ಅವತ್ತು ನಾನು ತಪ್ಪು ಮಾಡಿದೆ, ರಾಯಣ್ಣ ಬ್ರಿಗೇಡ್ ಇರಬೇಕಿತ್ತು :ಈಶ್ವರಪ್ಪ

ಹುಬ್ಬಳ್ಳಿ:

    ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ (ಆರ್‌ಸಿಬಿ) ಬ್ರಿಗೆಡ್‌ಗೆ ಸಂಬಂಧಿಸಿದಂತೆ ಅ.೨೦ ರಂದು ಬೆಳಗ್ಗೆ ೧೧ ಗಂಟೆಗೆ ಬಾಗಲಕೋಟೆಯ ಚರಂತಿಮಠ ಸಮಯದಾಯ ಭವನದಲ್ಲಿ ರಾಜ್ಯಮಟ್ಟದ ಬೃಹತ್ ಸಭೆ ಆಯೋಜಿಸಲಾಗಿದೆ.೩೫-೪೦ ಮಠಾಧೀಶರು ಭಾಗಿಯಾಗಲಿದ್ದು, ಅಂದೇ ಸಂಘಟನೆಯ ಬಗ್ಗೆ ಅಂತಿಮ ನಿರ್ಧಾರ ಹೊರಬೀಳಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

   ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ (ಆರ್‌ಸಿಬಿ) ಬ್ರಿಗೆಡ್ ಸ್ಥಾಪನೆಯ ಸಂಬಂಧ ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಉತ್ತರ ಕರ್ನಾಟಕದ ಭಾಗದ ವಿವಿಧ ಸಮುದಾಯಗಳ ಮುಖಂಡರ ಸಭೆಯ ಬಳಿಕ ಅವರು ಮಾತನಾಡಿದರು.
ಸಮಾಜದಲ್ಲಿ ನೊಂದವರ, ಶೋಷಿತರ, ಬಡವರ ಹಾಗೂ ಹಿಂದುಳಿದವರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಆರ್‌ಸಿಬಿ ಸ್ಥಾಪಿಸಲಾಗುತ್ತಿದೆ. ಇದಕ್ಕೆ ನಾಡಿನ ವಿವಿಧ ಮಠಾಧೀಶರು ಬೆನ್ನೆಲುಬಾಗಿ ನಿಂತಿದ್ದಾರೆ.

   ಜಾತ್ಯಾತೀತ, ಪಕ್ಷಾತೀತ ಮತ್ತು ರಾಜಕಿಯೇತರವಾಗಿ ಬ್ರಿಗೆಡ್ ಕೆಲಸ ಮಾಡಲಿದ್ದು, ಸಮಾಜ ವಿರೋಧಿ,  ವಿರೋಧಿಗಳ ವಿರುದ್ಧ ಕಾರ್ಯ ನಿರ್ವಹಿಸಲಿದೆ. ಅ.೨೦ರ ಸಭೆಯಲ್ಲಿ ಕೂಡಲ ಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಮಾದಲಿಂಗ ಮಹಾರಾಜರು, ಮಹಾಲಿಂಗರಾಯ ಸ್ವಾಮೀಜಿ ಸೇರಿದಂತೆ ೩೫ಕ್ಕೂ ಅಧಿಕ ಮಠಾಧೀಶರು ಭಾಗವಹಿಸಲಿದ್ದಾರೆ. ನಾಡಿನ ಮೂಲೆ ಮೂಲೆಯಿಂದ ೧೫೦೦ಕ್ಕೂ ಹೆಚ್ಚು ವಿವಿಧ ಸಮಾಜದ ಮುಖಂಡರು ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡಲಿದ್ದಾರೆ. ರಾಜ್ಯದಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮತ್ತು ಸಂಘಟನಾತ್ಮಕ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

   ಈ ಹಿಂದೆಯೂ ರಾಯಣ್ಣ ಬ್ರಿಗೇಡ್ ಸ್ಥಾಪನೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೆವು. ಆದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಅಮಿತ್ ಶಾ ಮೂಲಕ ಸಂಘಟನೆಯನ್ನು ಕೈಬಿಡುವಂತೆ ನನಗೆ ಸೂಚನೆ ಕೊಡಿಸಿದ್ದರು. ಆದರೆ, ಅಂದು ಸಂಘಟನೆಯನ್ನು ಕೈಬಿಟ್ಟು ತಪ್ಪು ಮಾಡಿದೆ ಎಂದು ಈಗ ಎನ್ನಿಸುತ್ತಿದೆ. ಹೀಗಾಗಿ ರಾಣಿ ಚನ್ನಮ್ಮ, ರಾಯಣ್ಣ ಬ್ರಿಗೆಡ್ ಕಾರ್ಯವನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದರು.

   ಅನ್ಯಾಯ, ಅಪ್ಪ-ಮಕ್ಕಳ ಸರ್ವಾಧಿಕಾರಿ ಧೋರಣೆ ಹಾಗೂ ಸ್ವಜನ ಪಕ್ಷಪಾತದಿಂದ ಬಿಜೆಪಿಯನ್ನು ಕಾಪಾಡಲು ಸ್ವಾತಂತ್ರö್ಯವಾಗಿ ಚುನಾವಣೆ ಎದುರಿಸಿದ್ದೆ. ಬಿಜೆಪಿ ಶುದ್ಧೀಕರಣ ಆಗಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಈಗ ಯಾರ ಮಾತನ್ನೂ ಕೇಳುವ ಪ್ರಶ್ನೆಯೇ ಇಲ್ಲ. ನಾಡಿನ ಹಿತ ಬಯಸುವ ಸಾಧು-ಸಂತರ ಮಾರ್ಗದರ್ಶನದಲ್ಲಿ ಬ್ರಿಗೆಡ್ ಆರಂಭಿಸುತ್ತೇವೆ. ರಾಜಕೀಯವಾಗಿ ನನಗೆ ಆದ ಮೋಸವನ್ನು ನಾಡಿನ ಜನ ಗಮನಿಸಿದ್ದಾರೆ. ಸರಿಯಾದ ಸಮಯಕ್ಕೆ ಉತ್ತರ ನೀಡಲಿದ್ದಾರೆ ಎಂದರು.

   ಮಾಜಿ ಸಂಸದ ಕೆ. ವೀರುಪಾಕ್ಷಪ್ಪ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಮಾಜಿ ಶಾಸಕ ರಘುಪತಿ ಭಟ್ಟ, ಬಂಜಾರ ಸಮಾಜದ ರಾಜ್ಯಾಧ್ಯಕ್ಷ ಪಾಂಡುರಂಗ ಪಮ್ಮಾರ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಅಹಿಂದ ನಾಯಕ ಮುಕುಡಪ್ಪ, ಮಾಜಿ ಮೇಯರ್ ಶಿವಾನಂದ ಮುತ್ತಣ್ಣವರ, ಹಸಿರೇ ಉಸಿರು ಸಂಘಟನೆಯ ಅಧ್ಯಕ್ಷ ವಿನೋದ ಇಳಕಲ್ಲ, ಸಿದ್ದಣ್ಣ ತೇಜಿ ಸೇರಿದಂತೆ ಅನೇಕರಿದ್ದರು.

Recent Articles

spot_img

Related Stories

Share via
Copy link
Powered by Social Snap