ಚಳ್ಳಕೆರೆ
ಪ್ರತಿನಿತ್ಯ ಕ್ಷೇತ್ರದೆಲ್ಲೆಡೆ ಬರಗಾಲದ ಹಿನ್ನೆಲೆಯಲ್ಲಿ ಸಾರ್ವಜನಿಕರು ಚಿಂತೆಗೀಡಾಗಿದ್ದು, ಇತ್ತೀಚಿನ ದಿನಗಳಲ್ಲಿ ಮತ್ತೆ ಮಳೆ ಕೈಕೊಡುತ್ತಿದ್ದು, ಪ್ರತಿಯೊಬ್ಬರಲ್ಲೂ ಆತಂಕ ಉಂಟು ಮಾಡಿದೆ. ಜನರಿಗೆ ಕುಡಿಯುವ ನೀರು ಮತ್ತು ಇತರೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಿ ಅವರಿಗೆ ಆತ್ಮಸ್ಥೈರ್ಯ ತುಂಬುವಂತಹ ಕಾರ್ಯವನ್ನು ತಾಲ್ಲೂಕು ಮಟ್ಟದ ಅಧಿಕಾರಿಗಳು ಮಾಡಬೇಕೆಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅಧಿಕಾರಿ ವರ್ಗವನ್ನು ತರಾಟೆಗೆ ತೆಗೆದುಕೊಂಡರು.
ಸೋಮವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ತುರ್ತು ಅಭಿವೃದ್ಧಿ ಪರಿಶೀಲನೆ ನಡೆಸಿದ ಶಾಸಕರು, ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದರು. ವಿಶೇಷವಾಗಿ ರೈತರಿಗೆ ಶೇಂಗಾ ಬಿತ್ತನೆ ಬೀಜ ವಿತರಣೆಯಲ್ಲಿ ಲೋಪವಾಗುತ್ತಿರುವ ಬಗ್ಗೆ ಕೃಷಿ ಅಧಿಕಾರಿ ಎನ್.ಮಾರುತಿಯವರನ್ನು ಪ್ರಶ್ನಿಸಿದ ಶಾಸಕರು ಉತ್ತಮ ಗುಣಮಟ್ಟದ ಬೀಜ ವಿತರಿಸಲು ಇಲಾಖೆ ವಿಫಲವಾಗಿದೆ ಎಂದು ಅಸಮದಾನ ವ್ಯಕ್ತ ಪಡಿಸಿದರು.
ಕೃಷಿ ಅಧಿಕಾರಿ ಮಾರುತಿ ಮಾಹಿತಿ ನೀಡಿ, ಕಳೆದ ಸಾಲಿನಲ್ಲಿ ತಾಲ್ಲೂಕಿನಾದ್ಯಂತ 12.500 ಕ್ವಿಂಟಾಲ್ ಶೇಂಗಾ ಬಿತ್ತನೆ ಬೀಜವನ್ನು ವಿತರಿಸಿದ್ದು, ಪ್ರಸ್ತುತ ವರ್ಷದಲ್ಲಿ 20 ಸಾವಿರ ಕ್ವಿಂಟಾಲ್ ಬೀಜ ಬೇಡಿಕೆ ಇದ್ದು, ಪ್ರತಿನಿತ್ಯ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಿಗೆ 800 ಕ್ವಿಂಟಾಲ್ ಶೇಂಗಾ ಬೀಜ ಆಗಮಿಸುತ್ತಿದೆ. ಆದರೆ, ರೈತರು ಬೀಜವನ್ನು ಖರೀದಿಸಿ ದಾಸ್ತಾನು ಮಾಡಿದ್ದು, ಇನ್ನೂ ಬಿತ್ತನೆ ಕಾರ್ಯ ಆರಂಭಿಸಿಲ್ಲ. ಸಮರ್ಪಕ ಮಳೆ ಕೊರತೆಯಲ್ಲಿ ಬಿತ್ತನೆ ಚುರುಕಾಗಿಲ್ಲವೆಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಕೃಷಿ ಇಲಾಖೆಯಿಂದ ಜಿಲ್ಲಾಧಿಕಾರಿಗಳಿಗೆ ವಾಡಿಕೆ ಮಳೆಯಾಗಿದೆ ಎಂದು ವರದಿ ನೀಡಿದ ಬಗ್ಗೆ ಖಾರವಾಗಿ ಪ್ರಶ್ನಿಸಿದರು.
ಗ್ರಾಮೀಣ ನೈರ್ಮಲ್ಯ ಮತ್ತು ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು ಕ್ಷೇತ್ರದ ಯಾವ ಗ್ರಾಮದಲ್ಲೂ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಪ್ರತಿನಿತ್ಯ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ತಹಶೀಲ್ದಾರ್, ಪಿಡಿಒ ಮತ್ತು ಗ್ರಾಮ ಲೆಕ್ಕಾಧಿಕಾರಿ ಚರ್ಚಿಸಿ ನೀರಿನ ಸಮಸ್ಯೆ ನಿವಾರಿಸುವಲ್ಲಿ ಜಾಗ್ರತೆ ವಹಿಸಬೇಕು.
ಶುದ್ದ ಕುಡಿಯುವ ನೀರು ಘಟಕಗಳಿಗೆ ಟ್ಯಾಂಕರ್ ಮೂಲಕವೇ ನೀರು ಸರಬರಾಜು ಮಾಡಬೇಕು, ಎಷ್ಟೇ ಹಣ ಖರ್ಚಾದರೂ ಚಿಂತಿಸದೆ ಜನರಿಗೆ ನೀರು ಕೊಡಿ ಎಂದರು. ಅಧಿಕಾರಿ ತಿಪ್ಪೇಸ್ವಾಮಿ ಮಾತನಾಡಿ, ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 20 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಇದ್ದು, ಪ್ರತಿನಿತ್ಯ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ 30 ಕಡೆ ಹೊಸ ಬೋರ್ ಕೊರೆಸುವಂತೆ ಬೇಡಿಕೆ ಬಂದಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಜಿಯೋಲಜಿಸ್ಟಿನ್ನು ಕರೆಸಿ ಸ್ಥಳ ತನಿಖೆ ನಡೆಸಿ ಬೋರ್ ಕೊರೆಸುವಂತೆ ಸಲಹೆ ನೀಡಿದರು.
ಪಶುವೈದ್ಯಾಧಿಕಾರಿ ಡಾ.ಹನುಮಪ್ಪ ಮಾತನಾಡಿ, ತಾಲ್ಲೂಕಿನ ಒಟ್ಟು 6 ಗೋಶಾಲೆಗಳಲ್ಲಿ 3 ಸಾವಿರಕ್ಕೂ ಹೆಚ್ಚು ಗೋಶಾಲೆಗಳಿದ್ದು, ಅವುಗಳಿಗೆ ಪ್ರತಿನಿತ್ಯ ನೀರು ಹಾಗೂ ಮೇವು ವಿತರಿಸಲಾಗುತ್ತಿದೆ ಎಂದರು. ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಯಾವುದೇ ಗೋಶಾಲೆಗಳಲ್ಲಿ ಮೇವಿನ ಕೊರತೆ ಉಂಟಾಗದಂತೆ ಜಾಗ್ರತೆ ವಹಿಸಿದ್ದು, ಮೇವನ್ನು ಸಕಾಲಿಕವಾಗಿ ಪೂರೈಕೆ ಮಾಡಲಾಗುತ್ತದೆ ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಎನ್.ಪ್ರೇಮಸುಧಾ ಮಾತನಾಡಿ, ಕ್ಷೇತ್ರದ ಯಾವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ವೈದ್ಯರ ಕೊರತೆ ಇಲ್ಲ. ಔಷಧ ದಾಸ್ತಾನು ಸಮಪರ್ಕವಾಗಿದೆ. ಮೂರ್ನಾಲ್ಕು ಕೇಂದ್ರಗಳಲ್ಲಿ ಮಾತ್ರ ಶುಶ್ರೂಷಕಿಯರ ಕೊರತೆ ಇದೆ. ಪರಶುರಾಮಪುರ ಸರ್ಕಾರಿ ಆಸ್ಪತ್ರೆಗೆ ತಜ್ಞ ವೈದ್ಯರನ್ನು ನೇಮಿಸುವ ಕುರಿತು ಆರೋಗ್ಯ ಸಚಿವರು ನಿರ್ದೇಶನ ನೀಡಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದರು.
ಶಾಸಕ ಟಿ.ರಘುಮೂರ್ತಿ ಪ್ರತಿಕ್ರಿಯಿಸಿ, ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಗರ್ಭಿಣಿ ಬಾಣಂತಿಯರ ಬಗ್ಗೆ ವಿಶೇಷ ಗಮನಹರಿ ಸಬೇಕು, ವೈದ್ಯರು ಸಕಾಲದಲ್ಲಿ ಆಸ್ಪತ್ರೆಯಲ್ಲಿದ್ದು, ತ್ವರಿತಗತಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವಂತಾಗಬೇಕು ಎಂದು ಸೂಚನೆ ನೀಡಿದರು. ತೋಟಗಾರಿಕೆ, ರೇಷ್ಮ, ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು ನಿಮ್ಮ ವ್ಯಾಪ್ತಿಯಲ್ಲಿಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೊಳಿಸುವ ಕುರಿತು ಚಿಂತನೆ ನಡೆಸಬೇಕು. ಇಲಾಖೆಯ ಸೌಲಭ್ಯಗಳ ಬಗ್ಗೆ ಹೆಚ್ಚು ಹೆಚ್ಚು ಪ್ರಚಾರ ಕೈಗೊಳ್ಳಬೇಕು. ರೈತರಿಗೆ ಸರ್ಕಾರದಿಂದ ಸಬ್ಸಿಡಿ ಮೂಲಕ ನೀಡುವ ಎಲ್ಲಾ ಯೋಜನೆಗಳ ಬಗ್ಗೆ ನಿಖರ ಮಾಹಿತಿ ನೀಡಬೇಕೆಂದರು.
ಅರಣ್ಯ ಇಲಾಖೆ ಅಧಿಕಾರಿಗಳು ಸಹ ಕೇವಲ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಬದಿ ಗಿಡಗಳನ್ನು ನೆಡದೆ ನಗರದ ನೂತನ ಇಂಜಿನಿಯರಿಂಗ್ ಕಾಲೇಜಿನಿಂದ ನಾಯಕನಹಟ್ಟಿಯಲ್ಲಿ ಸಹ ಎರಡೂ ಬದಿಯಲ್ಲಿ ಗಿಡಗಳನ್ನು ನೆಡುವಂತೆ ಸಲಹೆ ನೀಡಿದರು. ಶಿಶು ಅಭಿವೃದ್ಧಿ ಆಧಿಕಾರಿ ಸಿ.ಕೆ.ಗಿರಿಜಾಂಬ ಮಾಹಿತಿ ನೀಡಿ, ತಾಲ್ಲೂಕಿನಾದ್ಯಂತ 470ಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳಿದ್ದು, ಎಲ್ಲೆಡೆ ಸಿಬ್ಬಂದಿ ವರ್ಗ ಕಾರ್ಯನಿರ್ವಹಿಸುತ್ತಿದೆ. ಮಾತೃಶ್ರೀ, ಮಾತೃ ಪೂರ್ಣ, ಮಾತೃವಂದನ ಯೋಜನೆಯಲ್ಲಿ ಒಟ್ಟು 13.900 ಫಲಾನು ಭವಿಗಳು ತಮ್ಮ ಹೆಸರು ನೊಂದಾಯಿಸಿಕೊಂಡು ಈ ಯೋಜನೆಯ ಸಹಾಯವನ್ನು ಪಡೆಯುತ್ತಿದ್ಧಾರೆಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ವಿಶೇಷ ಸೂಚನೆ ನೀಡಿದ ಶಾಸಕ ಟಿ.ರಘುಮೂರ್ತಿ ಪ್ರತಿನಿತ್ಯ ನಿಮ್ಮ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಯ ಬಗ್ಗೆ ಅಧಿಕಾರಿಗಳಿಗೆ ತಿಳಿಸಬೇಕು, ಅವಶ್ಯವಿದ್ದಲ್ಲಿ ನಾನೇ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸುವುದಾಗಿ ತಿಳಿಸಿದರು. ಒಟ್ಟಿನಲ್ಲಿ ಕ್ಷೇತ್ರದ ಜನತೆ ಬರಗಾಲದ ಹಿನ್ನೆಲೆಯಲ್ಲಿ ನೋವು ಅನುಭವಿಸದೆ ಸಂತೋಷದಿಂದ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
