ಕಾಲ್ತುಳಿತ ಪ್ರಕರಣ : ಇಂದು ತಿರುಪತಿಗೆ ಚಂದ್ರಬಾಬು ನಾಯ್ಡು ಭೇಟಿ ….!

ವಿಜಯವಾಡ:

    ಆಂಧ್ರ ಪ್ರದೇಶದ ಪ್ರಸಿದ್ಧ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಿನ್ನೆ ಬುಧವಾರ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ 6 ಮಂದಿ ಭಕ್ತರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಸಿಎಂ ಎನ್ ಚಂದ್ರಬಾಬು ನಾಯ್ಡು ಪ್ರತಿಕ್ರಿಯಿಸಿದ್ದಾರೆ.

    ತಿರುಮಲ ಶ್ರೀವಾರಿ ವೈಕುಂಠ ದ್ವಾರ ದರ್ಶನಕ್ಕೆ ಟೋಕನ್‌ ವಿಚಾರದಲ್ಲಿ ತಿರುಪತಿಯಲ್ಲಿರುವ ವಿಷ್ಣು ನಿವಾಸದ ಬಳಿ ಕಾಲ್ತುಳಿತ ಸಂಭವಿಸಿ ಹಲವಾರು ಭಕ್ತರು ಮೃತಪಟ್ಟಿರುವುದು ಆಘಾತಕ್ಕೀಡು ಮಾಡಿದೆ. ಭಕ್ತರು ಟೋಕನ್ ಸಂಗ್ರಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದ ಸಮಯದಲ್ಲಿ ನಡೆದ ಈ ದುರಂತ ಘಟನೆ ನನ್ನನ್ನು ತುಂಬಾ ನೋಯಿಸಿತು. ಕೆಲವು ಜನರ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ, ಉನ್ನತ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ಆದೇಶಿಸಿದ್ದೇನೆ. ಪರಿಸ್ಥಿತಿ ಬಗ್ಗೆ ನಿರಂತರವಾಗಿ ಜಿಲ್ಲಾ ಮತ್ತು ಟಿಟಿಡಿ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದೇನೆ ಎಂದಿದ್ದಾರೆ. ಇಂದು ಸಿಎಂ ಚಂದ್ರಬಾಬು ನಾಯ್ಡು ತಿರುಪತಿಗೆ ಭೇಟಿ ನೀಡಲಿದ್ದಾರೆ.

   ಘಟನೆಯಲ್ಲಿ ಇನ್ನೂ ನಾಲ್ವರು ತೀವ್ರ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 40 ಮಂದಿ ಗಾಯಗೊಂಡಿದ್ದಾರೆ. ವೈಕುಂಠ ಏಕಾದಶಿ ಪ್ರಯುಕ್ತ ತಿರುಪತಿಯ ವಿಷ್ಣು ನಿವಾಸಂನಲ್ಲಿ ಶುಕ್ರವಾರದಿಂದ 10 ದಿನಗಳ ಕಾಲ ವೈಕುಂಠ ದ್ವಾರ ಸರ್ವ ದರ್ಶನಕ್ಕಾಗಿ ಟೋಕನ್ ವಿತರಣೆಯ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದೆ. ವೈಕುಂಠ ಏಕಾದಶಿ ಸಮಯದಲ್ಲಿ ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಆರು ಮಂದಿ ಮೃತಪಟ್ಟ ದುರ್ಘಟನೆಗೆ ಸಂಬಂಧಿಸಿದಂತೆ ಇಂದು ಸಿಎಂ ಚಂದ್ರಬಾಬು ನಾಯ್ಡು ಪರಿಶೀಲನಾ ಸಭೆ ಕರೆದಿದ್ದಾರೆ ಎಂದು ಟಿಡಿಪಿ ವಕ್ತಾರರು ತಿಳಿಸಿದ್ದಾರೆ.

    ಮೃತರ ಕುಟುಂಬಸ್ಥರನ್ನು ಅವರು ಇಂದು ಭೇಟಿ ಮಾಡುವ ನಿರೀಕ್ಷೆಯಿದೆ. ತಿರುಪತಿ ಕಾಲ್ತುಳಿತ ಘಟನೆಯಂತಹ ದುರ್ಘಟನೆಯನ್ನು ಭವಿಷ್ಯದಲ್ಲಿ ತಪ್ಪಿಸಲು ರಾಜ್ಯ ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಮೃತರ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ಮತ್ತು ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲು ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಟಿಡಿಪಿ ವಕ್ತಾರ ಪ್ರೇಮ್ ಕುಮಾರ್ ಜೈನ್ ತಿಳಿಸಿದ್ದಾರೆ. 

    ಭಾರೀ ಸಂಖ್ಯೆಯಲ್ಲಿ ಭಕ್ತರು ಟೋಕನ್ ಪಡೆದುಕೊಳ್ಳಲು ಯತ್ನಿಸಿದ ಪರಿಣಾಮ ನೂಕುನುಗ್ಗಲು ಉಂಟಾಯಿತು. ಘಟನೆಯಲ್ಲಿ ಒಟ್ಟು 20 ಮಂದಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ರುಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. 

   ಗುರುವಾರದಿಂದ ತಿರುಪತಿಯ 9 ಕೇಂದ್ರಗಳಲ್ಲಿ 94 ಕೌಂಟರ್‌ಗಳ ಮೂಲಕ ವೈಕುಂಠ ದರ್ಶನ ಟೋಕನ್‌ಗಳನ್ನು ವಿತರಿಸಲು ಟಿಟಿಡಿ ವ್ಯವಸ್ಥೆ ಮಾಡಿದೆ. ನಿನ್ನೆ ಸಂಜೆ ಟೋಕನ್‌ಗಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಇದೇ ವೇಳೆ ಭಕ್ತರೊಬ್ಬರು ಅಸ್ವಸ್ಥರಾದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಖ್ಯ ಗೇಟ್ ತೆರೆಯಲಾಗಿತ್ತು. ಆಗ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆ ಗೇಟ್ ಏಕಾಏಕಿ ಧಾವಿಸಿದ್ದರಿಂದ ಕಾಲ್ತುಳಿತ ಉಂಟಾಯಿತು ಎಂದು ವರದಿಯಾಗಿದೆ. ಕಾಲ್ತುಳಿತದಲ್ಲಿ ಗಾಯಗೊಂಡವರ ಸಂಖ್ಯೆ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ.

   ಜನವರಿ 10, 11 ಮತ್ತು 12 ರಂದು ಮೊದಲ ಮೂರು ದಿನಗಳ ವೈಕುಂಠ ದ್ವಾರ ದರ್ಶನಕ್ಕಾಗಿ ಇಂದು ಬೆಳಗ್ಗೆ 1.20 ಲಕ್ಷ ಟೋಕನ್‌ಗಳನ್ನು ನೀಡಲು ಟಿಟಿಡಿ ನಿರ್ಧರಿಸಿದೆ. ಉಳಿದ ದಿನಗಳಲ್ಲಿ ತಿರುಪತಿಯ ವಿಷ್ಣುನಿವಾಸಂ, ಶ್ರೀನಿವಾಸಂ ಮತ್ತು ಭೂದೇವಿ ಕಾಂಪ್ಲೆಕ್ಸ್‌ಗಳಲ್ಲಿ ಆಯಾ ದಿನಾಂಕದಂದು ಟಿಕೆಟ್ ನೀಡಲು ಟಿಟಿಡಿ ವ್ಯವಸ್ಥೆ ಮಾಡಿದೆ. 

   ದರ್ಶನಕ್ಕೆ ಬಂದಿದ್ದ ಭಕ್ತರು ಮೃತಪಟ್ಟಿರುವುದು ದುರದೃಷ್ಟಕರ. ಘಟನೆಯಿಂದ ತೀವ್ರ ಬೇಸರವಾಗಿದೆ ಎಂದು ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಹೇಳಿದ್ದಾರೆ. ಘಟನೆ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಅವರು, ಮೃತರ ಮತ್ತು ಗಾಯಗೊಂಡವರ ಕುಟುಂಬಗಳಿಗೆ ಮಾಹಿತಿ ನೀಡಿ ನೆರವು ನೀಡುವಂತೆ ಟಿಟಿಡಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

    ಇಂದು ಸಿಎಂ ಚಂದ್ರಬಾಬು ನಾಯ್ಡು ತಿರುಪತಿಗೆ ಭೇಟಿ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

 

Recent Articles

spot_img

Related Stories

Share via
Copy link