ನೀಟ್‍ನಿಂದ ವೈದ್ಯಕೀಯ ಶಿಕ್ಷಣ ಮರಿಚೀಕೆ

ದಾವಣಗೆರೆ :

     ವೈದ್ಯಕೀಯ ಕೋರ್ಸ್‍ಗಳಿಗೆ ಪ್ರವೇಶ ಪಡೆಯಲು ಭಾರತ ಸರ್ಕಾರವು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯನ್ನು ಕಡ್ಡಾಯಗೊಳಿಸಿರುವುದರಿಂದ ಜನಸಾಮಾನ್ಯರ ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ಮರಿಚೀಕೆಯಾಗಿದೆ ಎಂದು ಪಶುವೈದ್ಯಕೀಯ ಇಲಾಖೆ ಜಂಟಿ ನಿರ್ದೇಶಕ ಡಾ.ಎಚ್.ಎಸ್.ಜಯಣ್ಣ ಕಳವಳ ವ್ಯಕ್ತಪಡಿಸಿದರು.

    ನಗರದ ಮಾಗನೂರು ಬಸಪ್ಪ ಪಬ್ಲಿಕ್ ಸ್ಕೂಲ್‍ನಲ್ಲಿ ಭಾನುವಾರ ಸಾದರ ನೌಕರರ ಬಳಗದ ವತಿಯಿಂದ ನಡೆದ ಸಮಾಜದ ಸಾಧಕ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪುರಸ್ಕಾರ, ಸಾಧಕರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಜನಸಾಮಾನ್ಯರೂ ತಮಗೆ ಎಷ್ಟೇ ಕಷ್ಟ ಬಂದರೂ ಪರವಾಗಿಲ್ಲ. ತಮ್ಮ ಮಕ್ಕಳನ್ನು ವೈದ್ಯರನ್ನಾಗಿ ಮಾಡುವ ಕನಸು ಕಾಣುವುದು ಸಹಜ. ಆದರೆ, ಭಾರತ ಸರ್ಕಾರವು ವೈದ್ಯಕೀಯ ಕೋರ್ಸ್‍ಗಳಿಗೆ ಪ್ರವೇಶ ಪಡೆಯಲು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್)ಯನ್ನು ಕಡ್ಡಾಯಗೊಳಿಸಿರುವುದರಿಂದ ತಮ್ಮ ಮಕ್ಕಳಿಗೂ ವೈದ್ಯಕೀಯ ಶಿಕ್ಷಕ ಕೊಡಿಸಬೇಕೆಂಬ ಜನಸಾಮಾನ್ಯರ ಕನಸು ಕಮರಿಹೋಗಿದೆ. ಅಲ್ಲದೇ, ವೈದ್ಯಕೀಯ ಶಿಕ್ಷಣವು ಬಡ ಮತ್ತು ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗಗನ ಕುಸುಮವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

     ಇಂದು ಶಿಕ್ಷಣ ವ್ಯಾಪಾರೀಕರಣಗೊಂಡಿರುವ ಕಾರಣ ಎಂಬಿಬಿಎಸ್ ಪದವಿ ಪಡೆಯಲು ಕೋಟ್ಯಂತರ ರೂ. ಬೇಕಾಗಿದೆ. ಇಷ್ಟೊಂದು ದೊಡ್ಡ ಮೊತ್ತವನ್ನು ಭರಿಸುವುದು ಜನಸಾಮಾನ್ಯರಿಗೆ ಹೊರೆಯಾಗಲಿದೆ. ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ಡಾಕ್ಟರ್, ಎಂಜಿನಿಯರ್ ಮಾಡಬೇಕೆಂಬ ಸಂಕುಚಿತ ಮನೋಭಾವದಿಂದ ಹೊರ ಬಂದು, ಅರಣ್ಯ, ಕೃಷಿ ಸೇರಿದಂತೆ ಇತರೆ ವೈವಿದ್ಯಮಯ ಶಿಕ್ಷಣ ಕೊಡಿಸುವ ಮೂಲಕ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಿಕೊಡಬೇಕೆಂದು ಕಿವಿಮಾತು ಹೇಳಿದರು.

      ಪೋಷಕರು ಮಕ್ಕಳ ಮೇಲೆ ಇಂಥದ್ದೇ ಶಿಕ್ಷಣ ಕಲಿಯಬೇಕೆಂಬುದಾಗಿ ಒತ್ತಡ ಹಾಕುವ ಮನಸ್ಥಿತಿಯಿಂದ ಹೊರಬಂದು, ಅವರಿಗೆ ಇಷ್ಟವಾದ ಕೋರ್ಸ್ ಇಲ್ಲವೇ ಕ್ಷೇತ್ರದಲ್ಲಿ ಮುಂದುವರೆಯಲು ಸಹಕರಿಸುವ ಮೂಲಕ ಅವರಲ್ಲಿರುವ ಪ್ರತಿಭೆಗೆ ನೀರೇರೆಯಬೇಕು. ಅಲ್ಲದೇ, ವಿದ್ಯಾರ್ಥಿಗಳು ಸಹ ಪೋಷಕರು ನಿಮ್ಮ ಮೇಲಿಟ್ಟಿರುವ ಭರವಸೆಗಳನ್ನು ಹುಸಿಗೊಳಿಸಬಾರದು ಎಂದು ಸಲಹೆ ನೀಡಿದರು.

     ಸನ್ಮಾನ ಸ್ವೀಕರಿಸಿ ಮಾತನಾಡಿದ ದಾವಣಗೆರೆ ತಾ.ಪಂ.ನ ನಿವೃತ್ತ ಇಒ ಎಲ್.ಎಸ್. ಪ್ರಭುದೇವ್ ಮಾತನಾಡಿ, ಯಾರೇ ಆಗಲಿ ಅವರವರು ಮಾಡುವ ಕೆಲಸದಲ್ಲಿ ಕಷ್ಟಪಟ್ಟರೇ, ಮುಂದೊಂದು ದಿನ ಫಲ ಸಿಕ್ಕೆ ಸಿಗುತ್ತದೆ ಎಂಬ ಮನೋಭಾವವನ್ನು ಹೊಂದಿ, ಇಟ್ಟಿರುವ ಗುರಿ ಮುಟ್ಟಲು ಸತತ ಪರಿಶ್ರಮ ಹಾಕಬೇಕೆಂದು ಕರೆ ನೀಡಿದರು.

      ಸಾಧನೆಯ ಹಾದಿಯಲ್ಲಿ ಮುನ್ನುಗ್ಗುವಾಗ ಹಾದಿಯಲ್ಲಿ ಅಡ್ಡ ಬರುವ ಕಷ್ಟವೆಂಬ ಕಲ್ಲು, ಮುಳ್ಳುಗಳನ್ನು ಸಮಚಿತ್ತದಿಂದ ತೆಗದು ಹಾಕಿ ಸಾಧನೆಗೆ ಮುಂದಾಗಬೇಕು. ಆದರೆ, ಸುಖವಾಗಿ ಬೆಳೆದವರು ಸಾಧನೆ ಮಾಡುವುದು ಬೆರಳೆಣಿಕಯಷ್ಟು ಜನರು ಮಾತ್ರ ಎಂದರು .ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್‍ನ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರ ಗೌಡ್ರು ಮಾತನಾಡಿ, ಸಮಾಜದ ಕೆಲಸಕ್ಕೆ ಹಿರಿಯರಲ್ಲಿರುವ ಕಳಕಳಿ ಯುವ ಪೀಳಿಗೆಯಲ್ಲಿ ಇಲ್ಲದಿರುವುದು ವಿಷಾದಕರ ಸಂಗತಿಯಾಗಿದೆ. ಹಿರಿಯರು ಯುವಜನರು ಚೆನ್ನಾಗಿರಬೇಕೆಂಬ ಕಾರಣಕ್ಕೆ ಈಗಲೂ ಕಷ್ಟಪಡುತ್ತಿದ್ದಾರೆ.

      ಆದರೆ, ಯುವಜನತೆ ಇದ್ಯಾವುದನ್ನು ಪರಿಗಣನೆಗೆ ತೆಗದುಕೊಳ್ಳುತ್ತಿಲ್ಲ. ಇನ್ನೂ ಮುಂದಾದರೂ ಯುವ ಜನತೆ ಇಂತಹ ಮನೋಭಾವದಿಂದ ಹೊರಬಂದು ಸಮಾಜಕ್ಕಾಗಿ ಸೇವೆ ಸಲ್ಲಿಸಬೇಕು ಎಂದು ಕಿವಿಮಾತು ಹೇಳಿದರು.ಇದೇ ಸಂದರ್ಭದಲ್ಲಿ ಕೃಷಿ ಸಾಧಕರಾದ ಜಿ. ಮಹೇಶ್ವರಪ್ಪ, ಹೆಚ್.ಕೆ. ದೇವರಾಜ್, ಡಾ.ಹೆಚ್.ಎಂ. ಪ್ರವೀಣ್, ಶ್ರೀಕಾಂತಪ್ಪ.

      ನಿವೃತ್ತ ನೌಕರರಾದ ದಾವಣಗೆರೆ ಜಿ.ಪಂ.ನ ನಿವೃತ್ತ ಉಪ ಕಾರ್ಯದರ್ಶಿ ಷಡಾಕ್ಷರಪ್ಪ, ಜಮಖಂಡಿಯ ಶಿಕ್ಷಕರ ಶಿಕ್ಷಣ ಪ್ರವಾಚಕ ವೀರಣ್ಣ ಎಸ್. ಜತ್ತಿ, ಪಶುವೈದ್ಯಕೀಯ ಇಲಾಖೆ ಜಂಟಿ ನಿರ್ದೇಶಕ ಹೆಚ್.ಎಸ್. ಜಯಣ್ಣ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಕೆ.ಬಿ. ಕೊಟ್ರೇಶ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ, ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪುರಸ್ಕರಿಸಿ ಗೌರವಿಸಲಾಯಿತು.ಸಾದರ ನೌಕರರ ಬಳಗದ ಅಧ್ಯಕ್ಷ ನಾಗಪ್ಪ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಎ.ಆರ್. ಉಜ್ಜನಪ್ಪ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap