ಬಳ್ಳಾರಿ
ಲೋಕಸಭಾ ಚುನಾವಣಾ-2019ರ ಹಿನ್ನೆಲೆ ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವೀಪ್ ಸಮಿತಿ ನಗರದ ಎಚ್.ಆರ್.ಗವಿಯಪ್ಪ ವೃತ್ತ(ಮೋತಿ ವೃತ್ತ)ದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆದವು.
ಎಚ್.ಆರ್.ಗವಿಯಪ್ಪ ವೃತ್ತ(ಮೋತಿ ಸರ್ಕಲ್)ದ ಬಳಿ ನಿರ್ಮಿಸಲಾಗಿರುವ ಬೃಹತ್ ವೇದಿಕೆಯಲ್ಲಿ ಜೀ ಕನ್ನಡ ಸರಿಗಮಪ ಲಿಟ್ಲ್ ಚಾಂಪಿಯನ್ ಆದ ಕುಮಾರ ಜ್ಞಾನೇಶ್ವರ ಅವರು ಪ್ರಸ್ತುತಪಡಿಸಿದ ಸುಗಮ ಸಂಗೀತ ಕಾರ್ಯಕ್ರಮಕ್ಕೆ ನೆರೆದಿದ್ದ ಜನರು ಚಪ್ಪಾಳೆಯ ಮೂಲಕ ಪ್ರೋತ್ಸಾಹಿಸಿದರು.
ಹಿರಿಯ ನೃತ್ಯ ಕಲಾವಿದರಾದ ಎಸ್.ಕೆ.ಆರ್.ಜಿಲಾನಿಭಾಷಾ ಮತ್ತು ಸಂಗಡಿಗರು ಸಮೂಹ ನೃತ್ಯ ಪ್ರಸ್ತುತಪಡಿಸಿದರು.
ಚನ್ನಕೇಶವರೆಡ್ಡಿ ಮತ್ತು ಸಂಗಡಿಗರು ಪ್ರಸ್ತುತಪಡಿಸಿದ ‘ಮತದಾನ’ ನಾಟಕವು ಮತದಾನದ ಮಹತ್ವ ಸಾರಿತು ಹಾಗೂ ಯಾವುದೇ ಕಾರಣಕ್ಕೂ ಸಂವಿಧಾನ ನಮಗೆ ಕಲ್ಪಿಸಿರುವ ಮತದಾನದ ಅವಕಾಶವನ್ನು ತಪ್ಪಿಸಿಕೊಳ್ಳದೇ ಯೋಗ್ಯ ವ್ಯಕ್ತಿಗೆ ಮತಚಲಾಯಿಸಿ ಎಂಬ ಸಂದೇಶ ಸಾರಿತು.ವೀರಭದ್ರ ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ನಡೆದವು.
500ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
ಇದಕ್ಕೂ ಮುಂಚೆ ನಗರದ ಮುನ್ಸಿಪಲ್ ಕಾಲೇಜು ಮೈದಾನದಿಂದ ಎಚ್.ಆರ್.ಗವಿಯಪ್ಪ ವೃತ್ತದವರೆಗೆ ನಡೆದ ಮತದಾನ ಜಾಗೃತಿ ಜಾಥಾದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ