ಚಿತ್ರದುರ್ಗ:
ಜಗತ್ತಿನಲ್ಲಿ ಮನುಕುಲ ಉಳಿಯಲು ಇರುವುದೊಂದೇ ಭೂಮಿ ಅದನ್ನು ಎಲ್ಲರೂ ಕಾಪಾಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾ ಸತ್ರ ನ್ಯಾಯಾಧೀಶರಾದ ಎಸ್.ಬಿ. ವಸ್ತ್ರಮಠ ಹೇಳಿದರು.
ನಗರದ ತ.ರಾ.ಸು ರಂಗಮಂದಿರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ವಕೀಲರ ಸಂಘ, ಸರ್ಕಾರಿ ವಿಜ್ಞಾನ ಕಾಲೇಜು, ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ, ಬಾಪೂಜಿ ವಿದ್ಯಾ ಸಂಸ್ಥೆ, ವೆಂಕಟೇಶ್ವರ ಶಿಕ್ಷಣ ಕಾಲೇಜು, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಚಿತ್ರದುರ್ಗ ವಿಜ್ಞಾನ ಕೇಂದ್ರ, ಬ್ರಹ್ಮ ಕುಮಾರಿ ಈಶ್ವರಿ ಸಂಸ್ಥೆ, ರೋಟರಿ ಇನ್ನರವ್ಹೀಲ್, ಲಯನ್ಸ ಕ್ಲಬ್, ವಾಸವಿ ಮಹಿಳ ಸಂಘ ಹಾಗೂ ಸೃಷ್ಟಿ ಸಾಗರ ಪ್ರಕಾಶನ ಇವರ ಸಹಯೋಗದಲ್ಲಿ ವಿಶ್ವ ಭೂ ದಿನದ ಅಂಗವಾಗಿ ‘ಇರುವುದೊಂದೇ ಭೂಮಿ, ರಕ್ಷಿಸಿಕೊಳ್ಳೋಣ’ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭೂಮಿಯು ಪ್ರಪಂಚದಲ್ಲಿ ಇರುವ ಅಪಾರ ಸಂಖ್ಯೆಯ ಜನರ ಭಾರವನ್ನು ಹೊತ್ತು, ನಿಂತಿದೆ. ಭೂಮಿಯ ಮೇಲೆ ಹಲವು ಬಗೆಯ ಜೀವಕುಲ, ಭಾಷೆ ವಿಕಸನಗೊಂಡಿದ್ದು, ಇಂತಹ ಭೂಮಿ ತಾಯಿಯನ್ನು ರಕ್ಷಿಸುವ ಕಾರ್ಯ ಆಗಬೇಕು. ಭೂಮಿಯ ಮೇಲಿನ ಹಸಿರು ನಾಶವಾಗುತ್ತಿರುವುದರಿಂದ ಭೂಮಿ ವಿನಾಶದತ್ತ ಸಾಗುತ್ತಿದೆ, ಅಲ್ಲದೆ ಮನುಷ್ಯ ಸಂಕುಲ ನಾನಾ ಬಗೆಯ ಸಂಕಷ್ಟಕ್ಕೆ ಈಡಾಗುತ್ತಿದೆ ಎಂದು ಹೇಳಿದರು.
ಮಾನವನು ತನ್ನ ಸ್ವಾರ್ಥಕ್ಕಾಗಿ ಭೂಮಿಯ ಮೇಲಿರುವ ಮರ-ಗಿಡಗಳನ್ನು ಕಡಿದು ಪರಿಸರವನ್ನು ನಾಶ ಮಾಡುತ್ತಿರುವುದರಿಂದ ಅಂತರ್ಜಲ ಕುಸಿಯುತ್ತಿದೆ, ಕುಡಿಯುವ ನೀರಿಗಾಗಿ ಸಾವಿರ ಅಡಿ ಆಳದವರೆಗೆ ಬೋರ್‍ವೆಲ್ ಕೊರೆಯಿಸಿದರು ನೀರು ದೊರಕುತ್ತಿಲ್ಲ. ಇದರಿಂದ ಪರಿಸರವು ನಾಶವಾಗಿ ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ, ಮನೆಗಳಿಗೆ ಬರುತ್ತಿವೆ ಎಂದು ಹೇಳಿದರು.ಭೂಮಿಯನ್ನು ನಾಶ ಮಾಡದೆ, ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ಮರ-ಗಿಡಗಳನ್ನು ಬೆಳಸಿ ಪರಿಸರವನ್ನು ಉಳಿಸಿ ಭೂಮಿಯನ್ನು ರಕ್ಷಿಸಬೇಕು ಎಂದು ಎಸ್.ಬಿ. ವಸ್ತ್ರಮಠ ಅವರು ಹೇಳಿದರು.
ಸಿವಿಲ್ ನ್ಯಾಯಾಧೀಶ ಎಸ್.ಆರ್. ದಿಂಡಲಕೊಪ್ಪ ಮಾತನಾಡಿ, ಮನುಷ್ಯನ ಐಷರಾಮಿ ಜೀವನ ಶೈಲಿಯಿಂದ ಪರಿಸರ ನಾಶವಾಗತ್ತಿದೆ. ಮನುಷ್ಯನು ತನ್ನ ಐಷರಾಮಿ ಜೀವನ ನಡೆಸಲು ಕಾಡಿನಲ್ಲಿರುವ ಮರಗಳನ್ನು ಕಡಿದು ತನ್ನ ಮನೆಗಳಿಗೆ ಮುಟ್ಟುಗಳನ್ನಾಗಿ ಬಳಸುತ್ತಿದ್ದಾನೆ. ಅಲ್ಲದೆ ಮನೆ, ಕಟ್ಟಡಗಳ ನಿರ್ಮಾಣಕ್ಕೆ ಕೃಷಿ ಭೂಮಿಯನ್ನು ಇಲ್ಲವಾಗಿಸಿ ಪರಿಸರವನ್ನು ನಾಶ ಪಡಿಸುತ್ತಿದ್ದಾನೆ. ಪರಿಸರ ನಾಶದಿಂದ ಅಗತ್ಯ ಕುಡಿಯುವ ನೀರು ಸಿಗುತ್ತಿಲ್ಲ.
ಲಭ್ಯುವಿರುವ ನೀರು ಕಲುಷಿತಗೊಂಡು ಮಾನವನಿಗೆ ಹಲವಾರು ರೋಗಗಳು ಬಂದು ಕಾಯಿಲೆಗೆ ಬಲಿಯಾಗುತ್ತಿದ್ದಾರೆ, ಇದರಿಂದಾಗಿ ಪ್ರಸ್ತುತ ಮಾನವ ಔಷಧಿಗಳ ಮೇಲೆ ಹೆಚ್ಚು ಅವಲಂಬಿತನಾಗಿದ್ದಾನೆ ಎಂದು ಹೇಳಿದರು.ಪ್ರತಿಯೊಬ್ಬರು ಪ್ರತಿ ದಿನವು ದೈನಂದಿನ ಬಳಕೆಗಾಗಿ ಅಗತ್ಯ ವಸ್ತುಗಳನ್ನು ಬಳಸಿ ರಸ್ತೆಯ ಬದಿಗಳಲ್ಲಿ ಎಸೆಯುತ್ತಾರೆ, ಅದರಿಂದ ಪರಿಸರವು ಹದಗೆಡುತ್ತಿದೆ. ಇನ್ನಾದರೂ ಸಾರ್ವಜನಿಕರು ಎಚ್ಚೆತ್ತುಕೊಂಡು ಗಿಡಗಳನ್ನು ಬೆಳೆಸಿ, ಪರಿಸರವನ್ನು ಸಂರಕ್ಷಿಸಿ ಅಂತರ್ಜಲವನ್ನು ಉಳಿಸಬೇಕು ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಎನ್.ಬಿ ವಿಶ್ವನಾಥ ಮಾತನಾಡಿ ಹೆತ್ತ ತಾಯಿಯನ್ನು ಗೌರವಿಸಬೇಕು. ಅದೇ ರೀತಿ ನಮ್ಮ ಭಾರ ಹೊರುವ ತಾಯಿಯನ್ನೂ ರಕ್ಷಿಸಬೇಕು. ಮನುಷ್ಯ ಉಸಿರು ಇರುವಾಗಲೂ ಭೂಮಿಯ ಮೇಲಿದ್ದು, ಸತ್ತ ಮೇಲೂ ಭೂಮಿ ತಾಯಿಯ ಮಡಿಲನ್ನೇ ಸೇರುತ್ತೇವೆ. ಹೀಗಾಗಿ ಭೂ ತಾಯಿಯ ಬಗ್ಗೆ ತಾತ್ಸಾರ ಮಾಡಬಾರದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಡಾ. ಹೆಚ್.ಕೆ.ಎಸ್. ಸ್ವಾಮಿ ಮತ್ತು ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಅಧ್ಯಕ್ಷೆ ಶಿವರಶ್ಮಿ ಅಕ್ಕ, ರೋಟರಿ ಇನ್ನರ ವ್ಹೀಲ್ ಪೋರ್ಟ್ ಅಧ್ಯಕ್ಷೆ ಕೆ.ಬಿ. ಶೈಲಾ ವಿಶ್ವನಾಥ್, ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಕೆ.ಕೆ. ಕಮಾನಿ ಹಾಗೂ ಎಸ್.ಆರ್.ಎಸ್ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.ಸಮಾರಂಭಕ್ಕೂ ಮುನ್ನ ಜಿಲ್ಲಾಧಿಕಾರಿಗಳ ಕಚೇರಿಯಿಂದ ತ.ರಾ.ಸು ರಂಗಮಂದಿರದ ವರೆಗೆ ಜಾಗೃತಿ ಜಾಥಾ ನಡೆಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ