ಶಿಲ್ಲಾಂಗ್:
ಮೇಘಾಲಯದಲ್ಲಿ ರಾಜಾ ರಘುವಂಶಿ ಕೊಲೆಯಾಗುವ ಕೆಲವು ದಿನಗಳ ಮೊದಲ ವಿಡಿಯೊವೊಂದು ಈಗ ಸಿಕ್ಕಿದೆ. ಇದರಲ್ಲಿ ರಾಜಾ ರಘುವಂಶಿ ಮತ್ತು ಸೋನಮ್ ಇಬ್ಬರೂ ಶಿಲ್ಲಾಂಗ್‌ನಲ್ಲಿರುವ ಅತಿಥಿ ಗೃಹವೊಂದರಿಂದ ಹೊರಹೋಗುತ್ತಿರುವುದನ್ನು ಕಾಣಬಹುದು. ಅಲ್ಲದೇ ಸೋನಮ್ ಯಾರೊಂದಿಗೋ ನಿರಂತರ ಫೋನ್ ಸಂಭಾಷಣೆಯನ್ನು ನಡೆಸುತ್ತಿರುವುದು ಕೂಡ ಈ ವಿಡಿಯೊದಲ್ಲಿ ಸೆರೆಯಾಗಿದೆ. ಇದು ಹನಿಮೂನ್ ಸಮಯದಲ್ಲಿ ಸೋನಮ್ ಮತ್ತು ರಾಜಾ ರಘುವಂಶಿ ಅವರು ತಂಗಿದ್ದ ಅತಿಥಿ ಗೃಹದ ಸಿಸಿಟಿವಿ ದೃಶ್ಯವಾಳಿಗಳಾಗಿವೆ.
ಪತ್ನಿ ಸೋನಮ್ ಳೊಂದಿಗೆ ಹನಿಮೂನ್ ಗೆಂದು ಮೇಘಾಲಯಕ್ಕೆ ತೆರಳಿದ್ಧ ರಾಜಾ ರಘುವಂಶಿ ಅವರು ಕೊಲೆಯಾಗುವ ಕೆಲವು ದಿನಗಳ ಮೊದಲು ತಂಗಿದ್ದ ಅತಿಥಿ ಗೃಹದ ಸಿಸಿಟಿವಿ ದೃಶ್ಯಾವಳಿಯಲ್ಲಿ ಅವರು ಹೊರಹೋಗುವುದನ್ನು ಕಾಣಬಹುದು. ಈ ಅತಿಥಿ ಗೃಹದಲ್ಲಿ ಅವರು ಮೇ 21ರಂದು ತಂಗಿದ್ದರು. ಮೇ 22ರಂದು ಬೆಳಗ್ಗೆ ಚಿರಾಪುಂಜಿಯ ಸೊಹ್ರಾಗೆ ತೆರಳುವ ಕೆಲವು ಕ್ಷಣಗಳ ಮೊದಲ ದೃಶ್ಯಗಳು ಇದಾಗಿದೆ.
ಈ ದೃಶ್ಯಾವಳಿಯಲ್ಲಿ ಸೋನಮ್ ಯಾರೊಂದಿಗೋ ಮೊಬೈಲ್ ನಲ್ಲಿ ನಿರಂತರ ಮಾತನಾಡುತ್ತಿರುವುದನ್ನು ಕಾಣಬಹುದು. ಈ ದೃಶ್ಯಾವಳಿಗಳಲ್ಲಿ ಸೋನಮ್ ಬಳಸಿದ ಫೋನ್ ಪೊಲೀಸರಿಗೆ ಸಿಕ್ಕಿಲ್ಲ. ಆದರೆ ಇದಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ ಎನ್ನಲಾಗಿದೆ.
ನಾಪತ್ತೆಯಾಗಿರುವ ಈ ಫೋನ್‌ನಲ್ಲಿ ಪ್ರಮುಖ ಸಂದೇಶ, ಕರೆ ದಾಖಲೆಗಳು ಅಥವಾ ಡೇಟಾಗಳು ಇರುವ ಸಾಧ್ಯತೆ ಇದೆ. ಇದರಿಂದ ಅಪರಾಧದ ಉದ್ದೇಶ ಮತ್ತು ಸಮಯವನ್ನು ಪತ್ತೆಹಚ್ಚಬಹುದು ಎನ್ನುತ್ತಾರೆ ಪೊಲೀಸರು. ಸೋನಮ್ ಮತ್ತು ಆಕೆಯ ಪ್ರಿಯಕರ ರಾಜ್ ಕುಶ್ವಾಹ ಅವರ ವಿಚಾರಣೆಯನ್ನು ಪೊಲೀಸರು ಮುಂದುವರಿಸಿದ್ದು, ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗಿದೆ. ಈ ವೇಳೆ ಒಬ್ಬರು ಇನ್ನೊಬ್ಬರ ಮೇಲೆ ಆರೋಪ ಮಾಡಿದ್ದಾರೆ ಎನ್ನಲಾಗಿದೆ.
