ಚಿತ್ರದುರ್ಗ:
ಇದೇ ತಿಂಗಳ ಹದಿನೆಂಟರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಕಡ್ಡಾಯವಾಗಿ ಮತದಾನ ಮಾಡುವಂತೆ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಭಾಮ ಸರ್ಕಾರಿ ನೌಕರರಿಗೆ ಕರೆ ನೀಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ, ಜಿಲ್ಲಾ ಸ್ವೀಪ್ ಸಮಿತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಮತದಾನ ಜಾಗೃತಿ ಬಗ್ಗೆ ಮ್ಯಾರಾಥಾನ್ ಓಟ ಹಾಗೂ ಮಾನವ ಸರಪಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರ ಜಯಂತಿಯಂದೆ ಮತದಾನ ಜಾಗೃತಿ ಹಮ್ಮಿಕೊಂಡಿರುವುದು ಒಳ್ಳೆಯ ಸೂಚನೆ. ಎಲ್ಲದರಲ್ಲೂ ನಮ್ಮ ಪಾಲು ಇದೆ ಎನ್ನುವುದನ್ನು ಸರ್ಕಾರಿ ನೌಕರರು ತೋರ್ಪಡಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸತ್ಯಭಾಮ ನೌಕರರು ಮತಚಲಾಯಿಸುವುದಲ್ಲದೆ ನಿಮ್ಮ ಅಕ್ಕಪಕ್ಕದವರು, ಬಂಧು-ಬಳಗ ಸಾರ್ವಜನಿಕರಿಗೆ ಮತದಾನ ಮಾಡುವ ಕುರಿತು ಅರಿವು ಮೂಡಿಸಿ ಈ ಬಾರಿಯ ಚುನಾವಣೆಯಲ್ಲಿ ಮತದಾನದ ಶೇಕಡವಾರು ಜಾಸ್ತಿಯಾಗಬೇಕು ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಜಿ.ಜಗದೀಶ್ ಮಾತನಾಡಿ ಮತದಾನ ಪವಿತ್ರ ಮತ್ತು ಅಮೂಲ್ಯವಾದುದು. ಸರ್ಕಾರಿ ನೌಕರಿಯಲ್ಲಿದ್ದುಕೊಂಡು ಸಂಬಳ ಪಡೆಯುತ್ತಿದ್ದೇವೆಂದರೆ ಅದು ಸಾರ್ವಜನಿಕರು ಸರ್ಕಾರಕ್ಕೆ ಪಾವತಿಸುವ ತೆರಿಗೆ ಹಣ. ಅದಕ್ಕಾಗಿ ಸಮಾಜದ ಋಣ ನಮ್ಮ ಮೇಲಿರುವುದರಿಂದ ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡಿ ಎಂದು ತಿಳಿಸುವುದು ಮ್ಯಾರಥಾನ್ ಓಟದ ಉದ್ದೇಶ ಎಂದರು.
ದೇಶ ಸದೃಢವಾಗಬೇಕಾದರೆ ಶೇಕಡವಾರು ಮತದಾನ ಹೆಚ್ಚಳವಾಗಬೇಕು. ಆದ್ದರಿಂದ ಜಿಲ್ಲೆಯ ಎಲ್ಲಾ ನೌಕರರು ಮತದಾನ ಮಾಡುವುದರ ಜೊತೆಗೆ ಅಕ್ಕಪಕ್ಕದವರು ಮತದಾನ ಮಾಡುವಂತೆ ಜಾಗೃತಿಗೊಳಿಸಿ ಎಂದು ವಿನಂತಿಸಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವೈ.ರವಿಕುಮಾರ್, ಗೌರವಾಧ್ಯಕ್ಷ ಡಿ.ಎಂ.ಸಿದ್ದೇಶ್ವರ, ಉಪಾಧ್ಯಕ್ಷ ಎಸ್.ಶಿವಮೂರ್ತಿ, ಎನ್.ಸುಧಾ, ಪ್ರೊ.ಕೆ.ಕೆ.ಕಮಾನಿ, ಸೇರಿದಂತೆ ನೂರಾರು ನೌಕರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸರ್ಕಾರಿ ನೌಕರರ ಸಂಘದಿಂದ ಹೊರಟ ಮ್ಯಾರಾಥಾನ್ ಓಟ ರಂಗಯ್ಯನಬಾಗಿಲು ಮೂಲಕ, ಉಚ್ಚಂಗಿಯಲ್ಲಮ್ಮ ದೇವಸ್ಥಾನ, ಆನೆಬಾಗಿಲು ರಸ್ತೆ, ಮಹಾತ್ಮಗಾಂಧಿ ವೃತ್ತ, ಸಂತೆಹೊಂಡ, ಪ್ರಸನ್ನಟಾಕೀಸ್, ಗೋಪಾಲಪುರ ರಸ್ತೆ, ಜೆ.ಸಿ.ಆರ್. ಮೂಲಕ ಸಾಗಿ ಒನಕೆ ಓಬವ್ವ ವೃತ್ತಕ್ಕೆ ತಲುಪಿ ಮಾನವ ಸರಪಳಿ ನಿರ್ಮಿಸಿ ಮತದಾರರಲ್ಲಿ ಕಡ್ಡಾಯ ಮತದಾನ ಮಾಡುವಂತೆ ಅರಿವು ಮೂಡಿಸಿತು.