ದಾವಣಗೆರೆ
ಅಭಿವೃದ್ದಿಯಾದಗೇ ಇರುವ ಖಾಸಗಿ ಬಡಾವಣೆಗಳಿಗೆ ಡೋರ್ ನಂಬರ್ ನೀಡಲಾಗಿದೆ ಎಂಬ ಆರೋಪ ಬಂದಿರುವ ಹಿನ್ನೆಲೆಯಲ್ಲಿ, ಮೇಯರ್ ಶೋಭಾ ಪಲ್ಲಾಗಟ್ಟೆ ಅಧ್ಯಕ್ಷತೆಯಲ್ಲಿ ಉಪಸಮಿತಿ ರಚಿಸಿ, ಬರುವ ಬುಧವಾರದಂದು ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಶನಿವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ಇಲ್ಲಿನ ಪಾಲಿಕೆ ಸಭಾಂಗಣದಲ್ಲಿ ಮೇಯರ್ ಶೋಭಾ ಪಲ್ಲಾಗಟ್ಟೆ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಮಾತನಾಡಿದ ಪಾಲಿಕೆ ಸದಸ್ಯ ಆವರಗೆರೆ ಉಮೇಶ್, ಪಾಲಿಕೆಯಲ್ಲಿ ಡೋರ್ ನಂಬರ್ ನೀಡುತ್ತಿರುವುದನ್ನು ಬಿಟ್ಟರೇ, ಬೇರೇನೂ ನಡೆಯುತ್ತಿಲ್ಲ. ಯಾವ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ಡೋರ್‍ನಂಬರ್ ಕಡತ ಹೋಗುತ್ತಿಲ್ಲ. ಬಿರಾದರ್ ಹಾಗೂ ಅಣಜಿ ನಾಗರಾಜ್ ಇಬ್ಬರೇ ಡೋರ್ ನಂಬರ್ ಕೊಡುತ್ತಿದ್ದಾರೆ. ಹಂದಿಗಳ ಗೂಡಿನಂತಿರುವ ಖಾಸಗಿ ಬಡಾವಣೆಗಳಲ್ಲಿ ಯಾವುದೇ ಅಭಿವೃದ್ಧಿ ಯಾಗದಿದ್ದರೂ, ಸ್ಥಳಪರಿಶೀಲನೆ ನಡೆಸದೆಯೇ ಡೋರ್ ನಂಬರ್ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಇದಕ್ಕೆ ದನಿಗೂಡಿಸಿದ ಪಾಲಿಕೆ ಸದಸ್ಯ ಪಿ.ಕೆ.ಲಿಂಗರಾಜ್, ಕಳೆದ ಒಂದು ವರ್ಷದ ಅವಧಿಯಲ್ಲಿಯೇ ಸುಮಾರು ಇನ್ನೂರಾ ಚಿಲ್ಲರೆ ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಖಾಸಗಿ ಬಡಾವಣೆಗಳಿಗೆ ಡೋರ್ ನಂಬರ್ ನೀಡಲಾಗಿದೆ. ಈ ಬಗ್ಗೆ ಮಾಹಿತಿ ಕೇಳಿ ಒಂದು ತಿಂಗಳು ಆರು ದಿನವಾದರೂ ಸಹ ಮಾಹಿತಿ ನೀಡದಿರಲು ಕಾರಣವೇನು? ಎಂದು ಪ್ರಶ್ನಿಸಿದರು.
ಹಿಂದಿನ ಎಲ್ಲಾ ಮೇಯರ್‍ಗಳು ಸ್ಥಾಯಿಸಮಿತಿಯ ಗಮನಕ್ಕೆ ತಂದು ಡೋರ್ ನಂಬರ್ ನೀಡುತ್ತಿದ್ದರು. ಆದರೆ, ನೀವೇಕೆ ಯಾರ ಗಮನಕ್ಕೆ ತಾರದೆಯೇ ಡೋರ್ ನಂಬರ್ ನೀಡಿದ್ದೀರಾ? ಎಂದು ಪ್ರಶ್ನಿಸಿದ ಅವರು, ಸಿಎ ನಿವೇಶನ ಕಾಯ್ದಿರಿಸಿಲ್ಲ, ಉದ್ಯಾನವನವಿಲ್ಲ, ವಿದ್ಯುತ್ ದೀಪ ಅಳವಡಿಕೆಯಾಗಿಲ್ಲ, ಎಸ್‍ಟಿಪಿ ಪ್ಲಾಂಟ್ ಇಲ್ಲ.
ಆದರೂ ಡೋರ್ ನಂಬರ್ ನೀಡಲಾಗಿದೆ. ಆದ್ದರಿಂದ ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ, ಅಭಿವೃದ್ಧಿಯಾಗದೇ ಇರುವ ಬಡಾವಣೆಗಳಲ್ಲಿ ನೀಡಿರುವ ಡೋರ್ ನಂಬರ್‍ಗಳನ್ನು ರದ್ದು ಮಾಡಬೇಕೆಂದು ಆಗ್ರಹಿಸಿದರು.ಈ ವೇಳೆ ಪಾಲಿಕೆ ಸದಸ್ಯರಾದ ಎಂ.ಹಾಲೇಶ್, ಶಿವಗಂಗಾ ಬಸವರಾಜ್, ಡೋರ್ ನಂಬರ್ ಕೊಡುವುದು ನಮ್ಮ ಪಾಲಿಕೆ ಕರ್ತವ್ಯವಾಗಿದೆ. ಆದರೆ, ಎಲ್ಲಾ ಇಲಾಖೆಗಳಿಂದ ಎನ್‍ಒಸಿ ಪಡೆದು ಡೂಡಾ ಅಪ್ರವೋಲ್ ನೀಡಿದ ನಂತರ ಪಾಲಿಕೆ ಡೋರ್ ನಂಬರ್ ನೀಡಲಿದೆ ಎಂದರು.
ಇದಕ್ಕೆ ಪ್ರತಿಕ್ರಯಿಸಿದ ಸಿಪಿಐ ಸದಸ್ಯ ಆವರಗೆರೆ ಉಮೇಶ್, ಡೂಡಾ ನಮಗೆ ದೊಡ್ಡಪ್ಪವಲ್ಲ. ನಮ್ಮ ಅಡಿಯಲ್ಲಿ ಬರುವ ಪ್ರಾಧಿಕಾರವಾಗಿದೆ. ಡೂಡಾ ಸರಿಯಾಗಿ ಪರಿಶೀಲನೆ ನಡೆಸದೇ, ಅಪ್ರೂವಲ್ ಕೊಟ್ಟು, ಡೋರ್ ನಂಬರ್‍ಗೆ ಕಳುಹಿಸಿದ್ದರೆ, ವಾಪಾಸ್ ಕಳುಹಿಸಿ ಎಂದು ತಾಕೀತು ಮಾಡಿದರು.
ಈ ವೇಳೆ ಮಾತನಾಡಿದ ಆಯುಕ್ತ ವೀರೇಂದ್ರ ಕುಂದಗೋಳ, ಡೋರ್ ನಂಬರ್ ನೀಡಿರುವ ಬಡಾವಣೆಗಳ ಪರಿಶೀಲನೆಗೆ ಮೇಯರ್ ಅಧ್ಯಕ್ಷತೆಯಲ್ಲಿ ಉಪ ಸಮಿತಿ ಮಾಡಿ, ಬುಧವಾರದಂದು ಪರಿಶೀಲನೆ ನಡೆಸಲಾಗುವುದು. ಈ ವೇಳೆ ಬಡಾವಣೆಗಳನ್ನು ಸರಿಯಾಗಿ ಅಭಿವೃದ್ಧಿ ಪಡಿಸದಿರುವುದು ಕಂಡು ಬಂದರೆ, ಕೊಟ್ಟಿರುವ ಡೋರ್ ನಂಬರ್‍ಗಳನ್ನು ರದ್ದು ಮಾಡಲಾಗುವುದು ಎಂದರು.
ಸದಸ್ಯ ಅಬ್ದುಲ್ ಲತೀಫ್ ಮಾತನಾಡಿ, ಫಾಗಿಂಗ್ ಮಾಡುವವರ ಪತ್ತೆ ಇಲ್ಲ. ಇದನ್ನು ಕೇಳಿದರೆ, ಹಣವಿಲ್ಲ ಎನ್ನುತ್ತಾರೆ. ಬೇಸಿಗೆಯಲ್ಲಿ ವಿಪರೀತವಾಗಿ ಸೊಳ್ಳೆ ಕಾಟವಾಗಿದೆ. ನಮಗಾದರೂ ಆ ಮೇಷಿನ್ ಕೊಡಿ ನಾವಾದರೂ ಫಾಗಿಂಗ್ ಮಾಡಿಸುತ್ತೇವೆ ಎಂದರು.
ಅಶ್ವಿನಿ ವೇದಮೂರ್ತಿ ಮಾತನಾಡಿ, ನಗರದ ಶ್ಯಾಮನೂರು ಗ್ರಾಮದ ರಿ.ಸ.ಸಂಖ್ಯೆ 145 ರ ಡೋರ್ ನಂ: 3682/ಎ ರಲ್ಲಿನ ನಿವೇಶನ ಅಳತೆ 150*300 ಅಡಿ ಜಾಗವು ಅನಾಥ ಸೇವಾಶ್ರಮ ಮಲ್ಲಾಡಿಹಳ್ಳಿ ಇವರ ಹೆಸರಿಗೆ ಇದ್ದು, ಸರ್.ಎಂ ವಿಶ್ವೇಶ್ವರಯ್ಯ ಎಜಕೇಷನ್ ಅಕಾಡೆಮಿ ದಾವಣಗೆರೆ ಇವರು ಶೈಕ್ಷಣಿಕ ಕಟ್ಟಡ ನಿರ್ಮಿಸುವ ಉದ್ದೇಶಕ್ಕಾಗಿ ಕೋರಿದ ಪರವಾನಿಗೆಗೆ ತಮ್ಮ ವಿರೋಧವಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಉಪ ಮೇಯರ್ ಚಮನ್‍ಸಾಬ್ ಮಾತನಾಡಿ, ಪಾಲಿಕೆಯಿಂದ ಕೇಸ್ ನಡೆಸಲು ಇರುವ ವಕೀಲರನ್ನು ಬದಲಾಯಿಸಬೇಕು. ಏಕೆಂದರೆ ಅವರು ಯಾವ ಕೇಸ್ ನಡೆಸುತ್ತಿದ್ದಾರೆ. ವಕೀಲರು ಯಾರು ಎಂಬುದೇ ಗೊತ್ತಾಗುತ್ತಿಲ್ಲ ಎಂದು ದೂರಿದರು. ಇದಕ್ಕೆ ಎಲ್ಲಾ ಸದಸ್ಯರು ಸಹಮತ ವ್ಯಕ್ತಪಡಿಸಿದರು.ಆಗ ಆಯುಕ್ತ ವೀರೇಂದ್ರ ಕುಂದಗೋಳ್ ಮಾತನಾಡಿ, ಈ ವರೆಗೂ ನಮ್ಮ ಪಾಲಿಕೆಯ ಒಂದೂ ಕೇಸ್ ಗೆಲ್ಲದ ವಕೀಲರನ್ನು ಬದಲಾಯಿಸಲಾಗುವುದು ಎಂದರು.ಸಭೆಯಲ್ಲಿ ಶಾಸಕ ಎಸ್.ಎ.ರವೀಂದ್ರನಾಥ್ ಮತ್ತಿತರರು ಹಾಜರಿದ್ದರು.