ಕೂಡ್ಲಿಗಿ:
ಲೋಕಸಭಾ ಸಾರ್ವತ್ರಿಕ ಚುನಾವಣೆಯ ಅಂಗವಾಗಿ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದಾದ್ಯಂತ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತರೆಳಿ ವೋಟರ್ ಸ್ಲಿಪ್ ತಲುಪಿಸುವ ಕಾರ್ಯವನ್ನು ಭರದಿಂದ ನಡೆಸಿದ್ದಾರೆ. ಇದರೊಂದಿಗೆ ವೋಟರ್ ಗೈಡ್ ಸಹ ಹಂಚಿಕೆ ಮಾಡಲಾಗುತ್ತಿದೆ.
ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದಲ್ಲಿ 10,2396 ಪುರುಷರು, 99,697 ಮಹಿಳೆಯರು ಹಾಗೂ 10 ಜನ ಇತರೆ ಮತದಾರರು ಸೇರಿ ಒಟ್ಟು 20,2103 ಮತದಾರರಿದ್ದಾರೆ. ಇವರಿಗಾಗಿ ಒಟ್ಟು 243 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ವೋಟರ್ ಸ್ಲಿಪ್‍ನಲ್ಲಿ ಮತದಾರರ ಹೆಸರು, ಭಾವಚಿತ್ರ, ಮತಗಟ್ಟೆ ಸಂಖ್ಯೆ, ಕ್ರಮ ಸಂಖ್ಯೆಯ ವಿವರವಿರಲಿದೆ. ಆದರೆ ಮತದಾನ ಮಾಡಲು ಇದು ದಾಖಲೆಯಲ್ಲ. ಇದೇ ಮೊದಲ ಬಾರಿಗೆ ಮತದಾನದ ವ್ಯವಸ್ಥೆ ಕುರಿತಂತೆ ಮಾಹಿತಿ ನೀಡುವ ಕೈಪಿಡಿಯನ್ನೂ ಕೂಡ ನೀಡಲಾಗುತ್ತದೆ. ಅಲ್ಲದೆ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಿದವರಿಗೆ ಚುನಾವಣಾ ಗುರುತಿನ ಚೀಟಿಯನ್ನು ಇದೇ ಸಂದರ್ಭದಲ್ಲಿ ವಿತರಿಸುತ್ತಿದ್ದಾರೆ. ಮನೆಯಲ್ಲಿ ಲಭ್ಯವಿಲ್ಲದವರಿಗೆ ಮತದಾನದ ದಿನವೇ ಮತಗಟ್ಟೆಗಳ ಬಳಿಯೇ ವೋಟರ್ ಸ್ಲಿಪ್‍ಗಳನ್ನು ವಿತರಿಸಲಾಗುತ್ತದೆ ಎಂದು ತಹಸೀಲ್ದಾರ್ ಎಸ್. ಮಹಾಬಲೇಶ್ವರ ತಿಳಿಸಿದ್ದಾರೆ.
ಇದೇ 23ರಂದು ನಡೆಯುವ ಮತದಾನ ಸಂದರ್ಭದಲ್ಲಿ ಒಬ್ಬ ಮತದಾರ, ತನ್ನ ಮತ ಚಲಾಯಿಸಲು ಏನು? ಕ್ರಮ ಅನುಸರಿಸಬೇಕು, ಯಾವ ದಾಖಲೆಗಳು ಇರಬೇಕು, ಮತದಾರನಿಗೆ ಏನೆಲ್ಲ ಸೌಲಭ್ಯಗಳಿವೆ, ಸಹಾಯವಾಣಿ ಸಂಖ್ಯೆ, ಮತ ಚಲಾವಣೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಹೀಗೆ ಸಮಗ್ರ ಮಾಹಿತಿ ಜೊತೆಗೆ ಚುನಾವಣಾ ದಿನಾಂಕ, ಸಮಯ ಎಲ್ಲವೂ ಇದರಲ್ಲಿದೆ. ಅಂಗವಿಕಲರಿಗೆ ಮತದಾನಕ್ಕೆ ಅನುಕೂಲವಾಗುವಂತೆ ರ್ಯಾಂಪ್ ಸೌಲಭ್ಯ, ಅಂಧರಿಗೆ ಮತ ಯಂತ್ರದಲ್ಲಿ ಬ್ರೈಲ್ ಲಿಪಿ ಅಳವಡಿಕೆ, ಮತದಾರರಿಗೆ ಕುಡಿಯುವ ನೀರು, ಶೌಚಾಲಯ, ಪ್ರಾಥಮಿಕ ಚಿಕಿತ್ಸೆ ಸೌಲಭ್ಯ, ಪುರುಷ, ಮಹಿಳೆಯರಿಗೆ ಪ್ರತ್ಯೇಕ ಸಾಲು ಸೌಲಭ್ಯ ಇರುವ ಕುರಿತ ಮಾಹಿತಿಯೂ ಗೈಡ್‍ನಲ್ಲಿದೆ. ಮತದಾರರು ಮತಗಟ್ಟೆಗೆ ತೆರಳಿ ಮತ ಚಲಾಯಿಸುವ ಬಗೆಯನ್ನು ಸ್ಪಷ್ಟವಾಗಿ ಚಿತ್ರದ ಮೂಲಕ ವೋಟರ್ ಗೈಡ್‍ನಲ್ಲಿ ತಿಳಿಸಲಾಗಿದೆ.
ಅಂಗವಿಕಲರಿಗೆ ವಾಹನ, ಗಾಲಿ ಕುರ್ಚಿ ವ್ಯವಸ್ಥೆ: ತಾಲ್ಲೂಕಿನ ಒಟ್ಟು 3657 ಜನ ಅಂಗವಿಕಲರನ್ನು ಗುರುತಿಸಲಾಗಿದ್ದು, ಅವರಲ್ಲಿ 997 ಪುರುಷರು ಹಾಗೂ 904 ಮಹಿಳೆಯರು ಸೇರಿ 1901 ಅರ್ಹ ಅಂಗವಿಕಲ ಮತದಾರರಿದ್ದಾರೆ. ಇವರು ಮತದಾನ ಮಾಡಲು ಅನುಕೂಲವಾಗಲು ಮನೆಯಿಂದ ಮತಗಟ್ಟೆಯವರೆಗೆ ಕರೆದುಕೊಂಡು ಬರಲು ವಾಹನದ ವ್ಯವಸ್ಥೆ ಹಾಗೂ ಮತಗಟ್ಟೆ ಒಳಗೆ ಹೋಗಲು ಪ್ರತಿ ಮತಗಟ್ಟೆಯಲ್ಲೂ ಗಾಲಿ ಕುರ್ಚಿಯನ್ನು ತಾಲೂಕು ಆಡಳಿತ ಸಿದ್ದಪಡಿಸಿಕೊಂಡಿದೆ.