ಮಾವು ವಿಚಾರ ಸಂಕಿರಣವನ್ನು ಉದ್ಘಾಟನೆ

ಹಾನಗಲ್ಲ :

       ಹಾನಗಲ್ಲ ತಾಲೂಕು ಮಾವು ಬೆಳೆಗೆ ಹೆಸರು ಪಡೆಯುವಂತಾಗಲು ಮಧ್ಯವರ್ತಿಗಳಿಂದ ದೂರವುಳಿದು ರೈತರೇ ಮಾರುಕಟ್ಟೆ ಸೃಷ್ಟಿಗೆ ಮುಂದಾಗಬೇಕು ಎಂದು ಶಾಸಕ ಸಿ.ಎಂ.ಉದಾಸಿ ಕರೆ ನೀಡಿದರು.

          ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದ ಮಲ್ಲನಗೌಡ ವೀರನಗೌಡ್ರ ಮಾವಿನ ತೋಟದಲ್ಲಿ ತೋಟಗಾರಿಕೆ ಇಲಾಖೆ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಇವರ ಆಶ್ರಯದಲ್ಲಿ ಆಯೋಜಿಸಿದ್ದ ಮಾವು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾವು ಬೆಳೆ ನಷ್ಟದಲ್ಲಿಲ್ಲ, ಆದರೆ ಅಗತ್ಯ ವೈಜ್ಞಾನಿಕತೆ ಅಳವಡಿಸಿಕೊಳ್ಳದಿರುವುದು, ಸಕಾಲಕ್ಕೆ ಗಿಡಗಳ ನಿರ್ವಹಣೆ ಮಾಡದಿರುವುದು, ಕೊಯ್ಲು ಪದ್ಧತಿ ಬದಲಾಗದಂಥ ಪ್ರಮುಖ ಕಾರಣಗಳಿಂದಾಗಿ ನಮಗೆ ಮಾವು ಲಾಭದಾಯಕವಾಗಿ ಕಾಣುತ್ತಿಲ್ಲ. ಕಾಲ ಬದಲಾದಂತೆ ಕೃಷಿಯಲ್ಲೂ ಬದಲಾವಣೆ ಅತ್ಯಗತ್ಯವಾಗಿದೆ.

         “ಹಾನಗಲ್ಲ ಮಾವು” ಎಂಬ ಹೆಸರಿನ ಮಾರುಕಟ್ಟೆ ಸೃಷ್ಟಿ ಮಾಡಿದರೆ ತಾಲೂಕಿನ ರೈತರು ತೋಟಗಾರಿಕೆಯಲ್ಲಿ ಲಾಭ ಕಾಣಲು ಸಾಧ್ಯವಿದೆ ಎಂದು ಸಲಹೆ ಮಾಡಿದ ಅವರು, ಮಾವು ಬೆಳೆಗೂ ವಿಮಾ ಸೌಲಭ್ಯವಿದ್ದು, ಹವಾಮಾನ ವೈಪರೀತ್ಯದ ಲಾಭ ಪಡೆಯಬಹುದು ಎಂದು ವಿವರಿಸಿದರು.

          ತೋಟಗಾರಿಕೆ ನಿವೃತ್ತ ಅಪರ ನಿರ್ದೇಶಕ ಎಸ್.ವಿ.ಹಿತ್ತಲಮನಿ ಉಪನ್ಯಾಸ ನೀಡಿ, ಹಾನಗಲ್ಲಿನ ಮಾವು ಬೇರೆಯವರ `ಬ್ರಾಂಡ್‍ನೇಮ್’ನಲ್ಲಿ ದೇಶಾದ್ಯಂತ ಹೆಸರುವಾಸಿಯಾಗಿದೆ. ಅದು ಇಲ್ಲಿನ ರೈತರಿಗೆ ತಿಳಿಯುತ್ತಿಲ್ಲ. ಇಲ್ಲಿನ ರೈತರು ಬೇರೆಯವರಿಗೆ ಲಾಭ ಮಾಡಿಕೊಡುತ್ತಿದ್ದಾರೆ. ನೇರವಾಗಿ ಮಾರುಕಟ್ಟೆಗಿಳಿಯುವ ಸಾಹಸ ತೋರಿದರೆ ಮಾವು ಬೆಳೆಯಲ್ಲಿ ಕೋಟಿರೂ ಹಣ ಎಣಿಸಬಹುದಾಗಿದೆ. ಹಾವೇರಿ ಜಿಲ್ಲೆಯ ಹವಾಗುಣ ಮಾವಿಗೆ ಸೂಕ್ತವಾಗಿದ್ದು, ಅಲೋನ್ಸ ಮಾವು ಇಲ್ಲಿನಷ್ಟು ಎಲ್ಲೂ ಸ್ವಾದಿಷ್ಟವಾಗಿರಲಾರದು. ಸುಣ್ಣ, ಫಾಸ್ಪರಸ್, ಪೊಟ್ಯಾಷ್ ಸೇರಿದಂತೆ ಒಂದಷ್ಟು ವೈಜ್ಞಾನಿಕ ಕೊರತೆಗಳನ್ನು ರೈತರು ಭೂಮಿಗೆ ಸೇರಿಸುವ ಅಗತ್ಯವಿದೆ. ಹೂ ಬಿಟ್ಟಾಗ ಜಾಗೃತೆ ವಹಿಸಬೇಕು. ಜಿಗಿಹುಳುವಿನ ಬಾಧೆ, ಬೂದಿರೋಗ, ಇಬ್ಬನಿಯಿಂದ ರಕ್ಷಿಸಲು ತಾಂತ್ರಿಕ ಸಲಹೆ ಪಡೆಯುವುದು ಅಗತ್ಯವಾಗಿದೆ. ರಾಸಾಯನಿಕಗಳನ್ನು ಬಳಸಿ ಹಣ್ಣು ಮಾಡಬಾರದು, ಹಣ್ಣು ಬಲಿತಾಗ ಕೂಡಲೇ ಕೊಯ್ಲು ಮಾಡಿ ಹುಳುವಿನ ಬಾಧೆ ತಡೆಗಟ್ಟಬಹುದು ಎಂದು ವಿವರಿಸಿದರು.

        ಜಿಲ್ಲಾ ತೋಟಗಾರಿಕೆ ಉಪನಿರ್ದೇಶಕ ಎಸ್.ಪಿ.ಬೋಗಿ ಮಾತನಾಡಿ, ಮಾವು ಭಾರತ ಮೂಲದ ಬೆಳೆಯಾಗಿದ್ದು, ಅರಬ್ ದೇಶಗಳಿಗೆ ರಫ್ತಾಗುತ್ತದೆ. ಭಾರತದ ಮಾವನ್ನು ಉಳಿದೆಲ್ಲ ದೇಶದ ಜನರು ಇಷ್ಟಪಡುತ್ತಾರೆ. ರಾಜ್ಯದಲ್ಲಿ 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಹಾವೇರಿ ಜಿಲ್ಲೆಯಲ್ಲಿ ಪ್ರತಿ ವರ್ಷ 50 ಸಾವಿರ ಟನ್ ಉತ್ಪಾದನೆಯಾಗುತ್ತದೆ. ಪ್ರಸಕ್ತ ವರ್ಷ ಎನ್‍ಆರ್‍ಇಜಿ ಹಾಗೂ ರಾಷ್ಟ್ರೀಯ ತೋಟಗಾರಿಕೆ ಮೆಶಿನ್ ಯೋಜನೆಯಡಿ 2 ಸಾವಿರ ಎಕರೆ ಪ್ರದೇಶ ವಿಸ್ತರಿಸಲಾಗಿದೆ. ಇದರಲ್ಲಿ ಹನಿನೀರಾವರಿ, ಹಳೆಯ ತೋಟಗಳ ಪುನಶ್ಚೇತನ, ಗಿಡಗಳ ನಿರ್ವಹಣೆ ನಡೆಸಲಾಗುತ್ತದೆ. ಇಸ್ರೇಲ್ ಮಾದರಿಯಲ್ಲಿ ಮಾವು ಬೆಳೆಗೆ ರಾಜ್ಯ-ಕೇಂದ್ರ ಸರ್ಕಾರಗಳು 3 ಕೋಟಿ ಅನುದಾನ ಮೀಸಲಿರಿಸಿವೆ. ರೈತ ಸಮುದಾಯ ಇದರ ಲಾಭ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

          ಕಾರ್ಯಾಗಾರದಲ್ಲಿ ವಿಜ್ಞಾನಿಗಳಾದ ಡಾ.ಟಿ.ಬಿ.ಅಳ್ಳೋಳ್ಳಿ, ಡಾ.ಪಿ.ಅಶೋಕ, ಅಬ್ದುಲ್ ಕರಿಂ, ಡಾ.ಪ್ರಭುದೇವ ಉಪನ್ಯಾಸ ನೀಡಿದರು. ವಿಚಾರ ಸಂಕಿರಣದಲ್ಲಿ ಮಾವು ಬೆಳೆಯ ಕುರಿತು ರೈತರಿಗಾಗಿ ಮಾವು ಕೈಪಿಡಿ ಬಿಡುಗಡೆಗೊಳಿಸಲಾಯಿತು. ತಾಪಂ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ, ಗ್ರಾಪಂ ಅಧ್ಯಕ್ಷೆ ರಮೀಜಾಬಿ ಹಂಚಿನಮನಿ, ಸಿ.ಕೆ.ಪಾಟೀಲ, ತೋಟಗಾರಿಕೆ ಜಂಟಿ ನಿದೇಶಕ ಸೋಮಶೇಖರ ಹುಲ್ಲೊಳ್ಳಿ. ಮಾವು ಅಭಿವೃದ್ಧಿ ಮಂಡಳಿ ಉಪನಿರ್ದೇಶಕ ಎಚ್.ಬಾಲಕೃಷ್ಣ, ಮಾವು ಬೆಳೆಗಾರರಾದ ಬಿ.ಎಸ್.ಅಕ್ಕಿವಳ್ಳಿ, ಮಲ್ಲನಗೌಡ ವೀರನಗೌಡ್ರ, ಕಲ್ಯಾಣಕುಮಾರ ಶೆಟ್ಟರ, ಮಲ್ಲನಗೌಡ ಪಾಟೀಲ, ಅಡಿವೆಪ್ಪ ಆಲದಕಟ್ಟಿ, ಮರಿಗೌಡ ಪಾಟೀಲ, ಮನೋಜ ದೇಸಾಯಿ ವೇದಿಕೆಯಲ್ಲಿದ್ದರು. ಸಹಾಯಕ ತೋಟಗಾರಿಕೆ ನಿರ್ದೇಶಕ ಮಂಜುನಾಥ ಬಣಕಾರ ಸ್ವಾಗತಿಸಿದರು

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link