ಆಗಸ್ಟ್ 1ರಿಂದ ‘ಮತ್ತೆ ಕಲ್ಯಾಣ’ ಆಂದೋಲನ..!!

ದಾವಣಗೆರೆ

   ಜಡತ್ವಕ್ಕೆ ಸಂದ ಮನಸ್ಸುಗಳನ್ನು ಬಡಿದೆಚ್ಚರಿಸಿ ಬದುಕಿನ ಸಾರ್ಥಕತೆಯ ಮಾರ್ಗ ತೋರಿಸಿದ 12ನೇ ಶತಮಾನದ ಶರಣ ಚಳವಳಿಯ ಅರಿವಿನ ಮಾರ್ಗವನ್ನು, ಮತ್ತೆ ಕಂಡುಕೊಳ್ಳುವ ಉದ್ದೇಶದಿಂದ ಸಹಮತ ವೇದಿಕೆಯಿಂದ ಆಗಸ್ಟ್ 1ರಿಂದ 30ರ ವರೆಗೆ ರಾಜ್ಯಾದ್ಯಂತ ‘ಮತ್ತೆ ಕಲ್ಯಾಣ’ ಆಂದೋಲನ ಏರ್ಪಡಿಸಲಾಗಿದೆ.

   ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಹಮತ ವೇದಿಕೆಯ ಡಾ.ಮಂಜುನಾಥ್ ಕುರ್ಕಿ, 12ನೇ ಶತಮಾನದಲ್ಲಿ ಬಸವಾದಿ ಶರಣರು ನಡೆಸಿದ ಕ್ರಾಂತಿಯ ಫಲಿತಾಂಶಗಳಾದ ಮಾನವೀಯ ಮೌಲ್ಯ, ಸಹಮತ, ಸಮಾನತೆ ಸೇರಿದಂತೆ ಇತರೆ ಅಂಶಗಳು ಕಾಲ ಗರ್ಭದಲ್ಲಿ ಹುದುಗಿ ಹೋಗುತ್ತಿದ್ದು, ಅಸಮಾನತೆ, ವರ್ಗ, ಲಿಂಗ, ವರ್ಣ ತಾರತಮ್ಯಗಳು ಸಮಾಜದಲ್ಲಿ ತಾಂಡವವಾಡುತ್ತಿವೆ. ಹೀಗಾಗಿ ಆಧುನಿಕ ಸಮಾಜ ಕುರುಡು ಕುದುರೆಯ ಮೇಲೆ ಸವಾರಿ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

     ಸಮಾಜದಲ್ಲಿ ಮನೆ ಮಾಡಿರುವ ಅಸಮಾನತೆಯನ್ನು ನಿವಾರಿಸಲು ಹಾಗೂ ಸಮ ಸಮಾಜವನ್ನು ನಿರ್ಮಿಸಲಿಕ್ಕಾಗಿಯೇ, ಪ್ರಗತಿಪರ ಮತ್ತು ಜೀವಪರ ಆಸಕ್ತಿ ಹೊಂದಿರುವ ಸಮಾನ ಮನಸ್ಕರು ಸೇರಿ, ಹಲವು ಚಿಂಥನ-ಮಂಥನಗಳನ್ನು ನಡೆಸಿ, ಸಾಣೇಹಳ್ಳಿಯ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಹಮತ ವೇದಿಕೆಯಿಂದ ಒಂದು ತಿಂಗಳ ಪರ್ಯಂತ ರಾಜ್ಯಾದ್ಯಂತ ‘ಮತ್ತೆ ಕಲ್ಯಾಣ’ ಅಭಿಯಾನ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

     ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯವನ್ನು ವೈದಿಕ ಪರಂಪರೆಯ ಕೆಲ ವ್ಯಕ್ತಿಗಳು, ಸುಟ್ಟು ಹಾಕಿ ನಾಶ ಮಾಡಲು ಮುಂದಾಗಿದ್ದಾಗ ಶರಣೆ ಅಕ್ಕನಾಗಮ್ಮನವರು ವಚನ ಸಾಹಿತ್ಯ ಭಂಡಾರ ಗಂಟಿನೊಂದಿಗೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎಣ್ಣೆಹಳ್ಳಿ ಗ್ರಾಮಕ್ಕೆ ಬಂದು ವಚನ ಸಾಹಿತ್ಯವನ್ನು ಸಂರಕ್ಷಿಸಿದ ಕಾರಣಕ್ಕಾಗಿ, ಆಗಸ್ಟ್ 1ರಂದು ತರೀಕರೆಯಿಂದ ‘ಮತ್ತೆ ಕಲ್ಯಾಣ’ ಆಂದೋಲನ ಆರಂಭವಾಗಿ ಒಂದು ತಿಂಗಳ ಪರ್ಯಂತ ರಾಜ್ಯಾದ್ಯಂತ ಸಂಚರಿಸಿ, ಆಗಸ್ಟ್ 30ರಂದು ಬಸವಣ್ಣನವರ ಕರ್ಮ ಭೂಮಿಯಾಗಿರುವ ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಸಮಾರೋಪಗೊಳ್ಳಲಿದೆ ಎಂದು ಅವರು ವಿವರಿಸಿದರು.

ಆಂದೋಲನದ ಸ್ವರೂಪ:

     ಸಾಣೇಹಳ್ಳಿಯ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಸಾರಥ್ಯದಲ್ಲಿ ಆಗಸ್ಟ್ 1ರಿಂದ 30ರ ವರೆಗೆ ಪ್ರತಿ ಜಿಲ್ಲೆಯನ್ನು ಸಂಧಿಸುವ ‘ಮತ್ತೆ ಕಲ್ಯಾಣ’ ಆಂದೋಲನದಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ನಿಗದಿಯಾಗಿರುವ ವೇಳಾ ಪಟ್ಟಿಯಂತೆ ಬೆಳಿಗ್ಗೆ 11 ಗಂಟೆಗೆ ಕಾಲೇಜು ವಿದ್ಯಾರ್ಥಿಗಳೊಂದಿಗೆ ಶ್ರೀಗಳು ಹಾಗೂ ಇಬ್ಬರು ಚಿಂತಕರಿಂದ ಸಂವಾದ, ಸಂಜೆ 5 ಗಂಟೆಗೆ ಎಲ್ಲ ಜಾತಿ, ಧರ್ಮಗಳ ಜನರೊಂದಿಗೆ ಸಾಮರಸ್ಯ ನಡಿಗೆ, ಸಂಜೆ 6 ಗಂಟೆಗೆ ಸಾರ್ವಜನಿಕ ಸಮಾವೇಶ, ರಾತ್ರಿ 8.30ರಿಂದ ಶಿವಸಂಚಾರ ಕಲಾವಿದರಿಂದ ನಾಟಕ ಪ್ರದರ್ಶನ, ರಾತ್ರಿ 10 ಗಂಟೆಗೆ ಸಾಮೂಹಿಕ ಪ್ರಸಾದ ವ್ಯವಸ್ಥೆ ಇರಲಿದೆ ಎಂದು ಹೇಳಿದರು.

     ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ದೇವರಮನಿ ಶಿವಕುಮಾರ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಶಿವಕುಮಾರ, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್.ಬಸವಂತಪ್ಪ, ಶಿವಸೈನ್ಯದ ಅಧ್ಯಕ್ಷ ಶಶಿಧರ ಹೆಮ್ಮನಬೇತೂರು, ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಶಿವಗಂಗಾ ಬಸವರಾಜ, ಮೆಳ್ಳೆಕಟ್ಟೆ ಶ್ರೀನಿವಾಸ, ಕೊರಟಕೆರೆ ಶಿವಕುಮಾರ, ಎಚ್.ಬಸವರಾಜ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link