ಮತದಾರರಿರುವ ಪ್ರದೇಶ ವಾರ್ಡ್ ವ್ಯಾಪ್ತಿಗೆ : ಲಕ್ಷ್ಮೀನರಸಿಂಹರಾಜು

ತುಮಕೂರು

     ತುಮಕೂರು ಮಹಾನಗರ ಪಾಲಿಕೆಗೆ ಕಳೆದ ವರ್ಷ ನಡೆದ ಮೊದಲನೇ ಚುನಾವಣೆಯಲ್ಲಿ ನಗರದ ಶಿರಾಗೇಟ್‍ನ 3 ನೇ ವಾರ್ಡ್ ವ್ಯಾಪ್ತಿಯಲ್ಲಿ ಆ ವಾರ್ಡಿನಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ಮತ ಚಲಾಯಿಸಿರುವ ಮತದಾರರು ವಾಸವಿರುವ ಪ್ರದೇಶಗಳೆಲ್ಲವೂ ಸಹಜವಾಗಿಯೇ 3 ನೇ ವಾರ್ಡ್ ವ್ಯಾಪ್ತಿಗೆ ಒಳಪಡುತ್ತವೆ” ಎಂದು 3 ನೇ ವಾರ್ಡ್‍ನ ಕಾಪೆರ್Çರೇಟರ್ ಹಾಗೂ ಪಾಲಿಕೆಯ ಹಣಕಾಸು ಮತ್ತು ತೆರಿಗೆ ನಿರ್ವಹಣೆ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನರಸಿಂಹರಾಜು (ಜೆಡಿಎಸ್) ಅವರು ಹೇಳಿಕೆ ನೀಡಿದ್ದಾರೆ.

     ನಗರದ ಶಿರಾಗೇಟ್ ವ್ಯಾಪ್ತಿಯ ವಾಸವಿ ನಗರ, ಕನಕ ನಗರ ಮತ್ತು ಅಮೃತ ನಗರದ ನಿವಾಸಿಗಳು ಮತದಾರರ ಪಟ್ಟಿಯ ಪ್ರಕಾರ 3 ನೇ ವಾರ್ಡ್ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಕಳೆದ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ 3 ನೇ ವಾರ್ಡ್‍ನಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೇ ಇಲ್ಲಿನ ಮತದಾರರು ಮತದಾನ ಮಾಡಿದ್ದಾರೆ. ಆದಕಾರಣ ಈ ಪ್ರದೇಶಗಳು 3 ನೇ ವಾರ್ಡ್‍ಗೆ ಸಹಜವಾಗಿಯೇ ಒಳಪಡುತ್ತವೆ ಎಂಬುದು ನಿರ್ವಿವಾದಕರವಾದ ಸಂಗತಿ. ವಾಸ್ತವತೆಯು ಹೀಗಿರುವುದರಿಂದ ಈ ಎಲ್ಲ ಪ್ರದೇಶಗಳ ಅಭಿವೃದ್ಧಿಯ ಜವಾಬ್ದಾರಿಯು ಈ ವಾರ್ಡಿನಿಂದ ಗೆಲುವು ಸಾಧಿಸಿರುವ ನನ್ನ ಮೇಲಿದೆ” ಎಂದು ಅವರು ತಿಳಿಸಿದ್ದಾರೆ.

     ನಾನು ಗೆದ್ದ ಬಳಿಕ 3 ನೇ ವಾರ್ಡ್ ವ್ಯಾಪ್ತಿಗೆ ಒಳಪಟ್ಟಿರುವ ವಾಸವಿ ನಗರದಲ್ಲಿ 14 ನೇ ಹಣಕಾಸು ಯೋಜನೆಯಡಿ 18 ಲಕ್ಷ ರೂ. ಅಂದಾಜಿನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕ್ರಮ ಕೈಗೊಳ್ಳಲಾಗಿದೆ. ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾರಂಭಿಸುತ್ತಿದ್ದಂತೆ ಈವರೆಗೆ ಸುಮ್ಮನಿದ್ದ ಕೆಲವರು ಈ ಪ್ರದೇಶವು 3 ನೇ ವಾರ್ಡ್ ವ್ಯಾಪ್ತಿಗೆ ಒಳಪಡುವುದಿಲ್ಲ, ಇದು ಒಂದನೇ ವಾರ್ಡ್‍ಗೆ ಸೇರಿದ್ದು ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇಲ್ಲಿನ ಮತದಾರರು 3 ನೇ ವಾರ್ಡ್‍ನ ಮತದಾರರ ಪಟ್ಟಿಯಲ್ಲಿದ್ದು, 3 ನೇ ವಾರ್ಡ್‍ನಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೇ ಮತಚಲಾಯಿಸಿರುವಾಗ ಈ ಬಡಾವಣೆಯು ಅದು ಹೇಗೆ ಒಂದನೇ ವಾರ್ಡ್‍ಗೆ ಒಳಪಡುತ್ತದೆ?” ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟಿದ್ದಾರೆ.

ಅಧಿಕಾರಿಗಳ ತಪ್ಪು

     ಪಾಲಿಕೆಗೆ ಚುನಾವಣೆ ಘೋಷಣೆಯಾದಾಗ ಅಧಿಕಾರಿ-ನೌಕರರು ವಾರ್ಡ್‍ಗಳನ್ನು ವಿಂಗಡಿಸಿ, ವಾರ್ಡ್‍ನ ಗಡಿಯನ್ನು ಗುರುತಿಸಿ ನಕ್ಷೆ ಸಿದ್ಧಪಡಿಸುವಾಗ ತಪ್ಪು ಮಾಡಿದ್ದಾರೆ. ಸಾಕ್ಷಾತ್ ಸಮೀಕ್ಷೆ ಮಾಡದೆ, ಯಾವುದೋ ಒತ್ತಡಕ್ಕೆ ಮಣಿದು, ಎಲ್ಲೋ ಕುಳಿತುಕೊಂಡು ಮನಬಂದಂತೆ ವಿಂಗಡಣೆ ಮಾಡಿ ಕೈತೊಳೆದುಕೊಂಡಿದ್ದಾರೆ. ವಾರ್ಡ್‍ನ ಗಡಿಪ್ರದೇಶಕ್ಕೆ, ವಾರ್ಡ್‍ಗೆ ಒಳಪಡುವ ಪ್ರದೇಶಗಳಿಗೆ, ಮತದಾರರ ಪಟ್ಟಿಗೆ ಒಂದಕ್ಕೊಂದು ತಾಳೆಯೇ ಆಗದಂತೆ ನಿಸ್ಸೀಮ ನಿರ್ಲಕ್ಷೃದಿಂದ ವಾರ್ಡ್‍ಗಳನ್ನು ವಿಂಗಡಿಸಿದ್ದಾರೆ” ಎಂಬುದು ಲಕ್ಷ್ಮೀನರಸಿಂಹರಾಜು ಅವರ ಆರೋಪ.

     ಚುನಾವಣೆ ದಿನಾಂಕವು ಅತಿ ಹತ್ತಿರವಿದ್ದುದರಿಂದ ಆಗಿನ ಅಭ್ಯರ್ಥಿಗಳು ಸಹ ದಿಕ್ಕುತೋಚದೆ ಚುನಾವಣೆ ಎದುರಿಸಿದ್ದಾರೆ. ಆದರೆ ಗೆದ್ದು ಜನಪ್ರತಿನಿಧಿಗಳಾದವರು ಈಗ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ ಅನಾವಶ್ಯಕವಾಗಿ ಗೊಂದಲ, ಗೋಜಲುಗಳು ಎದುರಾಗುತ್ತಿವೆ. ಅಧಿಕಾರಿಗಳು ಮಾಡಿರುವ ತಪ್ಪಿಗೆ ಈಗ ಜನಪ್ರತಿನಿಧಿಗಳು ತಲೆನೋವು ಅನುಭವಿಸುವಂತಾಗಿದೆ. ಜನರು ಸಮಸ್ಯೆ ಎದುರಿಸುವಂತಾಗುತ್ತಿದೆ” ಎಂದು ಅವರು ವಿವರಿಸಿದ್ದಾರೆ.

    ಉದಾಹರಣೆಗೆ ನಗರದ ಶಿರಾಗೇಟ್ ಆಸುಪಾಸಿನಲ್ಲಿರುವ 1, 2 ಮತ್ತು 3 ನೇ ವಾರ್ಡ್‍ಗಳ ಚೆಕ್ಕುಬಂದಿ, ವಾರ್ಡ್‍ಗೆ ಒಳಪಡುವ ಪ್ರದೇಶಗಳ ವಿವರವನ್ನು ಗೆಜೆಟ್‍ನಲ್ಲಿ ಪ್ರಕಟಿಸಿದ್ದು, ಅದನ್ನೊಮ್ಮೆ ಪರಿಶೀಲಿಸಿದರೆ ಹಾಗೂ ಈ ವಾರ್ಡ್‍ಗಳ ನಕ್ಷೆಯನ್ನು ಒಮ್ಮೆ ಗಮನಿಸಿದರೆ ಇಲ್ಲಿನ ಸಮಸ್ಯೆ ಹಾಗೂ ಗೊಂದಲ ಏನೆಂಬುದು ಅರ್ಥವಾಗುತ್ತದೆ. ಒಂದನೇ ವಾರ್ಡ್‍ನ ನಕ್ಷೆಯಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಹಾಗೂ ಗ್ರಾಮ ಪಂಚಾಯಿತಿಗೆ ಸೇರಿರುವ ನರಸಾಪುರ ಹಾಗೂ ದಿಬ್ಬೂರು ಸಮೀಪದ ಹೊಸಹಳ್ಳಿಯನ್ನು ನಮೂದಿಸಲಾಗಿದೆ.

     ನಕ್ಷೆಯೇ ಪ್ರಮುಖವೆನ್ನುವುದಾದರೆ ಈಗ ಅಲ್ಲಿಯೂ ಅಭಿವೃದ್ಧಿ ಕಾಮಗಾರಿಗಳನ್ನು ಪಾಲಿಕೆಯಿಂದ ಕೈಗೊಳ್ಳಬೇಕಾಗುತ್ತದೆ. ಇನ್ನು ಮೂರನೇ ವಾರ್ಡ್‍ನ ನಕ್ಷೆಯಲ್ಲಿ ಕೋಟೆ ಆಂಜನೇಯ ಸ್ವಾಮಿ ದೇವಾಲಯವನ್ನೂ, ದಿಬ್ಬೂರು ರಸ್ತೆಯನ್ನೂ ನಮೂದಿಸಲಾಗಿದೆ. ವಾಸ್ತವವಾಗಿ ಈ ಪ್ರದೇಶವು ಕ್ರಮವಾಗಿ 5 ಮತ್ತು 6 ನೇ ವಾರ್ಡ್‍ಗೆ ಒಳಪಡುತ್ತದೆ. ಒಟ್ಟಾರೆ ಹೀಗೆ ಅನೇಕ ಗೊಂದಲ, ಗೋಜಲುಗಳಿವೆ. ಇದನ್ನು ಸಂಬಂಧಿಸಿದವರು ಗಮನಿಸಿ ಸರಿಪಡಿಸಬೇಕು” ಎಂದು ಲಕ್ಷ್ಮೀನರಸಿಂಹರಾಜು ಅವರು ಅಭಿಪ್ರಾಯಪಟ್ಟಿದ್ದಾರೆ.

 

Recent Articles

spot_img

Related Stories

Share via
Copy link