ಚಿತ್ರದುರ್ಗ
ಚಿತ್ರದುರ್ಗ ಜಿಲ್ಲೆಯಲ್ಲಿನ ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ 25 ಕೋಟಿ ರೂ. ಗಳ ವೆಚ್ಚದಲ್ಲಿ ಕೈಗೊಳ್ಳಲಾಗುವ ಕಾಮಗಾರಿಗಳ ಕ್ರಿಯಾ ಯೋಜನೆಗೆ ಈಗಾಗಲೆ ಅನುಮೋದನೆ ದೊರೆತಿದ್ದು, ಜನವರಿ ತಿಂಗಳಿನಲ್ಲಿ ಎಲ್ಲ ಕಾಮಗಾರಿಗಳನ್ನು ಪ್ರಾರಂಭಿಸುವಂತೆ ಕಾರ್ಮಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವೆಂಕಟರಮಣಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರದಂದು ಏರ್ಪಡಿಸಲಾದ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯ ಜಿಲ್ಲಾ ಮಟ್ಟದ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸುಪ್ರಿಂಕೋರ್ಟ್ ಆದೇಶದ ಪ್ರಕಾರ ಜಿಲ್ಲೆಯಲ್ಲಿನ ಮುಖ್ಯ ಖನಿಜ ಹಾಗೂ ಉಪಖನಿಜಗಳ ಮೇಲೆ ವಿಧಿಸಲಾಗುವ ರಾಜಧನದ ಮೊತ್ತವನ್ನು ಜಿಲ್ಲಾ ಖನಿಜ ಪ್ರತಿಷ್ಠಾನದ ಉಳಿತಾಯ ಖಾತೆಗೆ ಜಮಾ ಮಾಡಲಾಗುತ್ತಿದೆ. ಕಳೆದ ಡಿಸೆಂಬರ್ ವರೆಗೆ ಒಟ್ಟು 75.60 ಕೋಟಿ ರೂ. ಜಮಾ ಆಗಿದೆ. ಹೊಳಲ್ಕೆರೆ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು 73. 60 ಕೋಟಿ ರೂ. ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಗೆ ಜಮಾ ಆಗಿದೆ ಎಂದು ತಿಳಿಸಿದರು
ಚಿತ್ರದುರ್ಗ- 1.15 ಕೋಟಿ ರೂ., ಹಿರಿಯೂರು- 0.055 ಕೋಟಿ, ಚಳ್ಳಕೆರೆ- 0.26 ಕೋಟಿ, ಹೊಸದುರ್ಗ- 0.361 ಕೋಟಿ, ಮೊಳಕಾಲ್ಮೂರು ತಾಲ್ಲೂಕಿನಲ್ಲಿ 0.168 ಕೋಟಿ ರೂ. ಪ್ರತಿಷ್ಠಾನ ನಿಧಿಗೆ ಜಮ ಆಗಿದೆ. ನಿಧಿಯ ಅನುದಾನದಲ್ಲಿ ಪ್ರಥಮ ಹಂತದಲ್ಲಿ 25 ಕೋಟಿ ರೂ.ಗಳ ವೆಚ್ಚದಲ್ಲಿ ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ರೂಪಿಸಲಾಗಿರುವ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಸಂಬಂಧಪಟ್ಟ ಅನುಷ್ಠಾನ ಇಲಾಖೆಗಳಿಗೆ ಈಗಾಗಲೆ ಕಾಮಗಾರಿಗಳ ವಿವರವನ್ನು ನೀಡಲಾಗಿದ್ದು, ಅಧಿಕಾರಿಗಳು ಇದೇ ಜನವರಿ ತಿಂಗಳಿನಲ್ಲಿ ಎಲ್ಲ ಕಾಮಗಾರಿಗಳನ್ನು ಪ್ರಾರಂಭಿಸಬೇಕು. ಕಾಮಗಾರಿ ಪ್ರಾರಂಭಿಸುವಲ್ಲಿ ವಿಳಂಬ ಮಾಡುವ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಿ, ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ಸಂಚಾರಿ ಆರೋಗ್ಯ ಘಟಕ :
ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 63 ಗ್ರಾಮಗಳು ಗಣಿ ಬಾಧಿತ ಪ್ರದೇಶ ವ್ಯಾಪ್ತಿಗೆ ಬರುವ ಗ್ರಾಮಗಳಾಗಿದ್ದು, ಇಲ್ಲಿನ ಜನರ ಆರೋಗ್ಯ ತಪಾಸಣೆ, ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ತಾಲ್ಲೂಕಿಗೆ ಒಂದರಂತೆ ಸಂಚಾರಿ ಆರೋಗ್ಯ ಘಟಕವನ್ನು ಒದಗಿಸಲು ಜಿಲ್ಲಾ ಖನಿಜ ಪ್ರತಿಷ್ಠಾನದ ನಿಧಿಯಿಂದ ಅನುದಾನಕ್ಕಾಗಿ ಕ್ರಿಯಾ ಯೋಜನೆ ರೂಪಿಸಲಾಗಿದೆ.
ಪ್ರತಿ ಘಟಕದಲ್ಲಿ 1- ಸುಸಜ್ಜಿತ ಆ್ಯಂಬುಲೆನ್ಸ್, ವಾಹನ ಚಾಲಕ, ತಜ್ಞ ವೈದ್ಯರು, ಟೆಕ್ನಿಷಿಯನ್, ಸಹಾಯಕ ಸಿಬ್ಬಂದಿ, ಫಾರ್ಮಸಿಸ್ಟ್ ಅನ್ನು ನಿಯೋಜಿಸಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕಿಗೂ ತಲಾ ಒಂದು ಇಂತಹ ಸಂಚಾರಿ ಆರೋಗ್ಯ ಘಟಕವನ್ನು ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ. ಘಟಕದ ನಿರ್ವಹಣಾ ವೆಚ್ಚ, ವೈದ್ಯರು ಹಾಗೂ ಸಿಬ್ಬಂದಿಯ ವೇತನ, ವಾಹನಕ್ಕೆ ಇಂಧನ ಇತ್ಯಾದಿ ವ್ಯವಸ್ಥೆಗೆ ಪ್ರತಿ ವರ್ಷಕ್ಕೆ ಸುಮಾರು 21 ಲಕ್ಷ ರೂ. ವೆಚ್ಚವಾಗುವ ಅಂದಾಜು ಮಾಡಲಾಗಿದ್ದು, ಅನುದಾನವನ್ನು ಜಿಲ್ಲಾ ಖನಿಜ ಪ್ರತಿಷ್ಠಾನದ ನಿಧಿಯಿಂದ ಭರಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಿ.ವಿ. ನೀರಜ್ ಅವರು ಹೇಳಿದರು.
ತಾಲ್ಲೂಕಿಗೊಂದು ವೃಕ್ಷ ಉದ್ಯಾನ :
ಗಣಿ ಬಾಧಿತ ಜಿಲ್ಲೆಯಾಗಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಪರಿಸರವನ್ನು ಸಂರಕ್ಷಿಸುವ ಉದ್ದೇಶದಿಂದ ಈಗಾಗಲೆ ಹಿರಿಯೂರು, ಚಳ್ಳಕೆರೆ ತಾಲ್ಲೂಕಿನಲ್ಲಿ ವೃಕ್ಷ ಉದ್ಯಾನ ನಿರ್ಮಿಸಲಾಗಿದೆ. ಚಳ್ಳಕೆರೆಯಲ್ಲಿಯೂ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನ ರೂಪಿಸಲಾಗಿದ್ದು, ಈ ಉದ್ಯಾನದಲ್ಲಿ ಮಕ್ಕಳ ಆಟಿಕೆ ಉಪಕರಣಗಳನ್ನು ಅಳವಡಿಸಲು 10 ಲಕ್ಷ ರೂ. ಗಳ ಕ್ರಿಯಾ ಯೋಜನೆ ರೂಪಿಸಲಾಗಿದೆ. ಇದೇ ರೀತಿ ಹೊಳಲ್ಕೆರೆ ಹಾಗೂ ಹೊಸದುರ್ಗ ತಾಲ್ಲೂಕಿನಲ್ಲಿಯೂ ವೃಕ್ಷ ಉದ್ಯಾನ ರೂಪಿಸಲು ಉದ್ದೇಶಿಸಲಾಗಿದ್ದು, ಜಿಲ್ಲಾ ಖನಿಜ ಪ್ರತಿಷ್ಠಾನದ ನಿಧಿಯಿಂದ ಅನುದಾನ ಒದಗಿಸಲು ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿ ರಾಘವೇಂದ್ರ ಅವರು ಮಾಹಿತಿ ನೀಡಿದರು.
ಚಳ್ಳಕೆರೆಯ ವೃಕ್ಷ ಉದ್ಯಾನದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಮಕ್ಕಳ ಆಟಿಕೆ ಉಪಕರಣಗಳನ್ನು ಅಳವಡಿಸಲು ಒಪ್ಪಿಗೆ ಸೂಚಿಸಿದ ಸಚಿವರು. ಕಾಮಗಾರಿ ಪ್ರಾರಂಭಕ್ಕೆ ನಿರ್ದೇಶನ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಶಾಸಕರುಗಳಾದ ಚಂದ್ರಪ್ಪ, ಗೂಳಿಹಟ್ಟಿ ಶೇಖರ್, ರಘುಮೂರ್ತಿ, ಜಿ.ಹೆಚ್. ತಿಪ್ಪಾರೆಡ್ಡಿ, ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್, ಐಎಎಸ್ ಪ್ರೊಬೆಷನರಿ ಅಧಿಕಾರಿ ಡಾ. ನಂದಿನಿದೇವಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.