ದಾವಣಗೆರೆ:
ಕೊಳಗೇರಿಗಳ ಅಭಿವೃದ್ಧಿಗಾಗಿ ಪಾಲಿಕೆಯ ಬಜೆಟ್‍ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡಬೇಕೆಂದು ಕರ್ನಾಟಕ ಸ್ಲಂ ಜನಾಂದೋಲನದ ಜಿಲ್ಲಾ ಸಂಚಾಲಕಿ ರೇಣುಕಾ ಯಲ್ಲಮ್ಮ ಒತ್ತಾಯಿಸಿದರು.
ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್ ಅವರ ಕೊಠಡಿಯಲ್ಲಿ ಶನಿವಾರ ಮೇಯರ್ ಶೋಭಾ ಪಲ್ಲಾಘಟ್ಟೆ ಅವರ ಅಧ್ಯಕ್ಷತೆಯಲ್ಲಿ ನಡೆದ ಪಾಲಿಕೆಯ 2019-20ನೇ ಸಾಲಿನ ಆಯವ್ಯಯ ಅಂದಾಜಿ ಪಟ್ಟಿ ತಯಾರಿಸಲು ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರಿಂದ ಸಲಹೆ ಪಡೆಯಲು ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಇನ್ನೂ ಸಹ ಕೊಳಗೇರಿಗಳ ಅಭಿವೃದ್ಧಿಯಾಗಿಲ್ಲ. ಸ್ಲಂಗಳ ಜನತೆ ಇನ್ನೂ ಸಹ ಬಯಲು ಶೌಚಾಲಯವನ್ನು ಅವಲಂಬಿಸಿದ್ದಾರೆ. ಸ್ವಚ್ಛ ಭಾರತ್ ಯೋಜನೆಯಡಿ ಎಲ್ಲಾ ಮನೆಗಳಿಗೆ ವೈಯಕ್ತಿಕ ಶೌಚಾಲಯ ನಿರ್ಮಿಸಲು ಮೊದಲ ಕಂತಿನ ಹಣ ಬಿಡುಗಡೆ ಮಾಡಲಾಗಿದೆ. ಈ ಹಣದಲ್ಲಿ ಅರ್ಧ ಶೌಚಾಲಯ ನಿರ್ಮಾಣಗೊಂಡು ಅಪೂರ್ಣವಾಗಿವೆ. ಅವು ಪೂರ್ಣಗೊಂಡ ಮೇಲೆ ಪಾಲಿಕೆ 2ನೇ ಕಂತಿನ ಅನುದಾನ ಬಿಡುಗಡೆ ಮಾಡಲಿದೆ. ಆದರೆ, ಶೌಚಾಲಯ ಪೂರ್ಣಗೊಳಿಸಲು ಜನರ ಬಳಿಯಲ್ಲೂ ಹಣವಿಲ್ಲ. ಆದ್ದರಿಂದ ಅರ್ಧಕ್ಕೆ ನಿಂತಿರುವ ಶೌಚಾಲಯಗಳನ್ನು ಪೂರ್ಣಗೊಳಿಸಲು ಪಾಲಿಕೆಯೇ ಅನುದಾನ ನೀಡಬೇಕೆಂದು ಮನವಿ ಮಾಡಿದರು.
ನಗರದ ಮಂಡಕ್ಕಿ ಭಟ್ಟಿಯಲ್ಲಿ ಉದ್ಯಾನವನ ನಿರ್ಮಾಣಕ್ಕಾಗಿ, ಜಾಗ ಮೀಸಲಿಡಲಾಗಿದೆ. ಆದರೆ, ಅಲ್ಲಿ ಇನ್ನೂ ಪಾರ್ಕ್ ನಿರ್ಮಾಣಗೊಳ್ಳದ ಕಾರಣ ಆ ಜಾಗವು ಹಂದಿಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ. ಹೀಗಾಗಿ ಇದು ಸೊಳ್ಳೆ ಉತ್ಪತ್ತಿ ತಾಣವಾಗಿದ್ದು, ಇಲ್ಲಿಯ ಸಾರ್ವಜನಿಕರು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಪಾಲಿಕೆಯು ಈ ಜಾಗವನ್ನು ಸ್ವಚ್ಛಗೊಳಿಸಿ, ಉದ್ಯಾನವನವನ್ನು ಅಭಿವೃದ್ಧಿ ಪಡಿಸಲು ಜಬೆಟ್‍ನಲ್ಲಿ ಅನುದಾನ ಮೀಸಲಿಡಬೇಕೆಂದು ಆಗ್ರಹಿಸಿದರು.
ಪರಿಸರ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ದೇವರಮನಿ ಗಿರೀಶ್ ಮಾತನಾಡಿ, ಪಾಲಿಕೆಗೆ ನೀರು ಪೂರೈಕೆಗೆ ಮೀಸಲಿರುವ ಕುಂದುವಾಡ ಕೆರೆಯಲ್ಲಿ ದನಕರುಗಳ ಮೈತೊಳೆಯಲು, ವಾಹನಗಳನ್ನು ತೊಳೆಯಲು ಹಾಗೂ ಮೀನುಗಾರಿಕೆಗೆ ಅವಕಾಶ ನೀಡದೇ, ಮೀಸಲು ಸಂರಕ್ಷಿತಾ ಕೆರೆ ಪ್ರದೇಶ ಎಂದು ಘೋಷಿಸಿ, ಅಭಿವೃದ್ಧಿ ಪಡಿಸಲು ಅನುದಾನ ಮೀಸಲಿಡಬೇಕೆಂದು ಸಲಹೆ ನೀಡಿದರು.
ಹೋರಾಟಗಾರ ಡಿ.ಅಸ್ಲಾಂ ಖಾನ್ ಮಾತನಾಡಿ, ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್‍ಗಳಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ತೆರೆಯಲು, ನಗರದ ಕೇಂದ್ರ ಭಾಗದಲ್ಲಿರುವ ಬಂಧೀಖಾನೆಯನ್ನು ಹೊರ ಭಾಗಕ್ಕೆ ಸ್ಥಳಾಂತರಿಸಿ, ಆ ಜಾಗದಲ್ಲಿ ಪಾಲಿಕೆಯಿಂದ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸಲು ಅಗತ್ಯ ಅನುದಾನ ಮೀಸಲಿಡಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡ ಸೋಮ್ಲಾಪುರದ ಹನುಮಂತಪ್ಪ ಮಾತನಾಡಿ, ಬಡವರು, ಕಾರ್ಮಿಕರು, ಪೌರ ಕಾರ್ಮಿಕರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಬಜೆಟ್‍ನಲ್ಲಿ ಶೇ.18 ರಷ್ಟು ಅನುದಾನ ಮೀಸಲಿಡಬೇಕೆಂದು ಆಗ್ರಹಿಸಿದರು.ಸಭೆಯಲ್ಲಿ ಪಾಲಿಕೆ ಮೇಯರ್ ಶೋಭಾ ಪಲ್ಲಾಗಟ್ಟೆ, ಉಪ ಮೇಯರ್ ಚಮನ್‍ಸಾಬ್, ಆಯುಕ್ತ ಮಂಜುನಾಥ್ ಬಳ್ಳಾರಿ, ಸದಸ್ಯರಾದ ಹಂಚಿನಮನೆ ತಿಪ್ಪಣ್ಣ, ಎಂ.ಹಾಲೇಶ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
