ಹಾನಗಲ್ಲ :
ಕಾರ್ಯಕರ್ತ ಬಂಧುಗಳಿಗೆ ಧ್ವನಿ ನೀಡುವ ಉದ್ದೇಶದಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ಜಾರಿಗೊಳಿಸಿದ್ದು, ಈ ಯೋಜನೆಯಡಿ ಹೆಚ್ಚು ಸಂಖ್ಯೆಯಲ್ಲಿ ಕಾಂಗ್ರೇಸ್ ಪಕ್ಷದ ಸದಸ್ಯತ್ವ ನೋಂದಣಿ ಮಾಡಿಸುವಂತೆ ಹಾನಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗನಗೌಡ ಪಾಟೀಲ ಕರೆ ನೀಡಿದರು.
ಹಾನಗಲ್ ತಾಲೂಕಿನ ಬೆಳಗಾಲಪೇಟೆ ಗ್ರಾಮದಲ್ಲಿ ಶಕ್ತಿಯಡಿ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೆಲವೇ ತಿಂಗಳಿನಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದ್ದು, ಈ ನಿಟ್ಟಿನಲ್ಲಿ ಪಕ್ಷವನ್ನು ಬೂತ್ ಮಟ್ಟದಿಂದ ಸದೃಢಗೊಳಿಸಬೇಕಿದೆ. ಈ ಬಾರಿ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ ಸಾಧಿಸುವುದು ನಿಶ್ಚಿತವಾಗಿದ್ದು, ಕಾರ್ಯಕರ್ತರು ಸಂಘಟನೆಗೆ ಸಮಯ ನೀಡುವಂತೆ ಮನವಿ ಮಾಡಿದರು.
ಹಾನಗಲ್ಲ ತಾಲೂಕಿನಲ್ಲಿ ಕಾಂಗ್ರೇಸ್ ಪಕ್ಷದ ಅಧಿಕಾರಾವಧಿಯಲ್ಲಿ ಅತಿ ಹೆಚ್ಚು ಅಭಿವೃದ್ಧಿ ಕಾರ್ಯಗಳು ನಡೆದಿವೆ. ರೈತರು ಸಮಾಜದ ಎಲ್ಲ ವರ್ಗದ ಜನ ಸಮುದಾಯದ ಹಿತಕ್ಕೆ ನಮ್ಮ ಪಕ್ಷದ ಸರಕಾರ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದೆ. ತಾಲೂಕಿನ ಎಲ್ಲ ಚುನಾವಣೆಗಳಲ್ಲಿ ನಮ್ಮ ಗೆಲುವು ಮುಂಚೂಣಿಯಲ್ಲಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲೂ ನಮ್ಮದೇ ಗೆಲುವು. ಈಗ ನಡೆದಿರುವ ಕಾಂಗ್ರೇಸ್ ಪಕ್ಷದ ಸದಸ್ಯತ್ವದ ಜೊತೆಗೆ ಪಕ್ಷ ಸಂಘಟನೆಯ ಪ್ರಮುಖ ಜವಾಬ್ದಾರಿ ಕಾರ್ಯಕರ್ತರದ್ದೇ ಆಗಿದೆ. ಹಾನಗಲ್ಲ ತಾಲೂಕಿನ ಅಭಿವೃದ್ಧಿಗೆ ಲೋಕಸಭಾ ಚುನಾವಣೆಯೂ ಮಹತ್ವದ ಪಾತ್ರ ವಹಿಸಬೇಕಾಗಿದ್ದು, ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಈಗಿನಿಂದಲೇ ಕಾರ್ಯಯೋಜನೆ ರೂಪಿಸಬೇಕು ಎಂದು ಮನವಿ ಮಾಡಿದರು.
ಪಕ್ಷದ ಸದಸ್ಯತ್ವ ಶಕ್ತಿ ಸಂಚಾಲಕ ಸಂತೋಷ್ ಸುಣಗಾರ ಮಾತನಾಡಿ, ಹಾನಗಲ್ಲ ತಾಲೂಕಿನ ಎಲ್ಲ ಜಿಪಂ ಕ್ಷೇತ್ರ ವ್ಯಾಪ್ತಿಗಳಲ್ಲಿ ಸದಸ್ಯತ್ವ ನೋಂದಣಿ ಯಶಸ್ವಿಯಾಗಿ ನಡೆದಿದೆ. ದೊಡ್ಡ ಸಂಖ್ಯೆಯಲ್ಲಿ ಯುವಕರು ಕಾಂಗ್ರೇಸ್ ಪಕ್ಷದ ಸದಸ್ಯತ್ವ ಪಡೆಯುತ್ತಿದ್ದಾರೆ. ದೇಶದ ಹಿತಕ್ಕೆ ಕಾಂಗ್ರೇಸ್ ಪಕ್ಷದ ಅಗತ್ಯದ ಅರಿವು ಮತದಾರರು ಹಾಗೂ ಯುವ ಪೀಳಿಗೆಯ ಅರಿವಿಗೆ ಬಂದಿದೆ. ಈಗ ಹಾನಗಲ್ಲ ತಾಲೂಕಿನಲ್ಲಿ ಪಕ್ಷದ ಸಂಘಟ ನೆ ವ್ಯವಸ್ಥಿತವಾಗಿ ನಡೆದಿದ್ದು ಎಲ್ಲ ಕಾರ್ಯಕರ್ತರು ಉತ್ಸಾಹದಲ್ಲಿದ್ದಾರೆ. ಕಾಂಗ್ರೇಸ್ ಅವಧಿಯ ಸರಕಾರದ ಜನಪರ ಯೋಜನೆಗಳನ್ನು ಮತದಾರರಿಗೆ ತಿಳಿಸುವ ಕಾರ್ಯ ನಡೆಯಬೇಕು ಎಂದರು.
ಮುಖಂಡರಾದ ಪುಟ್ಟಯ್ಯ ಹಿರೇಮಠ, ಸೋಮಶೇಖರ ಸಜ್ಜನಶೆಟ್ಟರ, ನಿರಂಜನ ಹಿರೇಮಠ, ಪ್ರಕಾಶ ಈಳಿಗೇರ, ವಾಸುದೇವ ಉರಣಕರ, ನೂರಅಹ್ಮದ್ ಮೊಕಾಶಿ, ಜಾವೀದ್ ಎಲಿಗಾರ, ರಾಘಣ್ಣ ಹಿರೇಮಠ ಸೇರಿದಂತೆ ಇನ್ನಿತರರು ಈ ಸಂದರ್ಭದಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ