ಎಂ.ಸಿ.ಎಂ.ಸಿ. ಸಮಿತಿಯಿಂದ ಅಭ್ಯರ್ಥಿ ಅನುಮತಿ ಪಡೆಯಬೇಕು : ಕೃಷ್ಣ ಬಾಜಪೇಯಿ

ಹಾವೇರಿ

        ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿ ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ಬಿಡುಗಡೆಮಾಡುವ ಮುನ್ನ ಭಾರತ ಚುನಾವಣಾ ಆಯೋಗದ ಮಾರ್ಗ ಸೂಚಿಯಂತೆ ಜಿಲ್ಲಾ ಮಟ್ಟದಲ್ಲಿ ರಚಿತವಾಗಿರುವ ಮಾಧ್ಯಮ ಪ್ರಮಾಣೀಕರಣ ಸಮಿತಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಅವರು ಹೇಳಿದರು.

       ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಏರ್ಪಡಿಸಿದ್ದ ಮಾಧ್ಯಮ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

         ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿ ಮಾಧ್ಯಮಗಳಿಗೆ ಜಾಹೀರಾತು ನೀಡುವ ಮುನ್ನ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಸಮಿತಿಗೆ ಜಾಹೀರಾತಿನ ಲಿಖಿತ ಮತ್ತು ಡಿಜಿಟಲ್ ಪ್ರತಿಗಳನ್ನು ನಿಗದಿತ ಅರ್ಜಿ ನಮೂನೆಯೊಂದಿಗೆ ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕು. ನಂತರವಷ್ಟೇ ಪ್ರಕಟಣೆಯಾಗಬೇಕು ಎಂದು ತಿಳಿಸಿದರು.

         ಏಕಪಕ್ಷೀಯವಾಗಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿ ಹಾಗೂ ಪಕ್ಷಕ್ಕೆ ಬೆಂಬಲಿಸುವ ಅಥವಾ ಉತ್ತೇಜಿಸುವ ರೀತಿಯಲ್ಲಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಲೇಖನ, ಸುದ್ದಿಗಳು ಪ್ರಕಟವಾದರೆ ಪಾವತಿ ಸುದ್ದಿ ಎಂದು ಪರಿಗಣಿಸಲಾಗುತ್ತದೆ. ಈ ರೀತಿಯ ಸುದ್ದಿಗಳು ಯಾವುದೇ ಮಾಧ್ಯಮಗಳಲ್ಲಿ ಬಿತ್ತರವಾದರೆ ಚುನಾವಣಾ ಆಯೋಗದ ಗಮನಕ್ಕೆ ತರುವುದರ ಮೂಲಕ ಪಾರದರ್ಶಕ ಚುನಾವಣೆಗೆ ಸಹಕರಿಸುವಂತೆ ಮಾಧ್ಯಮ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಮನವಿ ಮಾಡಿಕೊಂಡರು.

         ಅಪರ ಜಿಲ್ಲಾಧಿಕಾರಿ ಎಚ್.ಚಂದ್ರಶೇಖರ ಅವರು ಮಾಧ್ಯಮ ಪ್ರಮಾಣೀಕರಣ ಹಾಗೂ ಮಾಧ್ಯಮ ಕಣ್ಗಾವಲು ಸಮಿತಿಯ ನಿಯಮಾವಳಿಗಳು ಹಾಗೂ ಕಾರ್ಯವಿಧಾನ ಕುರಿತಂತೆ ಪವರ್ ಪಾಯಿಂಟ್ ಮೂಲಕ ವಿವರಿಸಿ, ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಮಾಧ್ಯಮ ಸಂಸ್ಥೆಯ ಪ್ರಮುಖರು ಪಾವತಿ ಸುದ್ದಿಗಳನ್ನು ತಡೆಯುವ ನಿಟ್ಟಿನಲ್ಲಿ ಭಾರತ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ 2010 ಹಾಗೂ 2011ರಲ್ಲಿ ಭಾರತ ಚುನಾವಣಾ ಆಯೋಗ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿ ಹಾಗೂ ಜಾಹೀರಾತುಗಳ ಮೇಲೆ ನಿಗಾವಹಿಸಲು ಎಂ.ಸಿ.ಎಂ.ಸಿ. ಸಮಿತಿಗಳನ್ನು ರಚಿಸಿದೆ. ಈ ಸಮಿತಿ ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತದೆ. ಪೇಡ್ ನ್ಯೂಸ್ ಪರಿಶೀಲಿಸಲು, ಜಾಹೀರಾತುಗಳಿಗೆ ಪೂರ್ವಾನುಮತಿ ನೀಡಲು ಈ ಸಮಿತಿ ಕಾರ್ಯನಿರ್ವಹಿಸುತ್ತದೆ . ಸುದ್ದಿಗಳ ಮೇಲೆ ನಿಗಾವಹಿಸುತ್ತದೆ ಎಂದು ವಿವರಿಸಿದರು.

            ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಪ್ರಚಾರದ ಜಾಹೀರಾತುಗಳಿಗೆ ಪೂರ್ವಾನುಮತಿ ಅಗತ್ಯವಾಗಿದೆ. ಬಲ್ಕ್ ಎಸ್‍ಎಂಎಸ್,ಆಟೋ, ಜೀಪ್ , ವಿದ್ಯುನ್ಮಾನ ವಿಡಿಯೋ ಫಲಕ ಹೊಂದಿರುವ ವಾಹನಗಳ ಮೂಲಕ ಕೈಗೊಳ್ಳುವ ಪ್ರಚಾರಕ್ಕೂ ಅನ್ವಯಿಸುತ್ತದೆ. ಮುದ್ರಣ ಮಾಧ್ಯಮಗಳಿಗೆ ಈ ನಿರ್ಬಂಧ ಇಲ್ಲ ಆದರೆ ಅವುಗಳ ಆನ್‍ಲೈನ್ ಆವೃತ್ತಿ, ಇ ಪೇಪರ್‍ಗಳಲ್ಲಿ ಜಾಹೀರಾತು ಪ್ರಕಟಣೆಗೆ ಅನುಮತಿ ಕಡ್ಡಾಯವಾಗಿದೆ. ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಯು ಎಂ.ಸಿ.ಎಂ.ಸಿ. ಸಮಿತಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ.

         ಜಾಹೀರಾತು ವೆಚ್ಚವಾಗಿ ಅಭ್ಯರ್ಥಿಯು ಯಾವುದೇ ಕಾರಣಕ್ಕೂ ನಗದು ರೂಪದಲ್ಲಿ ಹಣ ಪಾವತಿ ಮಾಡದೇ ಚೆಕ್ ಅಥವಾ ಡಿಡಿ ಮೂಲಕ ಮಾಧ್ಯಮ ಸಂಸ್ಥೆಗಳಿಗೆ ಜಾಹೀರಾತು ವೆಚ್ಚ ಪಾವತಿಸಬೇಕು ಎಂದು ತಿಳಿಸಿದರು.ಮುದ್ರಣ ಮಾಧ್ಯಮದಲ್ಲಿ ಬಿತ್ತರವಾಗುವ ಜಾಹೀರಾತಿಗೆ ಪೂರ್ವಾನುಮತಿ ಅಗತ್ಯವಿಲ್ಲ. ಆದರೆ ಮತದಾನಕ್ಕೆ 48 ಗಂಟೆಗಳ ಮುನ್ನ ಅವಧಿಯಲ್ಲಿ ಮುದ್ರಣ ಮಾಧ್ಯಮಗಳಲ್ಲಿ ಪ್ರಕಟಿಸುವ ಜಾಹೀರಾತುಗಳಿಗೆ ಪೂರ್ವಾನುಮತಿ ಪಡೆಯಬೇಕಾಗುತ್ತದೆ. ಈ ನಿಯಮವನ್ನು ಉಲ್ಲಂಘಿಸಿದರೆ ಭಾರತೀಯ ದಂಡ ಸಂಹಿತೆಯ 171ಹೆಚ್ ಕಲಂ ಅನ್ವಯ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಹೇಳಿದರು.

       ಯಾವುದೇ ಪಕ್ಷ ಮತ್ತು ಅಭ್ಯರ್ಥಿಯ ಪರವಾಗಿ ಪ್ರಭಾವ ಬೀರುವ, ಅವರ ಅಭ್ಯರ್ಥಿತನವನ್ನು ಪ್ರೋತ್ಸಾಹಿಸುವ ರೀತಿಯಲ್ಲಿ ಸುದ್ದಿಗಳನ್ನು ಪ್ರಕಟಿಸಿದಾಗ ಜಿಲ್ಲಾ ಮಾಧ್ಯಮ ನಿಗಾ ಮತ್ತು ಮಾಧ್ಯಮ ಪ್ರಮಾಣೀಕರಣ ಸಮಿತಿಯ ನಿರ್ಣಯದಂತೆ ಅದನ್ನು ಕಾಸಿಗಾಗಿ ಸುದ್ದಿ ಎಂದು ಪರಿಗಣಿಸಿ,ಅಭ್ಯರ್ಥಿಯ ವೆಚ್ಚಕ್ಕೆ ಸೇರಿಸಲಾಗುವುದು ಎಂದು ತಿಳಿಸಿದರು.

        ರಾಜಕೀಯ ಪಕ್ಷಗಳು ಅಥವಾ ಚುನಾವಣೆ ಕಣದಲ್ಲಿರುವ ಅಭ್ಯರ್ಥಿಯು ಮಾಧ್ಯಮಗಳಲ್ಲಿ ಪ್ರಕಟಪಡಿಸಲು ಪೂರ್ವಾನುಮತಿಗೆ ಸಲ್ಲಿಸಿದ ಜಾಹೀರಾತು ವಿಷಯ, ಪ್ರಸಾರಕ್ಕೆ ಯೋಗ್ಯವಲ್ಲ ಎಂದು ತಿರಸ್ಕರಿಸಬಹುದು ಅಥವಾ ತಿದ್ದುಪಡಿಮಾಡಿ ಪುನಃ ಸಲ್ಲಿಸಲು ಸೂಚಿಸಬಹುದು. ಎಂ.ಸಿ.ಎಂ.ಸಿ. ಸಮಿತಿ ಅಂತಿಮಗೊಳಿಸಿದ ಜಾಹೀರಾತು ವಿಷಯವನ್ನು ಮಾತ್ರ ಮಾಧ್ಯಮಗಳು ಪರಿಗಣಿಸಬೇಕು ಎಂದು ತಿಳಿಸಿದರು.

        ಪಾವತಿ ಸುದ್ದಿ ಅಥವಾ ಅನಧಿಕೃತ ಜಾಹೀರಾತು ಎಂದು ಕಂಡು ಬಂದರೆ ಪ್ರಕಟವಾದ 96 ಗಂಟೆಯೊಳಗೆ ಅಭ್ಯರ್ಥಿ ಅಥವಾ ಪಕ್ಷಕ್ಕೆ ಉತ್ತರಿಸಲು ನೋಟೀಸ್ ಜಾರಿ ಮಾಡಲಾಗುತ್ತದೆ. ನೋಟೀಸ್ ಪಡೆದ ಅಭ್ಯರ್ಥಿಯು 48 ಗಂಟೆಯೊಳಗಾಗಿ ಉತ್ತರ ನೀಡದಿದ್ದಲ್ಲಿ ಸಮಿತಿಯು ಪೇಡ್ ನ್ಯೂಸ್ ಎಂದು ಪರಿಗಣಿಸಿ ಚುನಾವಣಾ ಆಯೋಗಕ್ಕೆ ಕಳುಹಿಸಲಾಗುತ್ತದೆ ಎಂದು ಹೇಳಿದರು.

        ಕಾರ್ಯಕ್ರಮದಲ್ಲಿ ಎಂ.ಸಿ.ಎಂ.ಸಿ. ನೋಡಲ್ ಅಧಿಕಾರಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶರಣಬಸಪ್ಪ ಬೋಗಿ, ಸದಸ್ಯ ಕಾರ್ಯದರ್ಶಿ ವಾರ್ತಾಧಿಕಾರಿ ಬಿ.ಆರ್.ರಂಗನಾಥ್, ಚುನಾವಣಾ ತರಬೇತಿ ಅಧಿಕಾರಿ ಹುಲಿರಾಜ, ಚುನಾವಣಾ ತಹಶೀಲ್ದಾರ ಪ್ರಶಾಂತ ನಾಲವಾರ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link