ಗುತ್ತಲ:
ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೇಂದ್ರೀಯ ಮೀಸಲು ಭದ್ರತಾ ಪಡೆಯ ಯೋಧರಿಂದ ಗುತ್ತಲದಲ್ಲಿ ಹಾವೇರಿ ಗ್ರಾಮೀಣ ಸಿಪಿಐ ಬಾಸು ಚವ್ಹಾಣ ಅವರ ನೇತೃತ್ವದಲ್ಲಿ ಪಥಸಂಚಲನ ಶನಿವಾರ ಮುಂಜಾನೆ ನಡೆಯಿತು.
ಪಟ್ಟಣದ ಪೋಲಿಸ್ ಠಾಣೆಯ ಆವರಣದಿಂದ ಆರಂಭವಾದ ಪಥಸಂಚಲನ ಶ್ರೀ ರುದ್ರಮುನಿ ಶಿವಯೋಗಿಶ್ವರ ವೃತ್ತ, ವಡ್ಡರ ಓಣಿ, ದ್ಯಾಮವ್ವನ ಗುಡಿ ಓಣಿ, ಬನಶಂಕರಿ ಗುಡಿ ಓಣಿ, ಅಜ್ಜಯ್ಯನಮಠ, ವೀರಭದ್ರೇಶ್ವರ ದೇವಸ್ಥಾನ, ಕಾಗಿನೆಲ್ಲಿಯವರ ಓಣಿ, ಪ್ಯಾಟಿ ಬಸವೇಶ್ವರ ದೇವಸ್ಥಾನ, ಎಲಿಪೇಟೆ, ಪಟ್ಟಣ ಪಂಚಾಯತಿ ವೃತ್ತ, ಮಾಲತೇಶ ನಗರ, ಚಿದಂಬರ ನಗರ, ಸಿದ್ದೇಶ್ವರ ದೇವಸ್ಥಾನ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪೋಲಿಸ್ ಠಾಣೆಯ ಆವರಣದಲ್ಲಿ ಮುಕ್ತಾಯಗೊಂಡಿತು.
ಇದೆ ಸಂದರ್ಭದಲ್ಲಿ ಹಾವೇರಿ ಗ್ರಾಮೀಣ ಸಿಪಿಐ ಬಾಸು ಚವ್ಹಾಣ ಮಾತನಾಡಿ, ಚುನಾವಣೆಯ ಹಿನ್ನಲೆಯಲ್ಲಿ ಭದ್ರತೆಯ ಕುರಿತು ಜಾಗೃತಿ ಮೂಡಿಸಲು ಪಥಸಂಚಲನವನ್ನು ಹಮ್ಮಿಕೊಳ್ಳಲಾಯಿತು. ಯಾವುದೇ ರೀತಿಯ ಅಕ್ರಮಗಳು ಕಂಡುಬಂದಲ್ಲಿ ಕಾನೂನು ರೀತಿಯ ಕ್ರಮಗಳನ್ನು ಜರುಗಿಸಲಾಗುವುದು. ಭದ್ರತೆಯ ದೃಷ್ಟಿಯಿಂದ ಮತದಾರರು ಸರಕಾರಿ ಅಧಿಕಾರಿಗಳೋಂದಿಗೆ ಸಹಕರಿಸಬೇಕು ಎಂದರು. ಇದೇ ರೀತಿ ಗುತ್ತಲ ಪೋಲಿಸ್ ಠಾಣಾ ವ್ಯಾಪ್ತಿಯ ಗುತ್ತಲ ಪಟ್ಟಣ, ಕನವಳ್ಳಿ, ಬಸಾಪುರ, ಹೊಸರಿತ್ತಿ ಗ್ರಾಮಗಳಲ್ಲಿ ಕೇಂದ್ರೀಯ ಭದ್ರತಾ ಮೀಸಲು ಪಡೆಯಿಂದ ಪಥಸಂಚಲನವನ್ನು ನಡೆಸಲಾಯಿತು ಎಂದು ಹೇಳಿದರು.
ಪಥಸಂಚಲನದಲ್ಲಿ: ಕೇಂದ್ರಿಯ ಭದ್ರತಾ ಮೀಸಲು ಪಡೆಯ ಅಧಿಕಾರಿಗಳು , ಗುತ್ತಲ ಪಿಎಸ್‍ಐ ಸಿದ್ದಾರೂಢ ಬಡಿಗೇರ, ಎಎಸ್‍ಐ ಎಮ್.ಕೆ ಸೊರಟೂರ, ಸಿಬ್ಬಂದಿಯಾದ ಬಸವರಾಜ ಗೋನಾಳ, ಉಮೇಶ ಕೆಂಚನಗೌಡ್ರ, ಮಾಲತೇಶ ದೊಡಮನಿ, ಮಹೇಶ ಎಮ್. ಹಾಗೂ ಕೇಂದ್ರಿಯ ಭದ್ರತಾ ಮೀಸಲು ಪಡೆಯ ಸಿಬ್ಬಂದಿ ಮತ್ತು ಪೊಲೀಸ ಸಿಬ್ಬಂದಿಗಳಿದ್ದರು.