುವ ಚೆಕ್ ಡ್ಯಾಂ ಸಹ ನೀರಿನಿಂದ ತುಂಬಿಕೊಂಡಿದೆ. ಮಕ್ಕಳನ್ನು ಹಳ್ಳದಲ್ಲಿ ದೊಡ್ಡವರು ಎತ್ತಿಕೊಂಡು ದಾಟಿಸಬೇಕು. ಇಲ್ಲದಿದ್ದರೆ ಈ ಮಕ್ಕಳು ತುಂಬಿ ಹರಿಯುತ್ತಿರುವ ಚೆಕ್ ಡ್ಯಾಂನ ಎರಡು ಅಡಿ ಅಗಲದ ಏರಿ ಮೇಲೆ ಹರಿಯುತ್ತಿರುವ ನೀರಿನಲ್ಲಿ ಜೀವ ಬಿಗಿ ಹಿಡಿದು ಸಾಗಬೇಕಾಗಿದೆ.

    ಚೆಕ್ ಡ್ಯಾಂ ದಾಟಿದ ನಂತರವೂ ಕೆಸರಿನ ರಸ್ತೆಯಲ್ಲಿ 1 ಕಿ.ಮೀ ಸಾಗಿ ಮುಖ್ಯ ರಸ್ತೆಗೆ ಬಂದು ಅಲ್ಲಿಂದ ಯಾವುದಾದರೂ ವಾಹನ ಹಿಡಿದುಕೊಂಡು ಮತ್ತಿಹಳ್ಳಿ ಗ್ರಾಮದ ಶಾಲೆಗೆ ತಲುಪಬೇಕಾಗಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಸುರಿದ ಮಳೆಯಿಂದ ಕಳೆದ ಒಂದು ವಾರದಿಂದ ಇದೇ ಪರಿಸ್ಥಿತಿ ಉಂಟಾಗಿದೆ.

    ಶಾಲೆಗೆ ತೆರಳಲು ಆಗದಂತಹ ಕಷ್ಟದಿಂದ ಅನೇಕ ಪೋಷಕರು ತಮ್ಮ ಮಕ್ಕಳನ್ನು ಹಡಗಲಿ, ಕಾನಹೊಸಹಳ್ಳಿ ಮುಂತಾದ ಕಡೆ ಅಭ್ಯಾಸಕ್ಕೆ ಕಳುಹಿಸಿದ್ದಾರೆ. ಈಗ ಗ್ರಾಮದಲ್ಲಿ ಉಳಿದಿರುವ 15 ಮಕ್ಕಳು ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಹೋಗಲು ದಿನನಿತ್ಯ ಭಯದ ವಾತಾವರಣದಲ್ಲೇ ಸಾಗಬೇಕಾಗಿದೆ.

   `ಮೊನ್ನೆ ಸುರಿದ ಮಳೆಯಿಂದ ಕಳೆದ 3-4 ದಿನದಿಂದ ಮಕ್ಕಳು ಶಾಲೆಗೆ ಹೋಗಲಾಗಿಲ್ಲ. ಊರಲ್ಲಿ ಯಾರಿಗಾದರೂ ಆರೋಗ್ಯದಲ್ಲಿ ಹೆಚ್ಚು ಕಡಿಮೆಯಾದರೆ ಬೇಗ ಆಸ್ಪತ್ರೆಗೆ ತಲುಪುದು ಕಷ್ಟದ ಮಾತೇ ಸರಿ. ಗರ್ಭಿಣಿಯರು, ಮಹಿಳೆಯರು, ವಯೋವೃದ್ಧರಿಗೆ ತುಂಬಾ ತೊಂದರೆ ಆಗಿದೆ. ಮಳೆಗಾಲ ಸಂದರ್ಭದಲ್ಲಿ ಬೈಕುಗಳು ಇದ್ದರೂ ಪ್ರಯೋಜನಿವಿಲ್ಲ ಎನ್ನುತ್ತಾರೆ ಗ್ರಾಮಸ್ಥರಾದ ಜಯಪ್ಪ, ಮಲ್ಲಮ್ಮ ಹೇಳುತ್ತಾರೆ.

   `ನಮ್ಮೂರಿಗೆ ರಸ್ತೆ ಮಾರ್ಗ ಮಾಡಿಕೊಟ್ಟರೆ ಸಾಕು ಸರ್ಕಾರಕ್ಕೆ ನಾವು ಬೇರೇನೂ ಕೇಳುವುದಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು ಎಂಬುದು ನಮ್ಮ ಉದ್ದೇಶ. ನಿಮ್ಮೂರಿಗೆ ರಸ್ತೆಯೇ ಇಲ್ಲ ನಾವು ಹೇಗೆ ಬರುವುದು ಎಂದು ಸಂಬಂಧಿಗಳು ಪುಣ್ಯನಗರಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಉತ್ತಮ ರಸ್ತೆ ಮಾಡಿಸಿಕೊಡಿ ಎಂದು ಜನಪ್ರತಿನಿಧಿಗಳಿಗೆ ಬೇಡಿಕೊಂಡರೂ ನಮ್ಮ ದನಿಗೆ ಬೆಲೆ ಸಿಕ್ಕಿಲ್ಲ’ ಎಂದು ಗ್ರಾಮದ ಯಶೋಧಮ್ಮ, ರತ್ನಮ್ಮ ಬೇಸರ ವ್ಯಕ್ತಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap