ಬೆಂಗಳೂರು
ಇತ್ತಿಚಿಗಷ್ಟೇ ಕಕ್ಷೆಗೆ ಸೇರಿಸಲಾಗಿದ್ದ ಜಿಸ್ಯಾಟ್-30 ಉಪಗ್ರಹ ಯಶಸ್ವಿಯಾಗಿರುವುದರಿಂದ ಸಂವಹನ ತಂತ್ರಜ್ಞಾನಕ್ಕೆ ಭಾರೀ ನೆರವು ಆಗಲಿದೆ ಎಂದುಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದಅಧ್ಯಕ್ಷ ಕೆ.ಶಿವನ್ ತಿಳಿಸಿದರು.
ನಗರದ ಹಳೇ ಮದ್ರಾಸ್ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಇಸ್ರೋ ಬುಧವಾರ ಆಯೋಜಿಸಿದ್ದ, ಮಾನವ ಸಹಿತ ಗಗನಯಾನ ಹಾಗೂ ಪರಿಶೋಧನೆಯ ಸವಾಲುಗಳು ಮತ್ತು ಭವಿಷ್ಯದ ಪ್ರವೃತ್ತಿ ಕುರಿತ ಒಂದು ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿ ದೇಶದ ಮುಖ್ಯ ಪ್ರದೇಶ ಮತ್ತು ದ್ವೀಪಗಳ ಮೂಲಕ ಸಂಪರ್ಕ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲಿದ್ದು ಸಿ ಬ್ಯಾಂಡ್ ಮೂಲಕ ಕೊಲ್ಲಿ,ಏಷ್ಯಾ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳ ಸಂಪರ್ಕ ವ್ಯವಸ್ಥೆಗೂ ಇದು ಸಹಾಯಕವಾಗಲಿದೆ.
ಡಿಟಿಎಚ್ ಟೆಲಿಕಾಂ ಸೇವೆ ಸಂಪರ್ಕ, ಟೆಲಿವಿಷನ್ ಆಫ್ ಲಿಂಕಿಂಗ್ ಮತ್ತು ಟೆಲಿಫೋರ್ಟ್ ಸರ್ವೀಸ್‌ಗಳು, ಡಿಜಿಟಲ್ ಸ್ಯಾಟ್‌ಲೈಟ್, ನ್ಯೂಸ್ ಗ್ಯಾದರಿಂಗ್(ಡಿಎಸ್‌ಎನ್‌ಜಿ) ಹಾಗೂ ಇ-ಆಡಳಿತ ಸೌಲಭ್ಯಕ್ಕೂ ಈ ಉಪಗ್ರಹ ನೆರವಾಗಲಿದೆ ಎಂದು ಅವರು ವಿವರಿಸಿದರು.
ಮಾನವ ಸಹಿತ ಗಗನಯಾನದ ಮೊದಲ ಹಂತಕ್ಕೆ ಕಾಲಿಡುತ್ತಿದ್ದೇವೆ.ಮಾನವ ಸಹಿತ ಗಗನಯಾನ ಎಲ್ಲಾ ಕ್ಷೇತ್ರಗಳಲ್ಲಿ ಬೆಳಕು ಚೆಲ್ಲಲು ಒಂದು ಉತ್ತಮ ಯೋಜನೆ. ಇಸ್ರೋ ಹೊಸ ಹ್ಯುಮನ್ ಸೆಂಟರ್ ಬೆಂಗಳೂರಿನಲ್ಲಿ ತಯಾರಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಇಡೀ ದೇಶದಾದ್ಯಂತ ಅನೇಕ ರಿಸರ್ಚ್ ಸೆಂಟರ್ ಮಾಡಲಾಗುತ್ತಿದೆ. ಗಗನಯಾತ್ರಿಗಳಿಗೆ ಶೀಘ್ರದಲ್ಲೇ ಭಾರತದಲ್ಲಿ ಅಭ್ಯಾಸ ಕಾರ್ಯಾಗಾರ ಏರ್ಪಾಡು ಮಾಡಲಾಗುವುದು ಎಂದ ಅವರು, ಜೂನ್ 2020 ರಲ್ಲಿ ಮಾನವ ರಹಿತ ಮಿಷನ್ ಯೋಜನೆ ಮಾಡುತ್ತೇವೆ. ಮಾನವ ಸಹಿತ ಗಗನಯಾನಕ್ಕೂ ಮೊದಲು ಮಾನವ ರಹಿತ ಮಿಷನ್ ಲಾಂಚ್ ಇದು ಕೇವಲ ಮಾನವನನ್ನು ಗಗನಯಾನಕ್ಕೆ ಕಳಿಸುವುದಲ್ಲ, ಇದು ಮುಂದಿನ ಪೀಳಿಗೆಗೆ ದಾರಿಯಾಗಬೇಕು ಎಂದು ನುಡಿದರು.
ಮಾರ್ಗ ಸೂಚಿ
2021 ಡಿಸೆಂಬರ್ 2021 ಮಾನವಸಹಿತ ಗಗನಯಾನ ಮಾಡಲಾಗುವುದು ಭಾರತದ ಮಾನವ ಸಹಿತ ಗಗನಯಾನ ಕಾರ್ಯಕ್ರಮ ಮಾರ್ಗಸೂಚಿಯಾಗಲಿದೆ. 1965 ರಲ್ಲಿ ಮೊದಲ ಮಾನವ ಸಹಿತ ಗಗನಯಾನದಿಂದ ಈಗಿನವರೆಗೂ ಸಾಕಷ್ಟು ಪ್ರಯತ್ನಗಳು ನಡೆದಿವೆ, ಇನ್ನು ಸವಾಲುಗಳು ಇವೆ. ಇದಕ್ಕೆ ಎಲ್ಲರ ಸಹಾಯದಿಂದ ಯಶಸ್ವಿ ಗಗನಯಾನ ಮಾಡಬಹುದು ಎಂದು ಹೇಳಿದರು.
ಕೇಂದ್ರ ಸರ್ಕಾರದ ಮುಖ್ಯ ವಿಜ್ಞಾನ ಸಲಹೆಗಾರ ಕೆ ವಿಜಯ್ ರಾಘವನ್ ಮಾತನಾಡಿ, ಮಾನವ ಸಹಿತ ಗಗನಯಾನ ಸಾಧ್ಯವಿಲ್ಲದ ಕೆಲಸವಲ್ಲ. ಆದರೆ ಎಲ್ಲರ ಜೊತೆಗೆ ಕೆಲಸ ಮಾಡಿದರೆ ಈ ಕಾರ್ಯ ಯಶಸ್ವಿಯಾಗುತ್ತದೆ. ಅಲ್ಲದೆ, ಕಲ್ಪನಾ ಚಾವ್ಲಾ, ರಾಕೇಶ್ ಶರ್ಮ ಮಕ್ಕಳಿಗೆ ಸ್ಫೂರ್ತಿ ಎಂದು ತಿಳಿಸಿದರು.
ಜ.24 ವರೆಗೂ ನಗರದ ಖಾಸಗಿ ಹೋಟೆಲ್ ನಲ್ಲಿ ಇಸ್ರೋ, ಐಎಎ ಹಾಗೂ ಎ ಎಸ್ ಐ ಸಹಭಾಗಿತ್ವದಲ್ಲಿ ಮೂರು ದಿನಗಳ ಕಾಲ ಮಾನವ ಸಹಿತ ಗಗನಯಾನದ ಬಗ್ಗೆ ಚರ್ಚೆ ಮಂಥನ ನಡೆಯಲಿದೆ.ಚರ್ಚೆಯಲ್ಲಿ ಗಗನಯಾತ್ರಿಗಳು, ಖಗೋಳ ತಜ್ಞರು, ವಿಜ್ಞಾನಿಗಳು ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಭಾರತದ ವಿಜ್ಞಾನಿಗಳು ಮಾತ್ರವಲ್ಲದೆ, ರಷ್ಯಾ, ಅಮೆರಿಕಾಯಿಂದ ವಿಜ್ಞಾನಿಗಳು ಈ ಚರ್ಚೆಯಲ್ಲಿ ಭಾಗಿಯಾಗಲಿದ್ದಾರೆ.
ಈ ಸಂದರ್ಭದಲ್ಲಿ ಇಸ್ರೋ ಮಾಜಿ ಅಧ್ಯಕ್ಷರಾದ ಮಾಧವನ್ ನಾಯರ್, ರಾಧಾಕೃಷ್ಣನ್ ಹಾಗೂ ಕಿರಣ್ ಕುಮಾರ್, ವಿಜ್ಞಾನಿಗಳಾದ ಜಿನ್ ಮೈಕಲ್, ಪಿ. ಉನ್ನಿಕೃಷ್ಣನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








