“ಮನೆಗೊಂದು ಮರ ಊರಿಗೊಂದು ವನ” : ರಾಜೇಂದ್ರ ಬಾದಾಮಿಕರ್

ತುಮಕೂರು

    “ಮನೆಗೊಂದು ಮರ ಊರಿಗೊಂದು ವನ” ಎಂಬ ಘೋಷಣೆಯಂತೆ ಪ್ರತಿಯೊಬ್ಬರೂ ತಮ್ಮ ಮನೆಯ ಆವರಣದಲ್ಲಿ ಒಂದೊಂದು ಸಸಿ ನೆಡಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ರಾಜೇಂದ್ರ ಬಾದಾಮಿಕರ್ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

     ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ತುಮಕೂರು ವಿಜ್ಞಾನ ಕೇಂದ್ರದ ಸಹಯೋಗದಲ್ಲಿಂದು ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಏರ್ಪಡಿಸಿದ್ದ “ವಿಶ್ವ ಪರಿಸರ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

     ಆಧುನಿಕತೆಯ ಹೆಸರಿನಲ್ಲಿ ಮನುಷ್ಯನ ಬೇಡಿಕೆ ಪೂರೈಸಲು ಪರಿಸರ ಇಂದು ವಿನಾಶದ ಅಂಚಿಗೆ ತಲುಪಿದೆ. ಪರಿಸರ ನಾಶದಿಂದ ದಿನದಿಂದ ದಿನಕ್ಕೆ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಮನುಷ್ಯನ ಸ್ವಾರ್ಥ ಬದುಕಿಗಾಗಿ ಅಕ್ರಮ ಮರುಳುಗಾರಿಕೆ, ಗಣಿಕಾರಿಕೆಯಿಂದ ನೀರಿನ ಮೂಲಗಳು ಬತ್ತಿ ಹೋಗುತ್ತಿವೆ. ಅವಶಕ್ಯತೆಗಿಂತ ಮೀತಿ ಮೀರಿ ಬಳಸುತ್ತಿರುವುದೇ ಪರಿಸರ ವಿನಾಶಕ್ಕೆ ಕಾರಣವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

     ತಂದೆ-ತಾಯಿಯರು ಮಕ್ಕಳನ್ನು ಪೋಷಿಸುವ ರೀತಿಯಲ್ಲಿ ಮರ-ಗಿಡಗಳನ್ನು ಪೋಷಿಸಿ ರಕ್ಷಿಸಬೇಕು ಎಂದರಲ್ಲದೆ ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೇ ನಿರಂತರ ಪರಿಸರ ಸಂರಕ್ಷಣೆಗಾಗಿ ಕ್ರಮಗಳನ್ನು ಕೈಗೊಂಡು ಹಸಿರು ಕ್ರಾಂತಿ ಮಾಡಿದರೆ ಮಾತ್ರ ಪರಿಸರ ದಿನಾಚರಣೆ ಸಾರ್ಥಕವಾಗುತ್ತದೆ. ಅಲ್ಲದೇ ಮುಂದಿನ ಪೀಳಿಗೆಗೆ ಪರಿಸರವನ್ನು ಕೊಡುಗೆಯಾಗಿ ನೀಡಬೇಕೆಂದರೆ ವಿದ್ಯಾರ್ಥಿಗಳು ಇಂದಿನಿಂದಲೇ ಮರಗಿಡಗಳನ್ನು ಬೆಳೆಸುವ ಜವಾಬ್ದಾರಿಯನ್ನು ಹೊರಬೇಕು ಎಂದು ಸಲಹೆ ನೀಡಿದರು.

      ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಆರ್.ಕಾಮಾಕ್ಷಿ ಅವರು ವಿದ್ಯಾರ್ಥಿಗಳು ಶಿಕ್ಷಣ ಕಲಿಕೆಗೆ ಕೊಟ್ಟ ಆದ್ಯತೆಯನ್ನು ಪರಿಸರ ಸಂರಕ್ಷಣೆಗೂ ನೀಡಬೇಕು. ವಿದ್ಯಾರ್ಥಿಗಳು ಮನೆ/ಶಾಲೆ ಆವರಣದಲ್ಲಿರುವ ಮರಗಿಡಗಳನ್ನು ಸಂರಕ್ಷಸಬೇಕು ಎಂದರಲ್ಲದೇ ಮರಗಿಡಗಳನ್ನು ಕಡಿದು ನಾಶ ಮಾಡುವುದರಿಂದ ಪ್ರಕೃತಿಯಲ್ಲಿ ಉಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ಎಲೈಟ್ ಈಝಿ ಎಜುಕೇಷನ್ ನಿರ್ದೇಶಕ ಡಾ|| ಟಿ.ಎನ್ ಚಂದ್ರಕಾಂತ ಉಪನ್ಯಾಸ ನೀಡುತ್ತಾ ಪರಿಸರ ಸಂರಕ್ಷಣೆ ನಮ್ಮೆಲ್ಲರ ಧ್ಯೇಯವಾಗಬೇಕು. ಸಾಮಾಜಿಕ ಜವಾಬ್ದಾರಿ ಅರಿತು ಕೆಲಸ ಮಾಡುವುದರೊಂದಿಗೆ ಜನರು ಜಾಗೃತರಾಗಬೇಕು. ಜನರು ಪ್ರಕೃತಿ ಮೇಲೆ ಮಾಡುತ್ತಿರುವ ಹಾನಿ ನಿಲ್ಲಬೇಕು. ನೀರನ್ನು ಮಿತವಾಗಿ ಬಳಸಬೇಕಲ್ಲದೆ, ವ್ಯರ್ಥ ಮಾಡದೇ ಸದ್ಬಳಕೆ ಮಾಡಿಕೊಳ್ಳಬೇಕು. ಪ್ರತಿಯೊಬ್ಬರೂ ಪರಿಸರದ ಅಗತ್ಯತೆ, ಕಾಳಜಿ ಅರಿವನ್ನು ಹೊಂದಿರುವುದರ ಜೊತೆಗೆ ಪರಿಸರಕ್ಕೆ ನಮ್ಮಿಂದ ಏನಾದರೂ ಕೊಡುಗೆ ನೀಡಬೇಕೆಂದು ಪಣ ತೊಟ್ಟು ಪರಿಸರವನ್ನು ಕಾಪಾಡಬೇಕು ಎಂದು ತಿಳಿಸಿದರು.

      ಇದಕ್ಕೂ ಮುನ್ನ ಬೆಳಿಗ್ಗೆ 8 ಗಂಟೆಗೆ ನಗರದ ಟೌನ್ ಹಾಲ್ ವೃತ್ತದಿಂದ ಕನ್ನಡ ಸಾಹಿತ್ಯ ಪರಿಷತ್‍ವರೆಗೆ “ಪರಿಸರ ಜಾಥಾ” ಕಾರ್ಯಕ್ರಮಕ್ಕೆ ತುಮಕೂರು ವಿಜ್ಞಾನ ಕೇಂದ್ರದ ಸಿ. ವಿಶ್ವನಾಥ ಚಾಲನೆ ನೀಡಿದರು. ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರದ ಜೊತೆಗೆ ಒಂದೊಂದು ಗಿಡವನ್ನು ವಿತರಣೆ ಮಾಡುವ ಗಿಡದ ಸಂರಕ್ಷಣೆ ಮಾಡುವ ಜವಾಬ್ದಾರಿಯನ್ನು ಮನವರಿಕೆ ಮಾಡಿದರು.

      ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ದಶರಥ, ಪರಿಸರ ಅಧಿಕಾರಿ ಎಸ್.ಕೆ. ಭೀಮ್‍ಸಿಂಗ್ ಗೌಗಿ, ನಿವೃತ್ತ ಪ್ರಾಂಶುಪಾಲ ಕುಮಾರಸ್ವಾಮಿ, ಮಧುಸೂದನ ಸೇರಿದಂತೆ ವಿದ್ಯಾಥಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap