ತುರುವೇಕೆರೆ :
ಹೊರ ಹಾಗು ಒಳ ರಾಷ್ಟ್ರಗಳಲ್ಲಿ ಎಷ್ಟೆ ಗೌರವ ಸನ್ಮಾನಗಳು ನನಗೆ ಸಿಕ್ಕಿದ್ದರೂ ಸಹ ನಾಹುಟ್ಟಿ ಬೆಳೆದ ತವರೂರಲ್ಲಿ ಪಡೆದ ಈ ಪುರಸ್ಕಾರದಿಂದ ನನ್ನ ಜೀವನ ಸಾರ್ಥಕತೆ ಪಡೆದಿದೆ ಎಂದು ಸಮ್ಮೇಳನಾಧ್ಯಕ್ಷ ಡಾ. ಹುಲಿಕಲ್ ನಟರಾಜ್ ಅಂತರಾಳದ ಮಾತುಗಳನ್ನಾಡಿದರು.
ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದ ತಾಳಕೆರೆ ಸುಬ್ರಹ್ಮಣ್ಯಂ ವೇದಿಕೆಯಲ್ಲಿ ಜರುಗಿದ ನಾಲ್ಕನೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮನಬಿಚ್ಚಿ ಮಾತನಾಡಿದ ಅವರು ಮೂಲಭೂತ ವಿರೋಧಿ ಎಂದು ಜನ ನನ್ನನ್ನು ಪೂತ್ಕರಿಸುತ್ತಾರೆ. ವಾಸ್ತವದಲ್ಲಿ ನಾನು ಮೂಲನಂಬಿಕೆಯ ಬಗ್ಗೆ ಚಕಾರವೆತ್ತುವುದಿಲ್ಲ. ಆದರೆ ಮೂಢನಂಬಿಕೆ, ಭೂಟಾಟಿಕೆ, ಮೂಢಾಚರಣೆ, ಅಧರ್ಮವನ್ನು ಭಿತ್ತಿ ಜನರನ್ನು ವಂಚಿಸುವಂತಹ ಸ್ವಾಮೀಜಿಯಾಗಲಿ, ಮತ್ತೊಬ್ಬನಾಗಲೀ ಎಲ್ಲರನ್ನೂ ಬಣ್ಣಬಯಲು ಮಾಡುತ್ತೇನೆ.
ಇದನ್ನು ಪ್ರಜ್ಞಾವಂತ ಸಮಾಜ ಅರ್ಥಮಾಡಿಕೊಳ್ಳಬೇಕಿದೆ. ತನ್ನ ಜೀವನದ ಎಡರು ತೊಡರುಗಳ ಬಗ್ಗೆ ವ್ಯಾಖ್ಯಾನಿಸಿ ನಾನು ನಾಸ್ತಿಕನೂ ಅಲ್ಲ, ಆಸ್ತಿಕನೂ ಅಲ್ಲಾ. ಮಾನವತಾವಾದದ ನೆಲೆಗಟ್ಟಿನಲ್ಲಿ ಚಿಂತಿಸಿ ಮನುಷ್ಯತ್ವ ಧರ್ಮವನ್ನು ಸ್ಥಾಪಿಸಬೇಕೆಂಬ ಅಚಲ ನಂಬಿಕೆಯಿಟ್ಟು ಬದುಕಿ ಬಂದವನು. ಜನರ ಒಳಿತಿಗೆಂದು ಸತ್ಯಕ್ಕಾಗಿ ರಾಜ್ಯ, ದೇಶ, ವಿದೇಶಗಳನ್ನೂ ಸುತ್ತಿದೆ. ಆದರೆ ಈ ಮೌಢ್ಯ ಸಮಾಜ ಪ್ರಜ್ಞಾವಂತರನ್ನು ಕೊಂದಂತೆ ಮುಂದೊಂದು ದಿನ ನನ್ನನ್ನೂ ಗುಂಡಿಕ್ಕಿ ಕೊಲ್ಲದೆ ಬಿಡುತ್ತಾರೆಯೆ? ಎಂದು ಪ್ರಶ್ನಿಸಿದರು. ಇದಾಗ್ಯೂ ಉಸಿರು ಮತ್ತು ಹೆಸರಿನ ನಡುವೆ ಏನಾದರೂ ಕೊಡುಗೆಯಾಗಿ ಸಮಾಜಕ್ಕೆ ನೀಡಬೇಕು. ನನ್ನ ಹುಟ್ಟೂರಲ್ಲಿ ಕಳೆದ ಈ ಎರಡು ದಿನಗಳೂ ನನ್ನ ಜೀವನದ ಅಪರೂಪದ ಕ್ಷಣಗಳಾಗಿದ್ದು ನನ್ನ ಮೇಲಿಟ್ಟಿರುವ ನಮ್ಮೂರಿನ ಜನತೆಗೆ ನಾನು ಎಂದೆಂದೂ ಚಿರಋಣಿ. ನನ್ನನ್ನು ಗೌರವಿಸಿದ ನನ್ನ ತಾಲ್ಲೂಕಿಗೆ ಏನಾದರೂ ಮರು ಕೃತಜ್ಞತೆ ಸಲ್ಲಿಸುವೆ ಎಂದು ಭರವಸೆ ವ್ಯಕ್ತ ಪಡಿಸಿದರು.
ಶಾಸಕ ಮಸಾಲಾಜಯರಾಂ ಮಾತನಾಡಿ, ಕನ್ನಡ ಓದುವುದು ಕೀಳಿರಿಮೆಯಲ್ಲ. ಕನ್ನಡ ಭಾಷೆಗೆ ಬೇರೆ ದೇಶಗಳಲ್ಲಿಯೂ ಗೌರವ ಭಾವನೆ ಇದೆ. ನಾನು ಒಂದು ಲಕ್ಷ ರೂಪಾಯಿಗಳ ಮೌಲ್ಯದ ಪುಸ್ತಕಗಳನ್ನು ನೂತನವಾಗಿ ನಿರ್ಮಿಸಿರುವ ನಮ್ಮ ಕನ್ನಡ ಭವನದ ಗ್ರಂಥಾಲಯಕ್ಕೆ ನೀಡುತ್ತೇನೆ. ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಸಹಕಾರ ಸಿಕ್ಕಿದ್ದೇ ಆದಲ್ಲಿ ತಾಲ್ಲೂಕಿನಲ್ಲಿ ಜಿಲ್ಲಾ ಸಮ್ಮೇಳನ ಮತ್ತು ಜಿಲ್ಲಾ ನಾಟಕೋತ್ಸವವನ್ನು ಹಮ್ಮಿಕೊಳ್ಳುವುದಾಗಿ ತಮ್ಮ ಇಂಗಿತ ವ್ಯಕ್ತಪಡಿಸಿದರು.
ನಿವೃತ್ತ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಮಾತನಾಡಿ, ಸಮಾಜದಲ್ಲಿ ವೈಜಾರಿಕತೆಯ ಬೀಜವನ್ನು ಭಿತ್ತಿದವರು ವಚನಕಾರರು. ಕನ್ನಡ ಭಾಷೆಗೆ ಆತಂಕದ ವಾತಾವರಣವನ್ನು ನಾವು ಸೃಷ್ಟಿಸಿದ್ದೇವೆ. ಮಾತೃಭಾಷೆಯನ್ನು ಮಮತೆಯಿಂದ ಕಾಣಬೇಕಾಗಿದೆ ಎಂದರು.
ಎಂಎಲ್.ಸಿ ಚೌಡಾರೆಡ್ಡಿತೂಪಲ್ಲಿ ತನ್ನ ಅನುಧಾನದಲ್ಲಿ ಕನ್ನಡ ಭವನದ ಅಭಿವೃದ್ದಿಗೆ 5 ಲಕ್ಷ ರೂಪಾಯಿಗಳ ಅನುಧಾನದ ಪತ್ರವನ್ನು ಕಸಾಪ ಅಧ್ಯಕ್ಷ ನಂ.ರಾಜು ಅವರಿಗೆ ನೀಡಿ ಮಾತನಾಡಿದ ಅವರು ಮುಂದಿನ ದಿನಗಳಲ್ಲೂ ನನ್ನ ಸಹಕಾರ ಈ ತಾಲ್ಲೂಕಿಗೆ ಸದಾ ಇರುತ್ತದೆ ಎಂದರು.
ಯುವ ವಿಜ್ಞಾನಿ ಪ್ರತಾಥ್ ಯುವಕರಿಗೆ ಶಿಕ್ಷಣ ಮತ್ತು ಸಾಧನೆಯ ಕಿವಿ ಮಾತು ತಿಳಿಸಿಕೊಟ್ಟರು.ತಾ. ಕಸಾಪ ಗೌರವಾದ್ಯಕ್ಷ ಪ್ರೋ|| ಪುಟ್ಟರಂಗಪ್ಪ ಆಶಯ ನುಡಿಗಳನ್ನಾಡಿ ಈ ಬಾರಿ ನಡೆದ ಸಮ್ಮೇಳನ ತಾಲ್ಲೋಕ್ ಸಮ್ಮೇಳನವಾದರೂ ಜಿಲ್ಲಾ ಸಮ್ಮೇಳನದಂತೆಯೇ ಆಚರಿಸಲಾಯಿತು. ತಾಲ್ಲೂಕಿನ ಸಾಧಕರು, ಸಾಹಿತಿಗಳು, ಕಲಾವಿದರು, ಸಮಾಜ ಸೇವಕರನ್ನೊಳಗೊಂಡಂತೆ ನೂರಾರು ಸಾಧಕರನ್ನು ಗುರ್ತಿಸಿ ಸನ್ಮಾನಿಸಲಾಗಿದೆ. ಜಿಲ್ಲಾ ಸಮ್ಮೇಳನವಾಗಿದ್ದಲ್ಲಿ ಬಹುಶಃ ಇಂತಹ ಅವಕಾಶ ಸಿಗುತ್ತಿರಲಿಲ್ಲವೇನೋ ಎಂಬ ಭಾವನೆ ವ್ಯಕ್ತಪಡಿಸಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ನಂ.ರಾಜು ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರಲ್ಲದೆ, ಹಂಪಿ ಉತ್ಸವದಂತೆ ರಾಷ್ಟ್ರ ಪ್ರಸಿದ್ಧ ಶಾಲಿವಾಹನನ ಉತ್ಸವ ಪ್ರತಿ ವರ್ಷ ಸರ್ಕಾರದ ಮೂಲಕ ತಾಲ್ಲೂಕಿನಲ್ಲಿ ನಡೆಯಲು ಒತ್ತಾಯಿಸುವಂತೆ ಸ್ಥಳೀಯ ಶಾಸಕ ಮಸಾಲ ಜಯರಾಂ ಅವರಲ್ಲಿ ಮನವಿ ಮಾಡಿಕೊಂಡರು.
ಸಮ್ಮೇಳನದಲ್ಲಿ ಮೂರು ನಿರ್ಣಯಗಳನ್ನು ಮಂಡಿಸಲಾಯಿತು. ಮೊದಲನೆಯದು ತಾಲ್ಲೂಕಿಗೆ ನಿಗಧಿಯಾದ ಮತ್ತು ನಿಗಧಿತ ಸಮಯಕ್ಕೆ ಹೇಮಾವತಿ ನಾಲಾ ನೀರು ಬಿಡುವುದು ಹಾಗು ಗೊರೂರಿನಿಂದ ತುಮಕೂರಿನವರೆಗೆ ಮಾಡಬೇಕೆಂದಿರುವ ಎಕ್ಸ್‍ಪ್ರೆಸ್ ಲೈನ್ ಕೈಬಿಡುವುದು, ಎರಡನೆಯದಾಗಿ ಸಿಬಿಎಸ್‍ಸಿ ಸೇರಿದಂತೆ 1 ರಿಂದ 5 ನೆ ತರಗತಿಯ ವರೆಗಿನ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ನೀಡುವುದು.ಮೂರನೆಯದಾಗಿ ಇತಿಹಾಸ ಪ್ರಸಿದ್ಧ ಶಾಲಿವಾಹನನ ಉತ್ಸವ ಪ್ರತಿ ವರ್ಷ ಸರ್ಕಾರದ ಮೂಲಕ ತಾಲ್ಲೂಕಿನಲ್ಲಿ ನಡೆಯಬೇಕೆಂದು ಮಂಡನೆ ಮಾಡಲಾಯಿತು.
ಇದೇ ವೇಳೆ ಸಮ್ಮೇಳನಾಧ್ಯಕ್ಷ ಹುಲಿಕಲ್‍ನಟರಾಜ್ ಹಾಗು ಪತ್ನಿ ಸೀಮಾನಟರಾಜ್ ದಂಪತಿಗಳನ್ನು ತಾಲ್ಲೂಕು ಕಸಾಪ ವತಿಯಿಂದ ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು. ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಮತ್ತು ಸಮ್ಮೇಳನಕ್ಕೆ ದುಡಿದ ಸಮಿತಿಯ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಕಾಡಸಿದ್ದೇಶ್ವರ ಮಠದ ಶ್ರೀಕರಿವೃಭದೇಶಿ ಕೇಂದ್ರ ಸ್ವಾಮೀಜಿಯವರು ದಿವ್ಯ ಸಾನಿದ್ಯ ವಹಿಸಿದ್ದು ಆಶೀರ್ವಚನ ನೀಡಿದರು.
ರಾತ್ರಿ ಜೀ ಕನ್ನಡ ವಾಹಿನಿ ಕಾಮಿಡಿ ಖ್ಯಾತಿಯ ತಂಡದವರಿಂದ ಹಾಸ್ಯ ಕಾರ್ಯಕ್ರಮ ಜನಮೆಚ್ಚುಗೆ ಗಳಿಸಿತು.
ಈ ಸಂದರ್ಭದಲ್ಲಿ ಸಂಚಾಲಕ ಕೊಂಡಜ್ಜಿ ವಿಶ್ವಣ್ಣ, ಮಂಗೀಕುಪ್ಪೆ ಗಂಗಣ್ಣ, ಪ್ರಹ್ಲಾದ್, ಬಿಬಿಎಂಪಿ ಕೃಷ್ಣಮೂರ್ತಿ, ದಂಡಿನಶಿವರ ಶಂಕರೇಗೌಡ, ವಕೀಲ ಧನಪಾಲ್, ಅಮಾನಿಕೆರೆ ಮಂಜಣ್ಣ, ಗ್ರಂಥಾಲಯ ರಾಮಚಂದ್ರು, ದಿನೇಶ್, ಹೋಬಳಿ ಘಟಕದ ಅಧ್ಯಕ್ಷರುಗಳಾದ ಬೋಜರಾಜ್, ಬುಗುಡನಹಳ್ಳಿ ಕೃಷ್ಣಮೂರ್ತಿ, ರಾಜಶೇಖರ್, ರೋಟರಿ ಮಾಜಿ ಅಧ್ಯಕ್ಷ ಎಸ್.ಕೆ.ಥಾಮಸ್, ರಂಗಪ್ಪ, ವೆಂಕಟೇಶ್, ಚಂದ್ರಶೇಖರ್ ಸೇರಿದಂತೆ ಇತರರು ಇದ್ದರು. ಶಿವಶಂಕರ್ ಸ್ವಾಗತಿಸಿ, ರೂಪ ನಿರೂಪಿಸಿ, ನಟೇಶ್ ವಂದಿಸಿದರು. ವೇದಿಕೆ, ಊಟ, ಪುಸ್ತಕ ಪ್ರದರ್ಶನ, ಸಾಂಸ್ಕತಿಕ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ನಡೆದು ಎರಡು ದಿನ ನಡೆದ ಸಮ್ಮೇಳನದಲ್ಲಿ ಸಾಹಿತಿಗಳು, ಜನಪ್ರತಿನಿಧಿಗಳು, ಗಣ್ಯರು, ಸಾರ್ವಜನಿಕರೊಳಗೊಂಡಂತೆ ಸಾವಿರಾರು ಸಾಹಿತ್ಯಾಶಕ್ತರು ಕಾರ್ಯಕ್ರಮದಲ್ಲಿ ಪಾಲ್ಗೋಳ್ಳುವ ಮೂಲಕ ಸಮ್ಮೇಳನದ ಯಶಸ್ಸಿಗೆ ಕಾರಣೀಬೂತರಾದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ