ಊರಿನತ್ತ ಸಂತಸದಿಂದ ಹೊರಟ ವಲಸೆ ಕಾರ್ಮಿಕ ದಂಡು.

ಚಳ್ಳಕೆರೆ

     ಲಾಕ್‍ಡೌನ್ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 139 ವಲಸೆ ಕಾರ್ಮಿಕರನ್ನು ನಗರದ ವಿವಿಧ ಹಾಸ್ಟಲ್‍ಗಳಲ್ಲಿ ಕ್ವಾರಂಟೈನ್ ಮಾಡಲಾಗಿದ್ದು, ಪರೀಕ್ಷಿಸಿದ ನಂತರ ಅವರಲ್ಲಿ ಯಾವುದೇ ವೈರಾಣು, ಸೋಂಕು ಇಲ್ಲದ ಕಾರಣ ಅವರ ಸ್ವಗ್ರಾಮಗಳಿಗೆ ಶುಕ್ರವಾರ ಬೀಳ್ಕೊಡಲಾಯಿತು.

      ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಉಪವಿಭಾಗದ ಡಿವೈಎಸ್ಪಿ ಎಸ್.ರೋಷನ್ ಜಮೀರ್ ಮಾಹಿತಿ ನೀಡಿ, ಚಳ್ಳಕೆರೆ ಉಪವಿಭಾಗ ವ್ಯಾಪ್ತಿಯ ರಾಂಪುರ, ಮೊಳಕಾಲ್ಮೂರು, ನಾಯಕನಹಟ್ಟಿ, ಪರಶುರಾಮಪುರ, ತಳಕು ಹಾಗೂ ಚಳ್ಳಕೆರೆ ಠಾಣಾ ವ್ಯಾಪ್ತಿಯಲ್ಲಿದ್ದ 139 ವಲಸೆ ಕಾರ್ಮಿಕರನ್ನು ಸರ್ಕಾರದ ಸೂಚನೆ ಮೇರೆಗೆ ಜಿಲ್ಲಾ ರಕ್ಷಣಾಧಿಕಾರಿಗಳ ಮಾರ್ಗದರ್ಶನದಂತೆ ಒಟ್ಟು 8 ಕೆಎಸ್‍ಆರ್‍ಟಿಸಿ ಬಸ್‍ಗಳ ಮೂಲಕ ಅವರ ಸ್ವಗ್ರಾಮಗಳಿಗೆ ಕಳುಹಿಸಿಕೊಡಲಾಗಿದೆ. ಇನ್ನೂ ಕೆಲವರು ಅವರ ಸ್ವಂತ ವಾಹನ ಹೊಂದಿದ್ದು, ಅದರಲ್ಲಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ ಎಂದರು.

      ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್.ಪ್ರೇಮಸುಧಾ ಮಾತನಾಡಿ, ಚಳ್ಳಕೆರೆ ನಗರದ ವಿವಿಧ ವಸತಿ ಕ್ವಾರಂಟೈನ್‍ನಲ್ಲಿದ್ದ ಎಲ್ಲಾ ಪ್ರವಾಸಿ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿದ ನಂತರ ಅವರ ಸ್ವಗ್ರಾಮಗಳಿಗೆ ತೆರಳಲು ಅನುಮತಿ ನೀಡಲಾಗಿದೆ. ಸೀಲ್‍ಡೌನ್ ಆದ ಗ್ರಾಮಗಳಾದ ಕೋಡಿಹಳ್ಳಿ, ಚಿಕ್ಕಹಳ್ಳಿ ಗ್ರಾಮಗಳ 53 ಜನರನ್ನು ಸಹ ಸಾಂಸ್ಥಿಕ ಕ್ವಾರಂಟೈನ್‍ನಿಂದ ಬಿಡುಗಡೆಗೊಳಿಸಿ ಅವರ ಸ್ವಗ್ರಾಮಕ್ಕೆ ಕಳುಹಿಸಿಕೊಡಲಾಗಿದೆ. ಬಿಸಿಎಂ ಹಾಸ್ಟಲ್‍ನಲ್ಲಿ 26 ಪಾಸಿಟಿವ್ ಹಾಗೂ 31 ವಿವಿಧ ರಾಜ್ಯದ ವಲಸೆ ಕಾರ್ಮಿಕರಿದ್ದು, ಅವರ ಆರೋಗ್ಯ ತಪಾಸಣೆ ನಿತ್ಯ ನಡೆಸಲಾಗುತ್ತಿದೆ ಎಂದರು.

     ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶ್ರೀಧರ್ ಐ.ಬಾರಿಕೇರ್, ಕೆಎಸ್‍ಆರ್‍ಟಿಸಿ ವಿಭಾಗೀಯ ತಂತ್ರಜ್ಞ ಚಂದ್ರಪ್ಪ, ಡಿಪೋ ಮ್ಯಾನೇಜರ್ ಹುಸೇನ್, ಪಿಎಸ್‍ಐಗಳಾದ ಎಂ.ಕೆ.ಬಸವರಾಜು, ನೂರ್ ಆಹಮ್ಮದ್, ರಘುನಾಥ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link