ಸಾಮಾಜಿಕ ನ್ಯಾಯದಡಿಯಲ್ಲಿ ಸಚಿವ ಸ್ಥಾನಕ್ಕೆ ಮನವಿ

ಹೂವಿನಹಡಗಲಿ :

         ಸಾಮಾಜಿಕ ನ್ಯಾಯದ ಅಡಿಯಲ್ಲಿ ಸಚಿವ ಸ್ಥಾನವನ್ನು ನೀಡುವಂತೆ ಹೈಕಮಾಂಡಿಗೆ ಮನವಿ ಸಲ್ಲಿಸಿದ್ದೇನೆ ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.ಅವರು ತಾಲೂಕಿನ ದಾಸರಹಳ್ಳಿ, ಕೊಯಿಲಾರಗಟ್ಟಿ, ನವಲಿ, ಹಿರೇಹಡಗಲಿ, ಹಗರನೂರು ಸೇರಿದಂತೆ ಹಲವು ಕಡೆ 1 ಕೋಟಿ ರೂ ವೆಚ್ಚದ 11 ಶಾಲಾ ಕೊಠಡಿಗಳ ಕಾಮಗಾರಿಗೆ ಶಂಕುಸ್ಥಾಪನೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

        ನಾನು ಕೂಡಾ ಒಬ್ಬ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದ ಅವರು, ಜಿಲ್ಲೆಯ 7 ತಾಲೂಕುಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಿದ್ದು ಬಹುಮತದ ಅಂತರದಿಂದ ಪಕ್ಷವನ್ನು ಗೆಲ್ಲಿಸಿದ್ದು, ಹಿರಿತನ ಮತ್ತು ಜಾತಿವಾರು ಲೆಕ್ಕಚಾರದಲ್ಲಿ ಎಲ್ಲಾರೀತಿಯಿಂದಲೂ ಕೂಡಾ ಅರ್ಹನಾಗಿರುವುದರಿಂದ ಸಚಿವ ಸ್ಥಾನವನ್ನು ನೀಡುವಂತೆ ಮನವಿ ಮಾಡಿದ್ದೇನೆ. ಕೊನೆಘಳಿಗೆಯಲ್ಲಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿರುವುದಾಗಿ ತಿಳಿಸಿದರು.      

          ಹಂಪಿ ಉತ್ಸವ ಆಚರಣೆ ಬಗ್ಗೆ ಮಾತನಾಡಿದ ಶಾಸಕರು, ಈ ಹಿಂದೆ ಬಳ್ಳಾರಿ ಜಿಲ್ಲೆಯಲ್ಲಿ ಬರಗಾಲ ಆವರಿಸಿದ ಬಹುತೇಕ ಸಂದರ್ಭಗಳಲ್ಲಿಯೂ ಕೂಡಾ ಹಂಪಿ ಉತ್ಸವವನ್ನು ರದ್ದುಪಡಿಸಿದಂತಹ ಉದಾಹರಣೆಗಳಿವೆ. ಆದರೆ, ಈ ವರ್ಷ ಕಲಾವಿದರು ಸಾಹಿತಿಗಳು ಬುದ್ದಿಜೀವಿಗಳು, ಕನ್ನಡಪರ ಸಂಘಟನೆಗಳು ಹಂಪಿ ಉತ್ಸವವನ್ನು ಆಚರಿಸಬೇಕು ಎನ್ನುವ ಆಶಯವನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈಗಾಗಲೇ ನಾನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ, ದಿನಾಂಕ ನಿಗಧಿಗೊಳಿಸುವುದಷ್ಟೆ ಬಾಕಿ ಇದೆ ಎಂದರು.

          ಹೈದರಾಬಾದ್ ಕರ್ನಾಟಕ ವಿಶೇಷ ಯೋಜನೆಯಡಿ ಸಮರ್ಪಕವಾಗಿ ಅನುದಾನವನ್ನು ಬಳಕೆ ಮಾಡಿರುವುದಾಗಿ ಹೇಳಿದ ಶಾಸಕರು, ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಹೈ.ಕ. ಅಭಿವೃದ್ದಿ ಯೋಜನೆಯಡಿ ಒಂದು ಸಾವಿರ ಕೋಟಿ ರೂ ಘೋಷಣೆ ಮಾಡಿದ್ದರು ಮರು ಮನವಿ ಸಲ್ಲಿಸಿದ ನಾವುಗಳು 1500 ಕೋಟಿ ನೀಡಬೇಕೆಂದು ಒತ್ತಾಯಿಸಿದ್ದೇವು, ಆ ಪ್ರಕಾರವಾಗಿ ಯೋಜನೆ ಕಾಮಗಾರಿ ನಡೆಯುತ್ತಿದೆ ಅನುದಾನ ಬಿಡುಗಡೆ ವಿಳಂಭವಾಗಿರಬಹುದೇ ಹೊರತು ಕಡಿತವಾಗಿಲ್ಲ ಎಂದು ಹೇಳಿದರು.

           ಇದೇ ಸಂದರ್ಭದಲ್ಲಿ ಕೊಂಬಳಿ ಗ್ರಾ.ಪಂ. ಪಿಡಿಓರವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಫಲಾನುಭವಿಗಳಿಂದ ಹಣ ಪಡೆದು ಮನೆ ಮಂಜೂರಾತಿಗೆ ಶಿಫಾರಸ್ಸು ಮಾಡುವ ಸದಸ್ಯರ ಮಾತಿಗೆ ಬೆಲೆಕೊಟ್ಟು ಫಲಾನುಭವಿಗಳ ಪಟ್ಟಿ ಸಿದ್ದಗೊಳಿಸುತ್ತೀರಿ, ಅರ್ಹ ಫಲಾನುಭವಿಗಳಿಗೆ ಮನೆ ಮಂಜೂರಾತಿ ಮಾಡಲು ಹೇಳಿದರೆ ನಿರಾಕರಿಸುತ್ತೀರಿ ಏಕೆ ? ಎಂದರು.

           ತಾ.ಪಂ. ಇ.ಒ. ಸೋಮಶೇಖರರವರಿಗೆ ಪಿಡಿಒ ಸುರೇಶರವರನ್ನು ಕೂಡಲೇ ಅಮಾನತ್ತು ಗೊಳಿಸುವಂತೆ ಸೂಚಿಸಿದರು.ಸಂದರ್ಭದಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ಎಸ್.ಹಾಲೇಶ, ಪ್ರಚಾರ ಸಮಿತಿ ಅಧ್ಯಕ್ಷ ಅಟವಾಳಗಿ ಕೊಟ್ರೇಶ, ಮುಖಂಡರಾದ ಬ್ಯಾಲಹುಣ್ಸಿ ಬಸವನಗೌಡ, ಚಂದ್ರನಾಯ್ಕ, ಬೆಂಚಿ ಸುರೇಶ, ಮೋಹನಕುಮಾರ, ಮೋರಗೇರಿ ನಾಗಭೂಷಣ, ಲೋಕೇಶ, ಡೊಳ್ಳಿನ ಸಂಗಪ್ಪ, ದೇವರಾಜ, ಪಿ.ಡಬ್ಲ್ಯೂ.ಡಿ. ಎಇಇ ಪಾಟೀಲ್ ಬಿಇಓ ಬಸವರಾಜ ಶಿವಪುರ, ತಾ.ಪಂ. ಇ.ಓ.ಸೋಮಶೇಖರ, ಸೇರಿದಂತೆ ಇತರರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link