ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ

ಹೂವಿನಹಡಗಲಿ :

       ಸಮಾಜದಲ್ಲಿ ಆಗುತ್ತಿರುವ ದುಂದು ವೆಚ್ಚ ತಡೆಗಟ್ಟಲು ಸಾಮೂಹಿಕ ವಿವಾಹ ಸಮಾರಂಭಗಳ ಅಗತ್ಯತೆ ಇದೆಯೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಡಾ|| ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.

       ತಾಲೂಕಿನ ಕಾಂತೇಬೆನ್ನೂರು ಗ್ರಾಮದಲ್ಲಿ ಸ್ನೇಹ ಸೇವಾ ಟ್ರಸ್ಟಿನಿಂದ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡದರು. ಭಾರತೀಯ ಉತ್ಕಷ್ಠ ಸಂಸ್ಕತಿಯಲ್ಲಿ ವಿವಾಹಕ್ಕೆ ಬಹಳಷ್ಟು ಪಾವಿತ್ರ್ಯತೆಯಿದೆ. ಚತುರ್ವಿಧ ಆಶ್ರಮಗಳಲ್ಲಿ ಗೃಹಸ್ಥಾಶ್ರಮ ಅತ್ಯಂತ ಶ್ರೇಷ್ಠವಾಗಿದೆ. ಅಷ್ಟೇ ಜವಾಬ್ದಾರಿಯುತ ಜೀವನವಾಗಿದೆ. ಸತಿ ಪತಿಗಳು ಪರಸ್ಪರ ಅರಿತು ಸಾಮರಸ್ಯದಿಂದ ಬಾಳಿದರೆ ಜೀವನ ಸುಖಮಯ. ಮರೆತು ಬಾಳಿದರೆ ಜೀವನ ಬಂಧನಕಾರಿಯಾಗುತ್ತದೆ. ಆದರ್ಶ ಗೃಹಸ್ಥ ಜೀವನ ರೂಪಿಸಿಕೊಳ್ಳಲು ಸಂಸ್ಕಾರ ಸಂಸ್ಕತಿಗಳ ಅರಿವು ಮತ್ತು ಆಚರಣೆ ಬಹಳ ಮುಖ್ಯ. ವೈಯಕ್ತಿಕ ಬದುಕಿನ ಬೆಳವಣಿಗೆಯೊಂದಿಗೆ ಸಾಮಾಜಿಕ ಬದುಕಿನ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾಗಿದೆ ಎಂದರು

         ಜೀವನದಲ್ಲಿ ಗುರಿ ಮತ್ತು ಧ್ಯೇಯ ಇಲ್ಲದ ಕಾರಣ ಮನುಷ್ಯ ದಿಕ್ಕು ದಾರಿ ತಪ್ಪಿ ನಡೆದು ಬದುಕಿನಲ್ಲಿ ಕಷ್ಟಗಳನ್ನು ಅನುಭವಿಸುವ ಪರಿಸ್ಥಿತಿ ಬಂದಿದೆ. ಆಹಾರ ನೀರು ದೈಹಿಕ ವಿಕಾಸಕ್ಕೆ ಕಾರಣವಾದರೆ ಧರ್ಮ ಬದುಕನ್ನು ವಿಕಾಸಗೊಳಿಸಿ ಅಭಿವೃದ್ಧಿಯತ್ತ ಸಾಗಿಸುತ್ತದೆ ಎಂದ ಅವರು ಕಲಿಗೆ ಗಳಿಕೆ ಮತ್ತು ಭಗವಂತನ ಚಿಂತನೆಯಲ್ಲಿ ಹೆಜ್ಜೆ ಹಾಕಿದರೆ ಬದುಕಿಗೆ ಬೆಲೆ ಬರುವುದರಲ್ಲಿ ಯಾವ ಸಂದೇಹವಿಲ್ಲ. ಮಾನವೀಯ ಸಂಬಂಧಗಳು ಸಡಿಲಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಬೆಸೆಯುವ ಕೆಲಸ ಮಾಡಬೇಕಾಗಿದೆ ಎಂದರು

          ಸ್ನೇಹ ಸೇವಾ ಟ್ರಸ್ಟ್‍ನವರು ಉಚಿತ ಸಾಮೂಹಿಕ ವಿವಾಹ ಸಮಾರಂಭ ಹಮ್ಮಿಕೊಂಡು ಬಡವರ ಬಾಳಿಗೆ ಸಹಕರಿಸಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

          ಅಂಗೂರು ಹಿರೇಮಠದ ಶಿವಯೋಗೀಶ್ವರ ಶಿವಾಚಾರ್ಯ ಸ್ವಾಮಿಗಳು, ಗವಿಮಠದ ಹಿರಿಯ ಶಾಂತವೀರ ಸ್ವಾಮಿಗಳು, ಲಿಂಗನಾಯಕನಹಳ್ಳಿ ಚನ್ನವೀರ ಸ್ವಾಮಿಗಳು ಪಾಲ್ಗೊಂಡು ನೂತನ ದಂಪತಿಗಳಿಗೆ ಶುಭ ಹಾರೈಸಿದರು. ಹಿರೇಹಡಗಲಿ ಸದ್ಗುರು ಶಿವಯೋಗಿ ಹಾಲಸ್ವಾಮಿಗಳು ನೇತೃತ್ವ ವಹಿಸಿದ್ದರು.

           ಸ್ನೇಹ ಸೇವಾ ಟ್ರಸ್ಟ್ ಅಧ್ಯಕ್ಷ ಪಿ.ಹೆಚ್. ರಾಜೇಶ ಪ್ರಾಸ್ತಾವಿಕ ನುಡಿ ನುಡಿದರು. ಎಸ್.ಎಸ್.ಗುತ್ತಲ ವಕೀಲರು ಸ್ವಾಗತಿಸಿದರು. ಪಿ.ಎಸ್.ಮೇಟಿ ಸಂಗಡಿಗರಿಂದ ಪ್ರಾರ್ಥನೆ ಜರುಗಿತು. ಎಸ್.ಬಸವರಾಜ ನಿರೂಪಿಸಿದರು.

          ಅಡ್ಡಪಲ್ಲಕ್ಕಿ ಮಹೋತ್ಸವ: ಸಮಾರಂಭಕ್ಕೂ ಮುನ್ನ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ಪೂರ್ಣಕುಂಭ, ವಾದ್ಯ ವೈಭವಗಳೊಂದಿಗೆ ಜಗದ್ಗುರುಗಳನ್ನು ಬರಮಾಡಿಕೊಂಡರು. ಸಹಸ್ರಾರು ಜನರು ಪಾಲ್ಗೊಂಡು ಜಗದ್ಗುರುಗಳವರ ದರ್ಶನಾಶೀರ್ವಾದ ಪಡೆದ ದೃಶ್ಯ ಅಪೂರ್ವವಾಗಿತ್ತು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link