ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿ: ಡಾ.ಹನುಮಂತಪ್ಪ

ಬಳ್ಳಾರಿ

         ಏ.23ರಂದು ಜರುಗುವ ಲೋಕಸಭಾ ಚುನಾವಣೆಯಲ್ಲಿ ಹರುಷದಿಂದ ಭಾಗಿಯಾಗಿ ಮತದಾನ ಮಾಡಿ ಹಾಗೂ ಮತದಾನ ಮಾಡಿಸಿ, ನಮ್ಮದು ರಾಜ ಪ್ರಭುತ್ವವಲ್ಲ, ಪ್ರಜಾಪ್ರಭುತ್ವ, ಪ್ರಜೆಯೇ ರಾಜನಾಗಬೇಕು ಎಂದು ಮಹಾನಗರ ಪಾಲಿಕೆಯ ಆರೋಗ್ಯ ಅಧಿಕಾರಿ ಡಾ.ಹನುಮಂತಪ್ಪ ಹೇಳಿದರು.

         ಜಿಲ್ಲಾ ಸ್ವೀಪ್ ಸಮಿತಿಯ ಸಹಯೋಗದೊಂದಿಗೆ ಶ್ರೀಮತಿ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯದಲ್ಲಿ ಮತದಾನ ಜಾಗೃತಿಯ ಜಾಥಾಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

        ಕಡ್ಡಾಯವಾಗಿ ಮತದಾನ ಮಾಡಿ ಸುಭದ್ರ ಪ್ರಜಾಪ್ರಭುತ್ವದ ನಿರ್ಮಾಣದಲ್ಲಿ ಭಾಗಿಯಾಗಬೇಕು. ಮತದಾನವೊಂದು ರಾಷ್ಟ್ರೀಯ ಹಬ್ಬ, ಯಾವುದೇ ಭೇದ ಭಾವವಿಲ್ಲದೆ, ಆಮಿಷ ಆಕಾಂಕ್ಷೆಗಳಿಗೆ ಒಳಗಾಗದೆ ಯೋಗ್ಯ ವ್ಯಕ್ತಿಗೆ ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಗೆಲ್ಲಿಸಿ ಎಂದು ಕರೆ ಕೊಟ್ಟರು.

         ಏ.23ರಂದು ಜರುಗುವ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತವನ್ನು ಹಾಕಿ ಮತ್ತು ಹಾಕಿಸಿ, ಏಕೆಂದರೆ ದೇಶ ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಬಲಾಢ್ಯರಾಗಬೇಕೆಂದರೆ ಸುಭದ್ರವಾದ ಪ್ರಜಾಪ್ರಭುತ್ವ ಬೇಕು. ಇಂತಹ ಪ್ರಜಾಪ್ರಭುತ್ವದ ನಿರ್ಮಾಣದಲ್ಲಿ ತಾವೆಲ್ಲರು ಭಾಗಿಯಾಗಿ ಎಂದರು.

         ಪ್ರಾಂಶುಪಾಲ ಡಾ.ಎಸ್.ವೈ.ತಿಮ್ಮಾರೆಡ್ಡಿ ಮಾತನಾಡಿ ಮತದಾನ ಮಾರಾಟದ ಸರಕು ಅಲ್ಲ, 5 ವರ್ಷಕೊಮ್ಮೆ ಸಿಗುವ ಮತದಾನದ ಅವಕಾಶವನ್ನು ಮಾರಿಕೊಳ್ಳದೇ ವಿವೇಚನಾಯುಕ್ತವಾಗಿ ಯೋಗ್ಯ ಅಭ್ಯರ್ಥಿಗೆ ಮತ ಚಲಾಯಿಸಿ ದೇಶ ಬಲಾಢ್ಯವಾಗಿ ಬೆಳೆಯಲು ಸಹಕರಿಸಬೇಕು ಎಂದರು.

         ಎನ್.ಎಸ್.ಎಸ್ ಕಾರ್ಯಕ್ರಮದ ಅಧಿಕಾರಿ ಯು.ಸೋಮಶೇಖರ್ ಇವರು ಪ್ರಾಸ್ತಾವಿಕ ಮಾತನಾಡಿದರು. ರಾಜ್ಯಶಾಸ್ತ್ರದ ವಿಭಾಗದ ಮುಖ್ಯಸ್ಥ ಡಿ.ಮಲ್ಲಿಕಾರ್ಜುನ ಸ್ವಾಗತಿಸಿದರು, ಎನ್.ಎಸ್.ಎಸ್. ಅಧಿಕಾರಿ ಯು.ಚಂದ್ರಶೇಖರ್ ಸುಂದರಮೂರ್ತಿ, ಮಂಗಳ ಹಾಗೂ ಇತರರು ಇದ್ದರು.

        ಜಾಥಾದಲ್ಲಿ ಸುಮಾರು 200 ವಿದ್ಯಾರ್ಥಿನಿಯರು ಭಾಗಿಯಾಗಿ ಜಿಲ್ಲಾ ಮತದಾನ ಸಾಕ್ಷರತಾ ಸಮಿತಿ ಕೊಟ್ಟಿರುವ ಟೋಪಿಯನ್ನು ಧರಿಸಿ ಗಾಂಧಿನಗರ, ಕಪ್ಪಗಲ್ ರಸ್ತೆ, ಸಂಗನಕಲ್ಲು ರಸ್ತೆಗಳ ಮೂಲಕ ಪ್ರತಿ ಮನೆ ಮನೆಗೆ ಬೇಟಿಕೊಟ್ಟು ಮತದಾನದ ಭಿತ್ತಿಪತ್ರವನ್ನು ಕೊಟ್ಟು ತಪ್ಪದೇ ಮತವನ್ನು ಚಲಾಯಿಸಿ ಎಂದು ಘೋಷಣೆ ಕೂಗುತ್ತಾ ಸಂಚರಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link