ಬೆಂಗಳೂರು
ವಿಧಾನಮಂಡಲ ಅಧಿವೇಶನ ಮುಗಿದ ಮರುದಿನ ಡಿಸೆಂಬರ್ 22 ರಂದು ಮಂತ್ರಿ ಮಂಡಲ ವಿಸ್ತರಣೆ ಮಾಡಲು ನಿರ್ಧರಿಸಿದ್ದು, ಅದೇ ದಿನ 20 ನಿಗಮ – ಮಂಡಳಿ, 6 ಮಂದಿ ಸಂಸದೀಯ ಕಾರ್ಯದರ್ಶಿ ಹುದ್ದೆಗಳನ್ನು ನೇಮಕ ಮಾಡಲು ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಸಭೆ ತೀರ್ಮಾನಿಸಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಭಯ ಪಕ್ಷಗಳ ಶಾಸಕರಲ್ಲಿ ಉಂಟಾಗಿರುವ ಅಸಮಾಧಾನವನ್ನು ಪ್ರಧಾನ ಆದ್ಯತೆ ಮೇಲೆ ನಿವಾರಿಸಲು ಹಾಗೂ ತಮ್ಮ ಪಾಲಿನ ಸಚಿವ ಸ್ಥಾನಗಳನ್ನು ಭರ್ತಿ ಮಾಡಲು ನಿರ್ಧರಿಸಲಾಗಿದೆ
ಕಾಂಗ್ರೆಸ್‍ನಲ್ಲಿ ಭುಗಿಲೆದ್ದಿರುವ ಅಸಮಾಧಾನವನ್ನು ನಿವಾರಿಸುವ ಜವಾಬ್ದಾರಿಯನ್ನು ಸಿದ್ದರಾಮಯ್ಯ ಅವರ ಹೆಗಲಿಗೆ ಹಾಕಿದ್ದು, ಜೆಡಿಎಸ್ ಶಾಸಕರನ್ನು ಸಂತೈಸುವ ಕೆಲಸವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರಿಗೆ ವಹಿಸಲಾಗಿದೆ.
ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ, ವಿಧಾನಸಭೆ ಅಧಿವೇಶನ ಡಿ. 21 ರಂದು ಮುಗಿಯಲಿದ್ದು, ಮರುದಿನ ಸಂಪುಟ ವಿಸ್ತರಣೆ ಮಾಡುತ್ತೇವೆ. ಅದೇ ದಿನ ನಿಗಮ ಮತ್ತು ಮಂಡಗಳಿಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ. ಮೊದಲ ಹಂತದಲ್ಲಿ 20 ನಿಗಮ ಮಂಡಳಿಗಳ ನೇಮಕಾತಿ, ಆರು ಸಂಸದೀಯ ಕಾರ್ಯದರ್ಶಿಗಳನ್ನು ನೇಮಿಸುವುದಾಗಿ ಸ್ಪಷ್ಟಪಡಿಸಿದರು.
ಈ ತಿಂಗಳ 9 ರಂದೇ ಸಚಿವ ಸಂಪುಟ ವಿಸ್ತರಣೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಲು ಸಾಧ್ಯವಾಗದ ಕಾರಣ ಅಧಿವೇಶನ ಮುಗಿದ ಬಳಿಕ ಸಂಪುಟ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ. ರಾಜಕೀಯ ನೇಮಕಾತಿಗಳಲ್ಲಿ ಮೂರನೇ ಎರಡು ಭಾಗ ಕಾಂಗ್ರೆಸ್‍ಗೆ, ಮೂರನೇ ಒಂದು ಭಾಗ ಜೆಡಿಎಸ್‍ಗೆ ದೊರೆಯಲಿದೆ ಎಂದರು.
ಇದೇ 8 ರಂದು ನಡೆಸಲು ತೀರ್ಮಾನಿಸಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ರದ್ದು ಮಾಡಿದ್ದು, ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನ ಸಂದರ್ಭದಲ್ಲಿ ಶಾಸಕಾಂಗ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಮೈತ್ರಿ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ನಮ್ಮ ಪಕ್ಷದಿಂದ ಯಾರೂ ರಾಜಿನಾಮೆ ನೀಡುವುದಿಲ್ಲ. ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಗೊಂದಲಗಳನ್ನು ಮಾಧ್ಯಮಗಳ ಮೂಲಕ ಹುಟ್ಟು ಹಾಕಲಾಗುತ್ತಿದೆ ಎಂದು ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದರು.
ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದು, ಸರ್ಕಾರ ಉರುಳಿಸಲು ಅವರಿಂದ ಸಾಧ್ಯವಿಲ್ಲ. ಕೇಂದ್ರ ಸಚಿವ ಪ್ರಕಾಶ್ ಜಾವಡೆಕರ್ ಅವರು ಯಾರದೋ ಮಾತು ಕೇಳಿ ಮೈತ್ರಿ ಸರ್ಕಾರದಲ್ಲಿ ಭೂಕಂಪವಾಗುತ್ತದೆ ಎಂದು ಹೇಳಿದ್ದಾರೆ. ಅವರ ಹೇಳಿಕೆಗೂ, ವಾಸ್ತವಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.
ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಖಚಿತ. ಅವರು ಯಾವುದೇ ರಾಜ್ಯದಲ್ಲೂ ಗೆಲುವು ಸಾಧಿಸುವುದಿಲ್ಲ ಎಂದು ಸಿದ್ದರಾಮಯ್ಯ ಭವಿಷ್ಯ ನುಡಿದರು.
ಜೆಡಿಎಸ್ ರಾಷ್ಟ್ರೀಯ ಮುಖಂಡ ಡ್ಯಾನಿಷ್ ಅಲಿ ಮಾತನಾಡಿ, ಭೂಕಂಪ ಮೈತ್ರಿ ಸರ್ಕಾರದಲ್ಲಿ ಆಗುವುದಿಲ್ಲ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ನಂತರ ಬಿಜೆಪಿಯಲ್ಲಿ ಭೂಕಂಪವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








