ಮಠ-ಪೀಠ ಕೆಲವೇ ವರ್ಗಗಳಿಗೆ ಸೀಮಿತ ಆಗದಿರಲಿ

ದಾವಣಗೆರೆ:

       ಮಠ ಮತ್ತು ಪೀಠಗಳು ಕಲವೇ ವರ್ಗಗಳಿಗೆ ಸೀಮಿತವಾಗಬಾರದು ಎಂದು ಕೂಡಲ ಸಂಗಮದ ಲಿಂಗಾಯುತ ಪಂಚಮಸಾಲಿ ಮಹಾಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಶ್ರೀಗಳು ಹೇಳಿದರು.

        ನಗರದ ಹೊರ ವಲಯದಲ್ಲಿನ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಶುಕ್ರವಾರ ಕಾಯಕ ದಾಸೋಹ ಮಂಪಟದಿಂದ ಏರ್ಪಡಿಸಿದ್ದ 135ನೇ ಬಸವ ಸಂಗಮ ಹಾಗೂ ಮಡಿವಾಳ ಮಾಚಿದೇವ ಜಯಂತ್ಯೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮಠ ಮತ್ತು ಪೀಠ ಎನ್ನುವ ನಾಮಾಂಕಿತಗಳು ಕೆಲವೇ ವರ್ಗಕ್ಕೆ ಸೀಮಿತವಾಗಬಾರದು. ಎಲ್ಲಾ ಜಾತಿ, ಧರ್ಮ, ವರ್ಗಕ್ಕೆ ಸೇರುವಂತೆ ಮಂಟಪ ಎನ್ನುವ ಹೆಸರಿನಿಂದ ದಾವಣಗೆರೆಯಲ್ಲಿ ಕಾಯಕ ದಾಸೋಹ ಮಂಟಪವನ್ನು ಅರಂಭಿಸಲಾಗುತ್ತಿದೆ. ಅಂತರಂಗ ಮತ್ತು ಬಹಿರಂಗವನ್ನು ಶುದ್ಧಿ ಮಾಡುವುದೇ ಅನುಭವ ಮಂಟಪದ ಆಶಯವಾಗಿತ್ತು. ಈ ನಿಟ್ಟಿನಲ್ಲಿ ಇಲ್ಲಿ ನಿರ್ಮಾಣವಾಗುವ ಕಾಯಕ ಮಂಟಪವು ಯಾವುದೇ ಜಾತಿಗೆ ಸೀಮಿತ ಆಗದೇ, ಎಲ್ಲಾ ವರ್ಗಗಳಿಗೂ ಸೇರಬೇಕು ಎಂದರು.

        ಎಲ್ಲರೂ ಒಂದೇ ಎನ್ನುವ ಭಾವನೆ ಮೂಡಿಸುವ ನಿಟ್ಟಿನಲ್ಲಿ ಇದೇ ಸ್ಥಳದಲ್ಲಿ ಭೌತಿಕವಾಗಿ ಕಟ್ಟಡ ನಿರ್ಮಿಸಲು ಶೀಘ್ರವೇ ಸಮಿತಿ ರಚಿಸಿ ಕೆಲಸ ಆರಂಭಿಸಲಾಗುವುದು. ವಿಶ್ವದ ಪ್ರತಿಯೊಂದು ಜೀವಿವೂ ತನ್ನದೇ ಆದ ಕಾಯಕ ಮಾಡುತ್ತದೆ. ಯಾವುದೇ ಭೇದವಿಲ್ಲದೇ, ಅಭೇದವಾದ ಕೆಲಸವು ಪ್ರಸ್ತುತ ನಡೆಸುವುದು ಜರೂರಾಗಿದೆ ಎಂದು ಹೇಳಿದರು.

         ಸಮಾಜದ ಹೊರಗೂ ಒಳಗೂ ಮಡಿ ಮಾಡಿದಾತ ಮಡಿವಾಳ. 12ನೇ ಶತಮಾನದಲ್ಲಿ ಎಲ್ಲಾ ಶರಣರಿಗಿಂತಲೂ ನಿಷ್ಠೂರವಾಗಿಯಾಗಿ, ಕ್ರಾಂತಿಕಾರಿಯಾಗಿ ಕೆಲಸ ಮಾಡಿದಾತ ಮಡಿವಾಳ ಮಾಚಯ್ಯ. ಬಸವಣ್ಣ ಶಾಂತಿಯಿಂದ ಸಮಾಜ ಸುಧಾರಣೆಗೆ ಮುಂದಾದರೆ, ವೀರ ಗಣಾಚಾರಿ ಮಡಿವಾಳ ಮಾಚಿದೇವರು ಕ್ರಾಂತಿಯ ಮೂಲಕ ಸಮಾಜ ಸುಧಾರಣೆ ಮುಂದಾದ ದಿಟ್ಟ ವ್ಯಕ್ತಿ. ಕ್ರಾಂತಿಯ ಮೂಲಕವೇ ಸಮಾಜದಲ್ಲಿನ ಕೆಟ್ಟ ಆಚರಣೆಗಳನ್ನು ಕಿತ್ತೊಗೆದು ಸಮಾನತೆ ಸಂದೇಶ ಸಾರಿ ಕ್ರಾಂತಿಯ ಕಿಡಿಯಾದವರೇ ಮಡಿವಾಳ ಮಾಚಿದೇವರು ಎಂದು ಸ್ಮರಿಸಿದರು.

         ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಪಟ್ಟಭದ್ರ ಹಿತಾಸಕ್ತಿಗಳಿಂದ ನಾಶವಾಗಬೇಕಿದ್ದ ವಚನ ಸಾಹಿತ್ಯವನ್ನು ರಕ್ಷಿಸಿದ ವ್ಯಕ್ತಿ ಮತ್ಯಾರು ಅಲ್ಲ ಆತನೇ ಕ್ರಾಂತಿಯೋಗಿ ಮಡಿವಾಳ ಮಾಚಿದೇವರು. ವಚನಗಳನ್ನು ರಕ್ಷಣೆ ಮಾಡುವ ಮೂಲಕ ಅದರ ಸಾಹಿತ್ಯವನ್ನು ಇಂದಿಗೂ ನಮಗೆಲ್ಲರಿಗೂ ಸಿಗುವಂತೆ ಮಾಡಿದ್ದು ಆತನೇ. ಇಂದು ಬಸವಣ್ಣ ಸೇರಿದಂತೆ 12ನೇ ಶತಮಾನದ ಶರಣರ ಬಗ್ಗೆ ನಾವು ತಿಳಿದುಕೊಳ್ಳುತ್ತಿದ್ದೇವೆ ಎಂದರೆ ಅದಕ್ಕೆಲ್ಲಾ ಮಾಚಿದೇವರು ಮಾಡಿದ ಹೋರಾಟದ ಫಲಶ್ರುತಿಯೇ ಕಾರಣ ಎಂದು ಹೇಳಿದರು.

         ಮಡಿವಾಳ ಸಮುದಾಯವು ಉತ್ತರ ಭಾರತ ಮತ್ತು ದಕ್ಷಿಣ ಭಾರತ ಸೇರಿದಂತೆ 16 ರಾಜ್ಯದಲ್ಲಿ ಪರಿಶಿಷ್ಠ ಜಾತಿ ಪಟ್ಟಿಯಲ್ಲಿದೇ ಅಂತೆಯೇ ಕರ್ನಾಟಕದಲ್ಲೂ ಪರಿಶಿಷ್ಠರ ಪಟ್ಟಿಗೆ ಸೇರಿಸುವಂತೆ ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಮತ್ತು ರಾಜಕೀಯವಾಗಿ ಹಿಂದುಳಿದಿರುವ ಮಡಿವಾಳ ಸಮುದಾಯವನ್ನು ಪರಿಶಿಷ್ಠರ ಪಟ್ಟಿಗೆ ಸೇರಿಸುವಲ್ಲಿ ನಮ್ಮ ಬೆಂಬಲವೂ ಇದೆ ಎಂದರು.

          ಮಹಾನಗರ ಪಾಲಿಕೆ ಸದಸ್ಯ ಮಡಿವಾಳ ಸಮಾಜದ ಮುಖಂಡ ಹೆಚ್.ಜಿ.ಉಮೇಶ್ ಮಾತನಾಡಿ, 12ನೇ ಶತಮಾನದಂತಹ ಸಮಾಜಕ್ಕೆ ಮಾರಕವಾದಂತಹ ವಿವಿಧ ಆಚರಣೆಗಳು ಇದ್ದ ಸಂದರ್ಭದಲ್ಲೇ ಬಸವಣ್ಣನವರ ಅನುಭವ ಮಂಟಪದಿಂದ ಪ್ರೇರಿತರಾಗಿ ಒಂದು ಧರ್ಮ, ಜಾತಿಗೆ ಸೀಮಿತವಾಗದೇ ತನ್ನ ಕಾಯಕದ ಜೊತೆ ವಚನ ಸಾಹಿತ್ಯದಂತಹ ಮಹಾನ್ ಜ್ಞಾನ ಭಂಡಾರವನ್ನು ರಕ್ಷಿಸಿದ ಮಹಾನ್ ಗಣಾಚಾರಿ ಮಾಚಿದೇವರು ಎಂದು ಹೇಳಿದರು.

          ಬಸವ ಬಳಗದ ವಿ ಸಿದ್ದರಾಮಣ್ಣ ಶರಣರು ಮಾತನಾಡಿ, ಮಡಿವಾಳ ಎನ್ನುವುದು ಒಂದು ಜಾತಿಯಲ್ಲಿ ಅದೊಂದು ಧರ್ಮದ ಜ್ಯೋತಿ. 12ನೇ ಶತಮಾನದಲ್ಲಿ ಬಸವ ಕಲ್ಯಾಣದಲ್ಲಿ ಬಿತ್ತಿದ ಬಸವಣ್ಣನೆಂಬ ಬಳ್ಳಿ ಇದೀಗ ವಿಶ್ವಾದ್ಯಂತ ಹರಡಿದೆ. ಡಾ.ಬಿ.ಆರ್.ಅಂಬೇಡ್ಕರರು ಭಾರತದ ಸಂವಿಧಾನ ಶಿಲ್ಪಿಯಾದರೆ, ವಚನ ಸಾಹಿತ್ಯ ಬರೆದ ಬಸವಣ್ಣ ವಿಶ್ವಕ್ಕೆ ಸಂವಿಧಾನ ಶಿಲ್ಪಿ ಎಂದು ಬಣ್ಣಿಸಿದರು.

         ಕಾರ್ಯಕ್ರಮದಲ್ಲಿ ಬಸವ ಬಳಗದ ಅಧ್ಯಕ್ಷ ವೀರಭದ್ರಪ್ಪ ದೇವಿಗೆರೆ, ಶಿವಾನಂದ ಗುರೂಜಿ, ಮಡಿವಾಳ ಸಮಾಜದ ಪ್ರಧಾನ ಕಾರ್ಯದರ್ಶಿ ಎಂ. ನಾಗೇಂದ್ರಪ್ಪ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link