ಹೊಸಪೇಟೆ:
ವ್ಯವಹಾರ, ಆಸ್ತಿಪಾಸ್ತಿ ಹಾಗೂ ಕೇಸ್ಗಳಿಂದ ಬಚಾವ್ ಆಗುವ ಸಲುವಾಗಿ ಬಿಜೆಪಿ ಓಲೈಕೆಗೆ ಮುಂದಾಗಿದ್ದಾರೆ ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಶಾಸಕ ಆನಂದ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಅಮರಾವತಿ ಸರಕಾರಿ ಅತಿಥಿ ಗೃಹದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಸಂಜೆ ಬಿಜೆಪಿ ನಡೆಸುತ್ತಿರುವ ಆಪರೇಷನ್ ಕಮಲಕ್ಕೆ ಒಳಗಾಗಿರುವ ಶಾಸಕರು ಹಾಗೂ ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದರು.ಶಾಸಕ ಆನಂದ್ ಸಿಂಗ್ ಜಗಮೆಚ್ಚಿದ ಮಗನಲ್ಲ, ದೊಡ್ಡ ಮಹಲ್ನಲ್ಲಿದ್ದ ಕಂಡ ಕೆಲವರು ದೊಡ್ಡವರು, ಜಗಮೆಚ್ಚಿದವರು ಎಂದಿರಬಹುದು. ಆದರೆ ಅವರು ಎಂದೋ ಕ್ಷೇತ್ರದ ಜನರಿಗೆ ದಾರಿ ತಪ್ಪಿದ ಮಗನಾಗಿದ್ದಾರೆ ಎಂದು ಕಿಡಿಕಾರಿದರು.
ಶಾಸಕ ಆನಂದ್ ಸಿಂಗ್ ಸ್ವಾರ್ಥ ಸಾಧನೆಗೆ ಮುಂದಾಗಿದ್ದಾರೆ. ಅವರು ಸಚಿವರಾಗಿದ್ದಾಗ ಹಾಗೂ ಶಾಸಕರಾಗಿ ಎರಡು ಬಾರಿ ಆಯ್ಕೆಯಾದ ಸಂದರ್ಭದಲ್ಲಿ ಜಿಂದಾಲ್ ಸೇರಿದಂತೆ ಜಿಲ್ಲಾ ರಚನೆ ಬಗ್ಗೆ ಯಾವ ಕಾರಣಕ್ಕೆ ಪ್ರಸ್ತಾಪಿಸಿಲ್ಲ. ಕ್ಷೇತ್ರದ ರೈತರ ಸಮಸ್ಯೆ ಬಗ್ಗೆ ಸದನದಲ್ಲಿ ಮಾತನಾಡಿಲ್ಲ.
ಅಲ್ಲದೇ ಬಂದ್ ಆಗಿರುವ ಸಕ್ಕರೆ ಕಾರ್ಖಾನೆ, ತುಂಗಭದ್ರಾ ಜಲಾಶಯದಲ್ಲಿನ ಹೂಳಿನ ವಿಚಾರ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತದೆ ಈಗ ಸ್ವಾರ್ಥ ಸಾಧನೆಗೆ ರಾಜೀನಾಮೆ ಸಲ್ಲಿಸಿ ಬಿಜೆಪಿಯತ್ತ ಮುಖಮಾಡಿದ್ದಾರೆ. ಈಗಲಾದರೂ ಸಮಯವಿದೆ ಶಾಸಕ ಆನಂದ್ ಸಿಂಗ್ ವಾಪಸ್ ರಾಜೀನಾಮೆ ಪಡೆದು ಆತ್ಮಸಾಕ್ಷಿಯಿಂದ ಪಕ್ಷದಲ್ಲಿ ಮುಂದುವರೆಯಲಿ ಎಂದು ಗುಡುಗಿದರು.
ಶಾಸಕ ಸಿಂಗ್ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಏಕೆ ನಿರ್ಲಿಪ್ತರಾಗಿದ್ದರು. ಕೇಂದ್ರದ ಯಾವ ಸಚಿವರೊಂದಿಗೆ ಎಲ್ಲೆಲ್ಲಿ ಹೋಗಿದ್ದಾರೆ ಎಂಬುದುರ ಬಗ್ಗೆಯೂ ಮಾಹಿತಿ ಇದೆ. ಸಮಯ ಬಂದಾಗ ಎಲ್ಲವನ್ನೂ ಬಿಚ್ಚಿಡುವೆ ಎಂದರು.
ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಅಭದ್ರಗೊಳಿಸಲು ಬಿಜೆಪಿ ಐದು ಬಾರಿ ಪ್ರಯತ್ನಿಸಿತ್ತು. ಈಗ ಆರನೇ ಬಾರಿ ಆಪರೇಷನ್ ಕಮಲಕ್ಕೆ ಮುಂದಾಗಿದೆ. ಇದಕ್ಕೆಲ್ಲ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ವರಿಷ್ಠ ಅಮಿತ್ ಶಾ ಹಾಗೂ ಯಡಿಯೂರಪ್ಪರೇ ನೇರ ಕಾರಣ. ಪ್ರಧಾನಿ ಮೋದಿ, ಅಮಿತ್ ಶಾ ಪ್ರಜಾಪ್ರಭುತ್ವದ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ. ಸಮ್ಮಿಶ್ರ ಸರಕಾರ ಅಸ್ಥಿರಗೊಳಿಸುವ ಕಾರ್ಯ ಸಂಪೂರ್ಣವಾಗಿ ಪ್ರಧಾನಿ ಮೋದಿ, ಅಮಿತ್ ಶಾ ಅವರೇ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪಶ್ಚಿಮಬಂಗಾಲ, ಗೋವಾ, ಮಧ್ಯಪ್ರದೇಶದಲ್ಲಿನ ಶಾಸಕರನ್ನು ಹೈಜಾಕ್ ಮಾಡುತ್ತಿದ್ದಾರೆ. ನಾನಾ ರಾಜ್ಯಗಳಲ್ಲಿನ ಬಿಜೆಪಿಯೇತರ ಸರಕಾರಗಳನ್ನು ಅಭದ್ರಗೊಳಿಸಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿ ನಡೆದುಕೊಳ್ಳುತ್ತಿದ್ದಾರೆ. ಸುಪ್ರೀಂ ಕೋರ್ಟ್ ಸಂವಿಧಾನದತ್ತವಾದ ಸ್ಪೀಕರ್ ಕಾರ್ಯಕ್ಕೆ ಹಸ್ತಕ್ಷೇಪಮಾಡದೆ ಸ್ವತಂತ್ರವಾಗಿ ಕೆಲಸಮಾಡಲು ಬಿಡಬೇಕು ಎಂದರು.
ಶಾಸಕರು ಕೋಟ್ಯಂತರ ರೂಗಳಿಗೆ ಖರೀದಿಯಾಗುತ್ತಿರುವ ಬಗ್ಗೆ ರಾಜ್ಯದ ಹಾದಿ ಬೀದಿಗಳಲ್ಲಿ ಜನ ಮಾತುಡುತ್ತಿದ್ದರು ಕೇಂದ್ರದ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ(ಇಡಿ)ಏನು ಮಾಡುತ್ತಿದೆ. ಮಾತೃ ಸ್ಥಾನದಲ್ಲಿರುವ ಪಕ್ಷಕ್ಕೆ ಹಾಗೂ ವಿಶ್ವಾಸವಿಟ್ಟು ಆಯ್ಕೆಮಾಡಿ ರುವ ಜನರಿಗೆ ವಂಚಿಸದೆ ನಾಳೆ ನಡೆಯುವ ವಿಶ್ವಾಸಮತಯಾಚನೆಯಲ್ಲಿ ಆತ್ಮಸಾಕ್ಷಿಯಿಂದ ಸರಕಾರದ ಬೆಂಬಲಕ್ಕೆ ನಿಲ್ಲದಿದ್ದರೆ ಕ್ಷೇತ್ರದ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹರಿಹಾಯ್ದರು.
ವಾಲ್ಮೀಕಿ ಸಮಾಜ ಈ ಹಿಂದಿನಿಂದಲೂ ವಿಶ್ವಾಸ, ಬದ್ಧತೆಗೆ ಹೆಸರಾಗಿದೆ. ಆದರೆ ಅದೇ ಸಮಾಜದಿಂದ ಬಂದಿರುವ ಶಾಸಕ ರಮೇಶ್ ಜಾರಕಿಹೊಳಿ ಪಕ್ಷಕ್ಕೆ ನಿಷ್ಠರಾಗದೆ ಸ್ವಾರ್ಥ ಸಾಧನೆಗೆ ಬಿಜೆಪಿಗೆ ಸೇರಲು ಮುಂದಾಗಿದ್ದಾರೆ. ಅವರಲ್ಲಿ ಏನಾದರೂ ಬದ್ಧತೆ ಇದ್ದರೆ ಪಕ್ಷದಲ್ಲಿ ಮುಂದುವರೆಯಬೇಕು ಎಂದರು. ಪಕ್ಷದ ಬ್ಲಾಕ್ ಅಧ್ಯಕ್ಷ ಅಮಾಜಿ ಹೇಮಣ್ಣ, ಮುಖಂಡರಾದ ಎಚ್ಎನ್ಎಫ್ ಇಮಾಮ್ ನಿಯಾಜಿ, ಗುಜ್ಜಲ್ ನಾಗರಾಜ್, ತಾರಿಹಳ್ಳಿ ವೆಂಕಟೇಶ್, ತಮ್ಮನಳೇಪ್ಪ, ರಾಮಕೃಷ್ಣ ವರಿಕೇರಿ, ಸೋಮಪ್ಪ, ತಿಪ್ಪೇಸ್ವಾಮಿ, ಗುಜರಿ ಷಾಶಾ, ಗೋಪಿ, ಶ್ರೀನಿವಾಸ್, ವಿಜಯ್ಕುಮಾರ್, ಬಾಣದ ಗಣೇಶ್, ಲಿಯಾಕತ್ ಅಲಿ, ಕ್ಯಾರಲಿನ್ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








