ಕೋರಂ ಕೊರತೆಯಿಂದ ಸಭೆ ಮುಂದೂಡಿಕೆ

ಕೂಡ್ಲಿಗಿ:

    ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ನಡೆಯಬೇಕಿದ್ದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆ ಸದಸ್ಯರ ಕೋರಂ ಕೊರತೆಯಿಂದ ಮುಂದೂಡಲ್ಪಟ್ಟಿತು.

     ಬೆಳಿಗ್ಗೆ 11 ಗಂಟೆಗೆ ಆರಂಭವಾಗಬೇಕಾಗಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ಎಲ್ಲ ಇಲಾಖೆಗಳ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಂದು ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸದಸ್ಯರುಗಳ ಬರುವಿಕೆಗಾಗಿ ಗಂಟೆಗೂ ಹೆಚ್ಚುಕಾಲ ಕಾದು ಕುಳಿತಿದ್ದರು. ಆದರೆ ಅಧ್ಯಕ್ಷ ಸೇರಿದಂತೆ ಕೇವಲ 11 ಜನ ಸದಸ್ಯರು ಮಾತ್ರ ಬಂದಿದ್ದರು.

     ಶಾಸಕರು, ಸಂಸದರು ಸೇರಿದಂತೆ ಸಭೆಯಲ್ಲಿ ಒಟ್ಟು 19 ಜನ ಸದಸ್ಯರು ಇರಬೇಕಾಗಿತ್ತು. ಆದರೆ ಅಧ್ಯಕ್ಷ ಬಿ. ವೆಂಕಟೇಶ್ ನಾಯ್ಕ್ ಸೇರಿದಂತೆ 11 ಜನ ಸದಸ್ಯರು ಮಾತ್ರ ಸಭೆಗೆ ಹಾಜರಾಗಿದ್ದರು. ಉಪಾಧ್ಯಕ್ಷೆ ಹಾಲಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಸೇರಿದಂತೆ 15 ಜನ ತಾಲ್ಲೂಕು ಪಂಚಾಯ್ತಿ ಸದಸ್ಯರು ಗೈರಾಗಿದ್ದರು. ಇದರಿಂದ ಕೋರಂ ಕೊರೆತೆಯಾಗಿದ್ದು, ಸಭೆಯನ್ನು ಅನಿರ್ಧಿಷ್ಟ ಕಾಲ ಮುಂದೂಡಲಾಗಿದೆ ಎಂದು ಘೋಷಣೆ ಮಾಡಿದ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಜಿ.ಎಂ. ಬಸಣ್ಣ, ಮುಂದಿನ ಸಭೆಯ ದಿನಾಂಕವನ್ನು ತಿಳಿಸಲಾಗುವುದು ಎಂದು ಹೇಳಿದರು.

     ಈ ಮಧ್ಯ ಮಾತನಾಡಿದ ಸದಸ್ಯ ಡಿ. ಕೊಟ್ರೇಶ್, ‘ಸದಸ್ಯರು ಹೇಳಿದ ಯಾವ ಕೆಲಸವೂ ಅಗುತ್ತಿಲ್ಲ ಎಂದ ಮೇಲೆ ಸದಸ್ಯರು ಸಭೆಗೆ ಬಂದು ಏನು ಪ್ರಯೋಜನ. ಅದ್ದರಿಂದ ಬಹುತೇಕ ಸದಸ್ಯರು ಸಭೆಯಿಂದ ದೂರ ಉಳಿದಿದ್ದಾರೆ’ ಎಂದು ಹೇಳಿ ಸಭೆಯಿಂದ ಹೊರ ನಡೆದರು.

     ಒಟ್ಟಿನಲ್ಲಿ ಸದಸ್ಯರಲ್ಲಿನ ಸಾಮರಸ್ಯದ ಕೊರತೆಯಿಂದ ತಾಲ್ಲೂಕಿನ ಎಲ್ಲ ಇಲಾಖೆಗಳ ಅಧಿಕಾರಿಗಳ ಅಮೂಲ್ಯವಾದ ಸಮಯ ಬಲಿಯಾದಂತಾಗಿದೆ. ತಾಲ್ಲೂಕಿನಲ್ಲಿ ಮಳೆಯ ಅಭಾವವಿದೆ. ಮಳೆಗಾಲದಲ್ಲಿಯೇ ಜನಗಳಿಗೆ ಕುಡಿಯಲು ನೀರು, ಜಾನುವಾರುಗಳಿಗೆ ಮೇವಿನ ಅಭಾವ ಸೇರಿದಂತೆ ಅನೇಕ ಸಮಸ್ಯೆಗಳನ್ನು ಚರ್ಚಿಸಿ ಅಧಿಕಾರಿಗಳಿಂದ ಕೆಲಸ ಮಾಡಿಸಬೇಕಾಗಿದ್ದ ಜನ ಪ್ರತಿನಿಧಿಗಳು ಸಭೆಯಿಂದ ದೂರ ಉಳಿದಿದ್ದು ಎಷ್ಟು ಸರಿ ಎಂದು ಸಭಾಂಗಣದ ಹೊರಗೆ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap