ಮರುಕಳಿಸುತ್ತಿದೆಯಾ ಯುಜಿಡಿ ಸಮಸ್ಯೆ ?

ಕಾಮಗಾರಿ ವೇಳೆ ಒಡೆಯುತ್ತಿವೆ ಒಳಚರಂಡಿ ಪೈಪುಗಳು

ತುಮಕೂರು

ವಿಶೇಷ ವರದಿ:ರಾಕೇಶ್.ವಿ.

      ನಗರದಲ್ಲಿ ಒಳಚರಂಡಿ ಪೈಪುಗಳು ದುಸ್ಥಿತಿಗೊಂಡಿದ್ದು, ಕುಡಿಯುವ ನೀರಿನ ಪೈಪುಗಳಿಗೆ ಚರಂಡಿ ನೀರು ಸೇರಿಕೊಂಡು ಹೊಸ ಸಮಸ್ಯೆಯೊಂದು ಸೃಷ್ಟಿಯಾಗಲಿದೆಯಾ? ಯುಜಿಡಿ ಸಮಸ್ಯೆ ಮರುಕಳಿಸುತ್ತಿದೆಯಾ ಎಂಬ ಸಂಶಯವೊಂದು ನಾಗರಿಕ ವಲಯದಲ್ಲಿ ಕೇಳಿ ಬರುತ್ತಿದೆ.

      ನಗರದಲ್ಲಿ ಸ್ಮಾರ್ಟ್ ಸಿಟಿ, ಮಹಾನಗರ ಪಾಲಿಕೆ, ಕರ್ನಾಟಕ ನೀರು ಸರಬರಾಜು ಮಂಡಳಿಯ ವತಿಯಿಂದ ಕೆಲ ಕಾಮಗಾರಿಗಳು ನಡೆಯುತ್ತಿದ್ದು, ಇಲ್ಲಿ ಶೇ.30ರಷ್ಟು ಜನ ಮಾಡಬೇಕಾದ ಕೆಲಸವನ್ನು ಕೇವಲ ಒಬ್ಬ ವ್ಯಕ್ತಿ ಬೃಹತ್ತಾದ ಮಷಿನ್‍ಗಳನ್ನು ಹೊಂದಿರುವ ಜೆಸಿಬಿ ಮೂಲಕ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾನೆ. ಇದರಿಂದ ಅನೇಕ ಯುಜಿಡಿ ಪೈಪುಗಳು ಒಡೆಯುತ್ತಿವೆ. ಕುಡಿಯುವ ನೀರಿನ ಪೈಪುಗಳು ಒಡೆಯುತ್ತಿದೆ. ಇದರಿಂದ ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣವಾಗುತ್ತಿರುವುದು ನಾಗರಿಕರಲ್ಲಿ ಹೊಸ ಸಮಸ್ಯೆಯಾಗಿ ಪರಿಣಮಿಸುತ್ತಿದೆ.

       1998ರಲ್ಲಿ ಕರ್ನಾಟಕ ಅರ್ಬನ್ ಇನ್‍ಫ್ರಾಸ್ಟ್ರಕ್ಚರ್ ಫೈನಾನ್ಸಿಯಲ್ ಡೆವಲಪ್‍ಮೆಂಟ್ ಕಾರ್ಪೋರೇಷನ್‍ನಿಂದ ರಿಂಗ್‍ರಸ್ತೆ ನಿರ್ಮಾಣ, ಬೆಸ್ಕಾಂ ಲೈನ್ ಅಭಿವೃದ್ಧಿ, ಕೈಗಾರಿಕಾ ತರಬೇತಿ ಸಂಸ್ಥೆಗಳ ಅಭಿವೃದ್ಧಿ, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಯುಜಿಡಿ ಕಾಮಗಾರಿ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಮಾಡಲಾಗಿತ್ತು.

       ಈ ಕಾಮಗಾರಿಗಳಿಗೆ ಮುಖ್ಯಸ್ಥರಾಗಿ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಗೋಪಾಲಕೃಷ್ಣಗೌಡರು ಸೇವೆ ಸಲ್ಲಿಸಿದ್ದು, ಏಷಿಯನ್ ಡೆವಲಪ್‍ಮೆಂಟ್ ಬ್ಯಾಂಕ್‍ಗೆ ಅನುಕಂಪದ ದೃಷ್ಠಿಯಲ್ಲಿ ಸಾಲ ತೆಗೆದುಕೊಂಡಿತ್ತು. ಅಂದು ಈ ಕಾಮಗಾರಿಗಳ ನೆಪದಲ್ಲಿ ರಸ್ತೆಗಳನ್ನು ಅಗೆದು ಸಾಕಷ್ಟು ತೊಂದರೆಗಳು ಉಂಟಾಗಿದ್ದವು. ಅಂದಿನ ಕಂಟ್ರಾಕ್ಟರ್‍ಗಳಿಗೆ ಮುಂದಿನ ದಿನದಲ್ಲಿ ಮಾಡಬೇಕಾದ ಕೆಲಸ ಕಾರ್ಯಗಳ ಬಗ್ಗೆ ಇಚ್ಛಾಶಕ್ತಿ ಇಲ್ಲದೆ, ಕಾಮಗಾರಿಗಳು ಕಳಪೆಯಾಗಿದ್ದವು. ಇದೀಗ ಮತ್ತೊಮ್ಮೆ ರಸ್ತೆಗಳನ್ನು ಅಗೆದು ಕಾಮಗಾರಿಗಳನ್ನು ಮಾಡಲಾಗುತ್ತಿದ್ದು, ಈ ಕಾಮಗಾರಿಗಳು ಕೂಡ ಕಳಪೆಯಾಗಲಿವೆಯಾ ಎಂಬ ಸಂಶಯವೊಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ನಿಧಾನಗತಿಯಲ್ಲಿ ಸಾಗುತ್ತಿರುವ ಕಾಮಗಾರಿ

     ನಗರದಲ್ಲಿ ಗುಂಡಿಗಳನ್ನು ಜೆಸಿಬಿ ಮೂಲಕ ತೆಗೆಯಲಾಗುತ್ತಿದ್ದು, ಒಮ್ಮೆ ಗುಂಡಿ ತೆಗೆದು ಹೋದ ಜೆಸಿಬಿಯು ಮತ್ತೆ ಪ್ರತ್ಯಕ್ಷವಾಗುವುದು ಸರಿಸುಮಾರು ಎಂಟತ್ತು ದಿನಗಳ ನಂತರ. ಮನೆಗಳ ಮುಂಭಾಗದಲ್ಲಿ ಹಾಕಲಾಗುವ ಮಣ್ಣಿನಿಂದ ಆ ಮನೆಯ ವಾಹನಗಳನ್ನು ನಿಲ್ಲಿಸಿಕೊಳ್ಳಲು ಆಗುತ್ತಿಲ್ಲ. ಜೊತೆಗೆ ಓಡಾಡಲು ಅನುಕೂಲವಾಗುತ್ತಿಲ್ಲ. ಕೆಲ ಕಡೆಗಳಲ್ಲಿ ರಸ್ತೆ ಕಿರಿದಾಗಿರುತ್ತದೆ. ಅಂತಹ ಕಡೆ ಗುಂಡಿ ಅಗೆದು ಮಣ್ಣನ್ನು ಪಕ್ಕದಲ್ಲಿಯೇ ಹಾಕುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಒಂದು ಕಾಮಗಾರಿ ಹಿನ್ನೆಲೆಯಲ್ಲಿ ತೆಗೆದ ಗುಂಡಿಗಳನ್ನು ಬೇಗ ಮುಚ್ಚದೇ ಇರುವುದರ ಜೊತೆಗೆ ಈ ಕಾಮಗಾರಿಯ ಕೆಲಸವೂ ನಿಧಾನಗತಿಯಲ್ಲಿ ಸಾಗುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ವ್ಯರ್ಥವಾದ ಯುಜಿಡಿ ಚೇಂಬರ್‍ಗಳು

      ನಗರದಲ್ಲಿ 2000ನೇ ಇಸ್ವಿಯಲ್ಲಿ ಯುಜಿಡಿ ಕಾಮಗಾರಿ ನಡೆಸಿದ್ದು, ಅಂದು ರಸ್ತೆಯ ಮಧ್ಯಭಾಗದಲ್ಲಿ ಯುಜಿಡಿ ಚೇಂಬರ್‍ಗಳನ್ನು ನಿರ್ಮಾಣ ಮಾಡಲಾಗಿತ್ತು. ಆ ವೇಳೆಯಲ್ಲಿ ಮುಂಬರುವ ಸಮಸ್ಯೆಗಳ ಬಗ್ಗೆ ಮುಂದಾಲೋಚನೆ ಮಾಡದೆ ರಸ್ತೆ ಮಧ್ಯಭಾಗದಲ್ಲಿ ಮಾಡಲಾಗಿತ್ತು. ಅವುಗಳು ಇಂದು ಕುಸಿಯುತ್ತಿವೆ. ಚರಂಡಿ ನೀರು ಸರಾಗವಾಗಿ ಹರಿಯದೆ ಮೇಲಕ್ಕೆ ಉಕ್ಕುತ್ತಿದೆ. ನಗರದ ಮೂಲೆಮೂಲೆಗಳಲ್ಲಿ ಯುಜಿಡಿ ಉಕ್ಕಿ ಹರಿಯುವ ನಿದರ್ಶನಗಳು ಸಾಕಷ್ಟು ಕಂಡು ಬರುತ್ತಿವೆ.

ಮೂರನೇ ವ್ಯಕ್ತಿಯಿಂದ ಆಗದ ತನಿಖೆ ?

      ಸರ್ಕಾರದ ಕಾಮಗಾರಿಗಳು ನಡೆಯುವಾಗ ಕಂಟ್ರ್ಯಾಕ್ಟರ್ ಜೊತೆಗೆ ಅಧಿಕಾರಿಗಳು ಮಾಡುವ ತನಿಖೆಯ ಜೊತೆಗೆ ಮೂರನೇ ವ್ಯಕ್ತಿ ತನಿಖೆ ನಡೆಸಬೇಕು. ಆದರೆ ಇತ್ತೀಚೆಗೆ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಬೇಕಾದ ವ್ಯಕ್ತಿ ಹಣ ಪಡೆದುಕೊಂಡು ಉತ್ತಮವಾಗಿದೆ ಎಂದು ವರದಿ ನೀಡಲಾಗುತ್ತಿದೆ. ನಿಜಕ್ಕೂ ಅಲ್ಲಿ ಕಾಮಗಾರಿಯ ಪರಿಶೀಲನೆ ನಡೆದಿದೆಯಾ? ಇಲ್ಲವಾ ಎಂಬುದು ಯಾರಿಗೂ ತಿಳಿಯುವುದಿಲ್ಲ. ಕೇವಲ ಉತ್ತಮ ಕಾಮಗಾರಿ ನಡೆದಿದೆ ಎನ್ನುವಂತೆ ವರದಿಗಳನ್ನು ನೀಡಲಾಗುತ್ತಿದೆ. ಆ ಕಾಮಗಾರಿಗಳು ಕೆಲವೇ ದಿನಗಳಲ್ಲಿ ಕಳಪೆಯಾಗಿ ಹೊರಹೊಮ್ಮಿ, ಮಾಡಿದ ಕಾಮಗಾರಿಯನ್ನೇ ಮತ್ತೆ ಮತ್ತೆ ಮಾಡುವಂತಾಗಲಿವೆ ಎಂಬುದು ನಾಗರಿಕರ ಮಾತಾಗಿದೆ.

ಕಾಮಗಾರಿ ವೀಕ್ಷಣೆ ಮಾಡದ ಸ್ಮಾರ್ಟ್ ಸಿಟಿ ಅಧಿಕಾರಿಗಳು ?

       ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಕಾಮಗಾರಿ ಪ್ರಾರಂಭವಾಗಿ ಈಗಾಗಲೇ ಒಂದೂ ವರ್ಷ ಆಗುತ್ತಾ ಬಂದಿದೆ. ಆದರೂ ಕಾಮಗಾರಿಗಳು ಎಷ್ಟರ ಮಟ್ಟಿಗೆ ನಡೆಯುತ್ತಿವೆ ಎಂಬುದರ ಬಗ್ಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಕಾಮಗಾರಿ ವೀಕ್ಷಣೆ ಮಾಡುತ್ತಿಲ್ಲ. ಮೂರು ತಿಂಗಳಿಗೊಮ್ಮೆ ಬಂದು ಎಲ್ಲೋ ಒಂದು ಕಡೆ ಮಾತ್ರ ವೀಕ್ಷಣೆ ಮಾಡಿ ಹೋಗುತ್ತಾರೆ ಹೊರತು ಎಲ್ಲಾ ಕಾಮಗಾರಿಗಳನ್ನು ವೀಕ್ಷಣೆ ಮಾಡುವುದಿಲ್ಲ. ಇದರಿಂದ ಜನರಿಗೆ ಆಗುತ್ತಿರುವ ಸಮಸ್ಯೆ ಏನು ಎಂಬುದು ಅಧಿಕಾರಿಗಳಿಗೆ ತಿಳಿಯುತ್ತಿಲ್ಲ ಎಂಬುದು ಕೆಲ ನಾಗರಿಕರ ವಾದವಾಗಿದೆ.

ಮಾಹಿತಿಯ ಕೊರತೆ

      ಕಾಮಗಾರಿ ಮಾಡಲು ಆದೇಶ ನೀಡಿದ್ದು ಯಾವಾಗ? ಈ ಕಾಮಗಾರಿ ಎಷ್ಟು ದಿನಗಳೊಳಗೆ ಪೂರ್ಣವಾಗಬೇಕು ಎಂಬ ಯಾವುದರ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ. ಸ್ಮಾರ್ಟ್ ಸಿಟಿ ಅಧಿಕಾರಿಗಳು ಪಾಲಿಕೆ ಸದಸ್ಯರ ಕಮಿಟಿಯನ್ನು, ಬುದ್ದಿಜೀವಿಗಳನ್ನು, ನಾಗರಿಕರನ್ನು ಒಂದೆಡೆ ಸೇರಿಸಿ ಸಭೆ ಮಾಡಬೇಕು. ಕಾಮಗಾರಿ ವಿಚಾರದಲ್ಲಿ ಆಗಬಹುದಾದ ಕಷ್ಟನಷ್ಟಗಳನ್ನು ತಿಳಿಸಬೇಕು. ಇದರಿಂದ ನಾಗರಿಕರ ಸಹಕಾರದೊಂದಿಗೆ ಕಾಮಗಾರಿ ಪೂರ್ಣಮಾಡಲು ಅನುಕೂಲವಾಗಲಿದೆ ಎಂಬುದು ನಾಗರಿಕರ ಸಲಹೆ.

ಎಲ್ಲಾ ಲೈನ್‍ಗಳನ್ನು ಒಮ್ಮೆ ಮಾಡಲಿ

     ಗ್ಯಾಸ್‍ಲೈನ್ ಕಾಮಗಾರಿ ನೆಪದಲ್ಲಿ ಕಳೆದ ವರ್ಷ ಅಗೆದು ಸುಮಾರು 8 ತಿಂಗಳು ಹಾಗೇ ಬಿಟ್ಟಿದ್ದರು. ಇದರಿಂದ ಧೂಳು ತುಂಬಿಕೊಂಡು ಹಿರಿಯ ನಾಗರಿಕರು ಓಡಾಡಲು ಆಗದೆ ಪರಿತಪಿಸುವಂತಾಗಿತ್ತು. ಇತ್ತೀಚೆಗೆ ಅದನ್ನು ಮುಚ್ಚಲಾಯಿತಾದರೂ ಅದನ್ನು ಸಂಪೂರ್ಣವಾಗಿ ಪ್ಯಾಚ್ ವರ್ಕ್ ಮಾಡಿಲ್ಲ. ಜೊತೆಗೆ ಇತ್ತೀಚೆಗೆ ಬೆಸ್ಕಾಂ ಲೈನ್ ಎಂದು ಒಮ್ಮೆ ಹಳ್ಳ ತೋಡಿದರೆ, ಇನ್ನೊಮ್ಮೆ ಖಾಸಗಿ ಇಂಟರ್‍ನೆಟ್ ಲೈನ್ ಎಂದು ಅಗೆಯಲಾಗುತ್ತಿದೆ. ಒಮ್ಮೆಲೆ ಈ ಕಾಮಗಾರಿಗಳನ್ನು ಮಾಡಿದರೆ ಕೆಲಸ ಸುಲಭವಾಗುತ್ತದೆ ಎನ್ನುತ್ತಾರೆ ಹಿರಿಯ ಬುದ್ದಿಜೀವಿಗಳು.

ಕಟ್ಟುನಿಟ್ಟಾಗಿ ಕಾಮಗಾರಿ ನಡೆಸಲಾಗುತ್ತದೆ

     ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ತುಮಕೂರು ನಗರದಲ್ಲಿ ಅಮೃತ ಯೋಜನೆಯಡಿಯಲ್ಲಿ ಒಟ್ಟು 823 ಕಿಮೀ ಉದ್ದ 24 ಗಂಟೆಗಳ ಕುಡಿಯುವ ನೀರಿನ ಪೈಫ್‍ಲೈನ್ ಕಾಮಗಾರಿ ನಡೆಯುತ್ತಿದೆ. ಈಗಾಗಲೇ 415 ಕಿ.ಮೀ ಉದ್ದ ಈ ಕಾಮಗಾರಿ ಪೂರ್ಣಗೊಂಡಿದ್ದು, ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಕಾಮಗಾರಿಯನ್ನು ಎಲ್‍ಅಂಡ್‍ಟಿ ಕಂಪನಿಗೆ ಟೆಂಡರ್ ನೀಡಲಾಗಿದ್ದು, ನಿಗದಿತ ವೇಳೆಯಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದಕ್ಕೆ ಹಾಗೂ ಸರಿಯಾಗಿ ನಿರ್ವಹಿಸದಿದ್ದಕ್ಕೆ ಒಂದು ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ. ಜೊತೆಗೆ ಇತರೆ ಏರ್‍ಟೆಲ್, ಜಿಯೋ ಹಾಗೂ ಬೆಸ್ಕಾಂ ಲೈನ್‍ಗಳಿಗೆ ತಲಾ 50 ಸಾವಿರ ರೂ ದಂಡ ವಿಧಿಸಿಲಾಗಿದೆ .

       ನಗರದಲ್ಲಿ ಈ ಹಿಂದೆ ಹಾಕಲಾಗಿದ್ದ ಒಳಚರಂಡಿಗಳು ನಿರ್ದಿಷ್ಟ ಅಡಿಗಳಲ್ಲಿ ಹಾಕಲಾಗಿತ್ತು. ಅಂದು ರಸ್ತೆಗಳು ಕಿರಿದಾಗಿದ್ದವು. ಇದೀಗ ರಸ್ತೆಗಳ ಅಭಿವೃದ್ಧಿಯಾಗಿದೆ. ಇದರಿಂದ ವಾಹನಗಳ ಓಡಾಟದಿಂದ ಒತ್ತಡ ತಡೆಯಲಾದರೆ ಕುಸಿಯುತ್ತಿವೆ. ನೂತನವಾಗಿ ಮಾಡಲಾಗುತ್ತಿರುವ ಚೇಂಬರ್‍ಗಳನ್ನು ರಸ್ತೆಯ ಪಕ್ಕದಲ್ಲಿ ಹಾಕಲಾಗುತ್ತಿದೆ. ಅದರಲ್ಲಿ ಕೆಲವೊಂದು ಒಡೆದಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗಿದೆ ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

ಯುಜಿಡಿ ಸರಿಪಡಿಸಿ ಟಾರ್ ಹಾಕಲಿ

        ರಸ್ತೆ ಮಧ್ಯದಲ್ಲಿರುವ ಯುಜಿಡಿ ಚೇಂಬರ್‍ಗಳನ್ನು ಸರಿಪಡಿಸಿ, ಆನಂತರ ಟಾರ್ ಹಾಕುವ ಮೂಲಕ ರಸ್ತೆಗಳ ಅಭಿವೃದ್ಧಿ ಮಾಡಲಿ. ರಸ್ತೆಯ ಅಭಿವೃದ್ಧಿಗೆಂದು ಕೊಟ್ಯಂತರ ರೂ.ಖರ್ಚು ಮಾಡಲಾಗುತ್ತದೆ. ಆದರೆ ಯುಜಿಡಿ ಸಮಸ್ಯೆ ಪರಿಹರಿಸದೆ ರಸ್ತೆ ಮಾಡಿದರೆ ಈ ಹಿಂದಿನ ಸ್ಥಿತಿಯೇ ಮತ್ತೆ ಮರುಕಳಿಸುವುದರಲ್ಲಿ ಸಂಶಯವಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿ ಸೂಕ್ತವಾಗಿ ಕಾಮಗಾರಿ ಮಾಡಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

        ಸ್ಮಾರ್ಟ್ ಸಿಟಿಯ ಕಾಮಗಾರಿಗಳನ್ನು ಮಾಡುವ ಮುನ್ನ ಪಾಲಿಕೆ ಸದಸ್ಯರ ಗಮನಕ್ಕೆ ತರಬೇಕು. ಯಾವುದೇ ಕಾಮಗಾರಿ ಮಾಡುವಾಗ ಸಂಬಂಧಪಟ್ಟ ಎಂಜಿನಿಯರ್‍ಗಳು ಇರಬೇಕು. ಜೊತೆಗೆ ಮಣ್ಣು ತೆಗೆಯುವ ವೇಳೆ ಟ್ರ್ಯಾಕ್ಟರ್‍ಗಳನ್ನು ನಿಲ್ಲಿಸಿಕೊಂಡು ಅದಕ್ಕೆ ತುಂಬಿ ಬೇರೆಡೆ ಹಾಕಿಕೊಳ್ಳಬೇಕು. ಕಾಮಗಾರಿ ಮುಗಿದ ನಂತರ ಆ ಮಣ್ಣನ್ನು ತಂದು ಈ ಗುಂಡಿಗಳನ್ನು ಮುಚ್ಚಬೇಕು. ಜೊತೆಯಲ್ಲಿ ಪೈಪುಗಳನ್ನು ದುರಸ್ಥಿ ಮಾಡುವವರು ಸಂಬಂಧಪಟ್ಟವರನ್ನು ಇಟ್ಟುಕೊಂಡೇ ಕೆಲಸ ಮಾಡಬೇಕು.

ಧನಿಯಾಕುಮಾರ್, ಕನ್ನಡ ಸೇನೆ ಜಿಲ್ಲಾಧ್ಯಕ್ಷರು

         ನಗರದಲ್ಲಿ ನಡೆಯುತ್ತಿರುವ 24 ಗಂಟೆಗಳ ಕುಡಿಯುವ ನೀರು ಸರಬರಾಜು ಕಾಮಗಾರಿಗೆ 400 ಜನ ಕೂಲಿಕಾರರು ಇದ್ದಾರೆ. ಎಲ್ಲಾ ಕಾಮಗಾರಿಯನ್ನು ಕೂಲಿಕಾರರಿಂದಲೇ ಮಾಡಿಸಲಾಗುತ್ತಿದೆ. ಎಲ್ಲಿಯೂ ಜೆಸಿಬಿಯನ್ನು ಬಳಸುತ್ತಿಲ್ಲ. ಅಲ್ಲಲ್ಲಿ ಪ್ಯಾಚ್ ವರ್ಕ್ ಸಮರ್ಪಕವಾಗಿ ನಡೆದಿಲ್ಲ ಎಂಬುದಕ್ಕೆ ಈಗಾಗಲೇ ದಂಢ ವಿಧಿಸಲಾಗಿದೆ. ಯುಜಿಡಿ ಚೇಂಬರ್‍ಗಳನ್ನು ನಿರ್ಮಾಣ ಮಾಡುತ್ತಲೇ ಕೆಲ ಸ್ಲಂ ಪ್ರದೇಶಗಳಲ್ಲಿ ಅಧಿಕಾರಿಗಳ ಅನುಮತಿ ಇಲ್ಲದೆ ರಾತ್ರೋ ರಾತ್ರಿ ಕನೆಕ್ಷನ್ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಚೇಂಬರ್‍ಗಳು ತುಂಬಿ ಉಕ್ಕುತ್ತಿದೆ. ಈ ಬಗ್ಗೆ ಪಾಲಿಕೆ ಆಯುಕ್ತರ ಬಳಿ ಚರ್ಚೆ ಮಾಡಲಾಗಿದ್ದು, ಕ್ರಮಕ್ಕೆ ಮನವಿ ಮಾಡಿಲಾಗಿದೆ.

ಈರಣ್ಣ, ಸಹಾಯಕ ಕಾರ್ಯಪಾಲಕ ಅಭಿಯಂತರರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap