ದಾವಣಗೆರೆ:
ಇಲ್ಲಿನ ಶ್ರೀಜಿ.ಮಲ್ಲಿಕಾರ್ಜುನಪ್ಪ ಶ್ರೀಮತಿ ಹಾಲಮ್ಮ ಚಾರಿಟಿ ಫೌಂಡೇಷನ್ ವತಿಯಿಂದ ಬರುವ ಫೆಬ್ರವರಿ ತಿಂಗಳಿನಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ ಎಂದು ಫೌಂಡೇಷನ್ನ ಸಲಹಾ ಸಮಿತಿ ಅಧ್ಯಕ್ಷ ಕೆ.ಬಿ.ಶಂಕರನಾರಾಯಣ ತಿಳಿಸಿದರು.
ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡ ಪೋಷಕರ ಮಕ್ಕಳಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲು ನಮ್ಮ ಫೌಂಡೇಷನ್ ತೀರ್ಮಾನಿಸಿದೆ. ಮೊದಲನೇ ವಿವಾಹಕ್ಕೆ ಮಾತ್ರ ಅವಕಾಶವಿರುತ್ತದೆ. ಆಸಕ್ತರು 2019ರ ಫೆ.3ರೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿರುವ ಸಂಸದರ ಲೋಕಸಭಾ ಚುನಾವಣಾ ಕಚೇರಿ ಹಿಂಭಾಗದ ಫೌಂಡೇಷನ್ ಕಾರ್ಯಾಲಯ ಅಥವಾ ದೂ:94484 23755, 83174 49515 ಸಂಪರ್ಕಿಸಬಹುದು ಎಂದರು.
2006ರಲ್ಲಿ ಪ್ರಾರಂಭವಾದ ಸಂಸ್ಥೆಯಿಂದ ಈವರೆಗೆ ದಾವಣಗೆರೆ ನಗರಕ್ಕೆ ಸೀಮಿತವಾಗಿ ಅನೇಕ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಾ ಬರಲಾಗಿದೆ. ಇದೀಗ ಸಂಸ್ಥೆಯ ಕಾರ್ಯ ವ್ಯಾಪ್ತಿಯನ್ನು ಜಿಲ್ಲಾ ಮಟ್ಟಕ್ಕೆ ವಿಸ್ತರಿಸಲಾಗಿದೆ. ಸಂಸ್ಥೆಯಿಂದ ಈಗಾಗಲೇ ಗ್ರಾಮೀಣ ಅಭಿವೃದ್ಧಿ, ಬಡವರಿಗೆ ನೆರವು, ಶಿಕ್ಷಣಕ್ಕೆ ಸಹಾಯ, ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪಠ್ಯ ಪರಿಕರ ವಿತರಣೆ, ಗ್ರಾಮೀಣ ಪ್ರದೇಶದವರಿಗೆ ವೈದ್ಯಕೀಯ ನೆರವು, ಸ್ವಚ್ಛತಾ ಆಂದೋಲನ, ಪರಿಸರ ಸಂರಕ್ಷಣೆ, ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಧನಸಹಾಯ ಹೀಗೆ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಲಹಾ ಸಮಿತಿ ಕಾರ್ಯದರ್ಶಿ ಗು.ರುದ್ರಯ್ಯ, ಎಂ.ಆರ್.ಪ್ರಭು, ವಿನಾಯಕ ರಾನಡೆ, ಬಿ.ಎಸ್.ಜಗದೀಶ, ಕೊಂಡಜ್ಜಿ ಜಯಪ್ರಕಾಶ, ಆದಿನಾಥ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








