ಹರಿಹರ:
ಕೆಲಸದ ಭಾರಕ್ಕೆ ತಕ್ಕಂತೆ ಹೆಚ್ಚಿನ ಪೌರ ಕಾರ್ಮಿಕರ ನೇಮಕಾತಿ ಮಾಡುವುದು ಅಗತ್ಯವಾಗಿದೆ. ಈ ಕುರಿತು ಪೌರಾಡಳಿತ, ನಗರಾಭಿವೃದ್ಧಿ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಎಸ್.ರಾಮಪ್ಪ ಭರವಸೆ ನೀಡಿದರು.
ನಗರದ 4ನೇ ವಾರ್ಡಿನ ಬಾಂಗ್ಲಾ ಬಡಾವಣೆಯಲಿ ನಗರಸಭೆ ಹಾಗೂ ಪ್ರಥಮ ಗ್ರಾಮೀಣಾಭಿವೃದ್ಧಿ ಶೈಕ್ಷಣಿಕ ಮತ್ತು ಸಾಮಾಜಿಕ ಸಂಸ್ಥೆಯಿಂದ ಆಯೋಜಿಸಿದ್ದ ಸ್ವಚ್ಚ ಭಾರತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಬೆಳೆಯುತ್ತಿರುವ ನಗರದಲ್ಲಿ ಪೌರ ಕಾರ್ಮಿಕರ ನೇಮಕಾತಿಗೆ ಸರಕಾರದ ಗಮನ ಸೆಳೆಯುವುದಾಗಿ ಹೇಳಿದರು.
ನಗರದ ಜನಸಂಖ್ಯೆ ಒಂದು ಲಕ್ಷದ ಗಡಿ ತಲುಪಿದೆ. ಗ್ರಾಪಂ ವ್ಯಾಪ್ತಿಯಲ್ಲಿದ್ದ ಹೊರವಲಯದ ಅಮರಾವತಿ, ಆಂಜನೇಯ ಬಡಾವಣೆ, ಅಮರಾವತಿ ಕಾಲೋನಿ, ಕೆಎಚ್‍ಬಿ ಕಾಲೋನಿ, ಹರ್ಲಾಪುರ, ಮಹಜೇನಹಳ್ಳಿ, ಶೇರಾಪುರದ ಜನವಸತಿ ಪ್ರದೇಶಗಳು ಇತ್ತೀಚಿಗೆ ನಗರಸಭೆ ವ್ಯಾಪ್ತಿಗೆ ಸೇರ್ಪಡೆಯಾಗಿವೆ.
ಜನಸಂಖ್ಯೆ ಹಾಗೂ ಭೌಗೋಳಿಕ ವ್ಯಾಪ್ತಿಗೆ ತಕ್ಕಂತೆ ಪೌರ ಕಾರ್ಮಿಕರ ಲಭ್ಯತೆ ಇಲ್ಲ. ಉತ್ಪತ್ತಿಯಾಗುವ ಘನತ್ಯಾಜ್ಯ ವಿಲೇವಾರಿ, ಚರಂಡಿ, ರಸ್ತೆ ಸ್ವಚ್ಚತೆ ಕಾರ್ಯವನ್ನು ನಿರ್ವಹಿಸುವುದು ಕಷ್ಟಕರವಾಗಿದೆ. ಇದು ಇರುವ ಪೌರಕಾರ್ಮಿಕರು ಹಾಗೂ ನಗರಸಭೆ ಅಧಿಕಾರಿಗಳ ಮೇಲೆ ಒತ್ತಡವನ್ನುಂಟು ಮಾಡಿದೆ.
ಈ ಯೋಜನೆಯಡಿ ನಗರದ ಪ್ರತಿ ವಾರ್ಡಿನಲ್ಲಿ ಸ್ವಚ್ಚತಾ ಅಭಿಯಾನ ಕೈಗೊಳ್ಳಲಾಗುವುದು. ನೈರ್ಮಲ್ಯದಿಂದ ಇರುವ ನಗರದ ವಾಸಿಗಳ ಆರೋಗ್ಯವೂ ಸಹಜವಾಗಿ ಸದೃಢವಾಗಿರುತ್ತದೆ. ನಾಗರೀಕರೂ ಕೂಡ ಕಸವನ್ನು ಮನೆ ಬಾಗಿಲಿಗೆ ಬರುವ ನಗರಸಭೆ ಟಿಪ್ಪರ್‍ಗಳಿಗೆ ವಿಂಗಡಿಸಿ ಹಾಕಬೇಕು. ಕಸವನ್ನು ಚರಂಡಿಗಳಿಗೆ ಹಾಕುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯವಿದೆ. ನಗರಸಭೆಯ ಜೊತೆಗೆ ಜನತೆಯೂ ಕೈಜೋಡಿಸುವ ಅಗತ್ಯವಿದೆ ಎಂದರು.
ಬೇಸಿಗೆ ಅವಧಿ ಆರಂಭವಾಗುತ್ತಿದೆ. ಇದು ಸಾಂಕ್ರಾಮಿಕ ರೋಗಗಳು ಹರಡುವ ಸಮಯ. ಡೆಂಗ್ಯು, ವಾಂತಿ ಭೇದಿ, ಮಲೇರಿಯಾ ಇತರೆ ಕಾಯಿಲೆಗಳು ಹರಡದಂತೆ ಎಚ್ಚರ ವಹಿಸಬೇಕು. ಈ ಕುರಿತು ನಗರಸಭೆ ಅಧಿಕಾರಿಗಳು ಜಾಗೃತಿ ಮೂಡಿಸುವ ಜೊತೆಗೆ ತಂಡಗಳೊಂದಿಗೆ ತೆರಳಿ ವಾರ್ಡುಗಳಲ್ಲಿ ಸ್ವಚ್ಚತಾ ಕಾರ್ಯ ಹಮ್ಮಿಕೊಳ್ಳಬೇಕೆಂದರು.
ಮೋದಿ ಸರಕಾರಕ್ಕೆ ಐದು ವರ್ಷ ಆಗುತ್ತಿದೆ. ನೀಡಿರುವ ಭರವಸೆ ಈಡೇರಿಸಿಲ್ಲ. ಅಂಗೈಯಲ್ಲಿ ಅರಮನೆ ತೋರಿಸುವುದರಲ್ಲಿ ಅವರು ನಿಷ್ಠಾವಂತರು. ಜನರು ಅವರ ಮಾತುಗಳಿಗೆ ಮರಳಾಗಬಾರದು. ಸುಳ್ಳು ಹೇಳುವುದೆ ಮೋದಿ ಮತ್ತು ಅವರ ತಂಡದ ಕೆಲಸವಾಗಿದೆ ಎಂದರು.
ಕಾಂಗ್ರೆಸ್ ಸರಕಾರದಿಂದ ಮಾತ್ರ ಬಡವರು, ಮಧ್ಯಮ ವರ್ಗದವರ ಅಭಿವೃದ್ಧಿ ಸಾಧ್ಯ. ಸಿದ್ಧರಾಮಯ್ಯ ಸರಕಾರದ ಅನ್ನಭಾಗ್ಯ, ಶಾದಿಭಾಗ್ಯ ಸೇರಿದಂತೆ ಹಲವಾರು ಯೋಜನೆಗಳನ್ನು ಜನರೂ ಈಗಲೂ ಸ್ಮರಿಸುತ್ತಿದ್ದಾರೆ. ರಾಹುಲ್ ಗಾಂಧಿಯವರನ್ನು ಪ್ರಧಾನಿ ಮಾಡುವ ಪಣ ತೊಡಬೇಕೆಂದರು.
ಪೌರಾಯುಕ್ತೆ ಎಸ್.ಲಕ್ಷ್ಮಿ, ಮಾತನಾಡಿ, ಬೇಸಿಗೆಯಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗುವುದರಿಂದ ಸ್ವಚ್ಚತೆ ಅತ್ಯಗತ್ಯ. ಮನೆಯೊಳಗೆ ಹಾಗೂ ಸುತ್ತಲಿನ ಪರಿಸರದ ಬಗ್ಗೆ ಗಮನ ಹರಿಸಬೇಕು. ಜನರ ಸಹಭಾಗಿತ್ವದಲ್ಲಿ ಸ್ವಚ್ಚತಾ ಕಾರ್ಯ ನಡೆಸುತ್ತಿದೆ. ಈ ಅಭಿಯಾನದಲ್ಲಿ 800ಹೆಚ್ಚು ಶೌಚಾಲಯ ನಿರ್ಮಿಸಲಾಗಿದೆ. ನಗರವನ್ನು ಬಯಲು ಶೌಚ ಮುಕ್ತ ಘೋಷಿಸುವ ನಿಟ್ಟಿನಲ್ಲಿ ಸಾಗುತ್ತಿದೆ..
ನಗರಸಭಾ ಅಧ್ಯಕ್ಷ ಸುಜಾತಾ ರೇವಣಸಿದ್ದಪ್ಪ, ಸದಸ್ಯರಾದ ಕೆ.ಮರಿದೇವ, ರತ್ನಮ್ಮ, ಎಸ್.ಎಂ.ವಸಂತ, ಸಂಪನ್ಮೂಲ ವ್ಯಕ್ತಿ ವಿಜಯಕುಮಾರ್, ಪ್ರಥಮ ಸಂಸ್ಥೆಯ ಮಂಜನಾಯ್ಕ, ಸಂತೋಷ, ರಮೇಶ್ ನಾಯ್ಕ, ದೂಡಾ ಮಾಜಿ ಸದಸ್ಯ ಜಿ.ವಿ. ವೀರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ. ಹನುಮಂತಪ್ಪ, ಬಿ.ಎನ್.ರಮೇಶ್, ಎಚ್.ಶಿವಪ್ಪ, ಆನಂದ, ಅಶೋಕಪ್ಪ, ಎಇಇ ಬಿರಾದರ್, ಪರಿಸರ ಇಂಜಿನಿಯರ್ ಮಹೇಶ್ ಕೋಡಬಾಳ್, ಹಿರಿಯ ಆರೋಗ್ಯಾಧಿಕಾರಿಗಳಾದ ರವಿಪ್ರಕಾಶ್, ಕೋಡಿ ಭೀಮರಾಯ, ಹಾಗೂ ರವಿನಾಯ್ಕ, ರಘುನಾಯ್ಕ, ಮತ್ತಿತರರು ಉಪಸ್ಥಿತರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
