ಮಾಸಿಕ ಪ್ರಗತಿ ಪರಿಶೀಲನಾ ಸಭೆ

ಹಾನಗಲ್ಲ :

        ಭ್ರಷ್ಠಾಚಾರ ತಾರತಮ್ಯ ನೀತಿಯಿಂದ ಹಾನಗಲ್ಲ ತಾಲೂಕಿನ ಅಭಿವೃದ್ಧಿಯನ್ನು ಕಡೆಗಣಿಸುತ್ತಿರುವ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮತದಾರರ ವಿಶ್ವಾಸವನ್ನು ಕಳೆದುಕೊಂಡಿದ್ದು, ಕೆಲವೇ ದಿನಗಳಲ್ಲಿ ತಾಲೂಕು ಅಭಿವೃದ್ಧಿಯ ಬರದಿಂದ ಕಂಗೆಡಲಿದೆ ಎಂದು ತಾಪಂ ಸದಸ್ಯ ದಾನಪ್ಪ ಗಂಟೇರ ಪ್ರಬಲವಾಗಿ ಆರೋಪಿಸಿದರು.

          ಶುಕ್ರವಾರ ಪಟ್ಟಣದ ತಾಲುಕು ಪಂಚಾಯತಿ ಸಭಾಭವನದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ತಾಲೂಕಿನ ಅಭಿವೃದ್ಧಿ ವಿಷಯದ ಚರ್ಚೆಯ ಸಂದರ್ಭದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ಹಾನಗಲ್ಲ ತಾಲೂಕಿನ ಯಾವುದೇ ಇಲಾಖೆ ಅಧಿಕಾರಿಗಳಿಗೆ ಜನಪ್ರತಿನಿಧಿಗಳ ಭಯವೇ ಇಲ್ಲ. ಸರಕಾರದ ಅನುದಾನ ಮನಬಂದಂತೆ ವೆಚ್ಚವಾಗುತ್ತಿದ್ದು, ಅಭಿವೃದ್ಧಿ ಮಾತ್ರ ಕಳಪೆಯಾಗಿದೆ, ಇದನ್ನು ಗಮನಿಸಲಾಗದೆ ಜನಪ್ರತಿನಿಧಿಗಳು ಅಧಿಕಾರಿಗಳ ತಾಳಕ್ಕೆ ಕುಣಿಯುವಂತಾಗಬಾರದು. ಕೂಡಲೇ ತಾಲೂಕಿನ ಎಲ್ಲ ಹಂತದ ಜನಪ್ರತಿನಿಧಿಗಳು ಅಧಿಖಾರಿಗಳ ಮೂಲಕ ನಡೆಯುತ್ತಿರುವ ಕಾಮಗಾರಿ ಹಾಗೂ ಅನುದಾನದ ಬಳಕೆಯನ್ನು ಪರೀಕ್ಷೆಗೊಳಪಡಿಸಬೇಕು. ಇಲ್ಲದಿದ್ದರೆ ಸರಕಾರದ ಹಣ ನಿರಾತಂಕವಾಗಿ ಪೋಲಾಗಿ ಅಭಿವೃದ್ಧಿಗಳು ಹಗಲುಗನಸಾಗುತ್ತವೆ ಎಂದು ಆರೋಪಿಸಿದರು.

          ಆರೋಗ್ಯ ಇಲಾಖೆ ಮಂಗನ ಕಾಯಿಲೆ ವಿಷಯದಲ್ಲಿ ನಿಗಾ ವಹಿಸಬೇಕು. ಹಾನಗಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಹಣ ನೀಡಿದವರಿಗೆ ಮಾತ್ರ ಚಿಕಿತ್ಸೆ ದೊರೆಯುವ ಸ್ಥಿತಿ ಇದೆ. ಇದಕ್ಕೆ ಕಾರಣರಾದವರ ಮೇಲೆ ಕ್ರಮ ಜರುಗಿಸಬೇಕು. ಲಕ್ಷಾಂತರ ರೂ ವೆಚ್ಚದ ಆರೋಗ್ಯ ಸಲಕರಣಗಳು ಸದುಪಯೋಗಗೊಳ್ಳದೆ ಹಾಳಾಗುತ್ತಿರುವುದು ಸೋಚನೀಯ ಸಂಗತಿ ಎಂದು ತಾಪಂ ಸದಸ್ಯ ರಾಮಣ್ಣ ಶೇಷಗಿರಿ ಆರೋಪಿಸಿದರು.

         ತಾಪಂ ಸದಸ್ಯ ರಾಮಣ್ಣ ಪೂಜಾರ ಹಳೆಗೆಜ್ಜಿಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಎರಡು ವರ್ಷದ ಹಿಂದೆ ಕಾಮಗಾರಿ ಆರಂಭವಾಗಿದ್ದರೂ ಈ ವರೆಗೆ ಪೂರ್ಣಗೊಳ್ಳದೆ ಇರುವುದು ಆಡಳಿತದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದರಂತೆ ನೂರಾರು ಕಾಮಗಾರಿಗಳು ಕುಂಟುತ್ತಿವೆ ಎಂದರು.

         ಪಶು ಸಂಗೋಪನಾ ಇಲಾಖೆ ಜಾನುವಾರುಗಳಿಗೆ ಕಾಲು-ಬಾಯಿ ಬೇನೆ ಬರದಂತೆ ಮುಂಜಾಗ್ರತಾ ಚಿಕಿತ್ಸೆ ನೀಡಲು ಮುಂದಾಗಿದ್ದು ರೈತರು ಇದರ ಸದುಪಯೋಗ ಪಡೆಯುವಂತೆ ಅಧಿಕಾರಿಗಳು ಜನಪ್ರತಿನಿಧಿಗಳ ಮೂಲಕ ಮನವಿ ಮಾಡಿದರು.ತಾಪಂ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷೆ ಸರಳಾ ಜಾಧವ, ಜಿಪಂ ಸದಸ್ಯ ಟಾಕನಗೌಡ ಪಾಟೀಲ, ತಾಪಂ ಸದಸ್ಯ ಶಂಕ್ರಣ್ಣ ಪ್ಯಾಟಿ, ತಾಪಂ ಇಓ ಚನಬಸಪ್ಪ ಹಾವಣಗಿ ಮೊದಲಾದವರು ವೇದಿಕೆಯಲ್ಲಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link