ಶಿವಮೊಗ್ಗ:
ರಾಜ್ಯದ ಕ್ರೀಡಾ ಸಚಿವ ಸಿ.ಟಿ ರವಿ ಅವರು ಬೆಳ್ಳಂಬೆಳಗ್ಗೆ ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಇರುವ ಕ್ರೀಡಾ ಹಾಸ್ಟೆಲ್‍ಗೆ ಭೇಟಿ ನೀಡಿ ಎಲ್ಲಾ ಸವಲತ್ತು ಪರಿಶೀಲನೆ ಮಾಡಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದ್ದಾರೆ.
ಇಲ್ಲಿನ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಸ್ಟೆಲ್‍ಗೆ ಧಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಹಾಸ್ಟೆಲ್ ನಲ್ಲಿರುವ ಮಕ್ಕಳ ಬೆಡ್ ಮೇಲೆ ಕುಳಿತು, ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದರು. ವಾರಕ್ಕೊಮ್ಮೆ ಎಷ್ಟು ದಿನ ನಿಮಗೆ ಚಿಕನ್ ಕೊಡ್ತಾರೆ ಎಂದು ಪ್ರಶ್ನಿಸಿದ್ದಲ್ಲದೇ, ಗೋಡಂಬಿ, ದ್ರಾಕ್ಷಿ ನಿಮಗೆ ಕೊಡ್ತಾರಾ?, ಎಷ್ಟು ದಿನ ಮೊಟ್ಟೆ, ಮಟನ್ ಕೊಡ್ತಾರೆ ಎಂದು ಕೇಳಿದ್ದಾರೆ. ಇಷ್ಟು ಮಾತ್ರವಲ್ಲದೆ ಹಾಸ್ಟೆಲ್‍ನ ವ್ಯವಸ್ಥೆ ಬಗ್ಗೆ ಕೂಡ ಮಕ್ಕಳ ಬಳಿ ಮಾಹಿತಿ ಪಡೆದುಕೊಂಡಿದ್ದಾರೆ.
ಈ ವೇಳೆ ತಮ್ಮ ಸುತ್ತಲೂ ನೆರೆದಿದ್ದ ಮಕ್ಕಳಿಗೆ ಹಿತವಚನ ಹೇಳಿದ ಸಚಿವರು, ಹಾರ್ಡ್ ವರ್ಕ್ ಮಾಡಿ ಮೆಡಲ್ ಗಳಿಸಿ ರಾಜ್ಯಕ್ಕೆ, ದೇಶಕ್ಕೆ ಕೀರ್ತಿ ತನ್ನಿ ಅಂತ ಶುಭ ಹಾರೈಸಿದ್ರು. ಈ ವೇಳೆ ಅಲ್ಲಿಯೇ ಇದ್ದ ವಾರ್ಡನ್ ಹಾಗೂ ಯುವಜನ ಸೇವಾ ಕ್ರೀಡಾ ಪ್ರಾಧಿಕಾರದ ಅಧಿಕಾರಿಗಳನ್ನು ಕರೆದು ಮಕ್ಕಳಿಗೆ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ತಾಕೀತು ಮಾಡಿದ್ರು.
ಪೋಷಕರು ಮನೆಯಲ್ಲಿದ್ದುಕೊಂಡು, ನಂಬಿಕೆ ಮೇಲೆ ಮಕ್ಕಳನ್ನು ಹಾಸ್ಟೆಲ್ ನಲ್ಲಿ ಬಿಟ್ಟಿರುತ್ತಾರೆ. ಪ್ರೋಟಿನ್ ಬ್ಯಾಲೆನ್ಸ್ ಮಾಡಿ ಆಹಾರ ನೀಡಿ. ಕೇವಲ ತೋರಿಕೆಗೆ ಮಾತ್ರ ಇಂದಿನ ಮಟ್ಟಿಗೆ ನಾನು ಬಂದಿದ್ದೇನೆ ಎಂದು ಪ್ರದರ್ಶನ ಮಾಡಿದ್ರೆ ಪರಿಣಾಮ ನೆಟ್ಟಗಿರಲ್ಲ ಅಂತ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ನಂತರ ಹಾಸ್ಟೆಲ್ ಪೂರ್ತಿ ರೌಂಡ್ ಹಾಕಿದ ಸಚಿವರು, ಪೊಲೀಸರು, ಅಧಿಕಾರಿಗಳು ಹಾಗೂ ಪತ್ರಕರ್ತರನ್ನು ಕೊಠಡಿಯಿಂದ ಹೊರಗಿಟ್ಟು ಸಮಾಲೋಚನೆ ನಡೆಸಿದ್ರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
