ಮತ ಪಟ್ಟಿಯಲ್ಲಿ ಜಿಲ್ಲಾ ಸಚಿವರ ಹೆಸರು ನಾಪತ್ತೆ : ರಮೇಶ್ ಬಾಬು ಮತದಾನ

ಚಿಕ್ಕನಾಯಕನಹಳ್ಳಿ :

    ಮತದಾರರ ಪಟ್ಟಿಯಲ್ಲಿ ಸಚಿವರಾದ ಜೆ.ಸಿ.ಮಾಧುಸ್ವಾಮಿಯವರ ಹೆಸರು ಇಲ್ಲದ ಕಾರಣ ವಿಜ್ಞಾನ ಹಾಗೂ ಕಾನೂನು ಪದವೀಧರರಾಗಿದ್ದರೂ ಜೆ.ಸಿ.ಮಾಧುಸ್ವಾಮಿಯವರು ಈ ಬಾರಿಯ ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಮತ ಚಲಾಯಿಸಲಾಗಲಿಲ್ಲ, ಕಾಂಗ್ರೆಸ್ ಅಭ್ಯಾರ್ಥಿ ರಮೇಶ್ ಬಾಬು ತಮ್ಮ ಮತವನ್ನು ಇಲ್ಲಿಯೇ ಚಲಾಯಿಸಿದರು.

    ಆಗ್ನೇಯ ಪದವೀಧರ ಕ್ಷೇತ್ರ ವಿಧಾನ ಪರಿಷತ್ ಚುನಾವಣೆಗೆ ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲೂ ಮತಗಟ್ಟೆ ಸ್ಥಾಪಿಸಲಾಗಿತ್ತು, ತಾಲ್ಲೂಕಿನಲ್ಲಿ 1836 ಮತಗಳಿದ್ದು ಚಿಕ್ಕನಾಯಕನಹಳ್ಳಿ ಹಾಗೂ ಹುಳಿಯಾರು ಮತ ಕೇಂದ್ರವನ್ನು ಸೂಕ್ಷ್ಮ ಮತಗಟ್ಟೆಗಳೆಂದು ಘೋಷಣೆ ಮಾಡಲಾಗಿತ್ತು.

   ತಾಲ್ಲೂಕಿನ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ತಾಲ್ಲೂಕು ಕಛೇರಿ, ಹುಳಿಯಾರು, ಕಂದಿಕೆರೆ, ಶೆಟ್ಟಿಕೆರೆ, ಹಂದನಕೆರೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.ತಾಲ್ಲೂಕಿನಲ್ಲಿ 1836 ಮತಗಳಿಗೆ 1523 ಮತಚಲಾವಣೆಗೊಂಡು ಶೇ.82.95 ಮತದಾನವಾಗಿದೆ.

    ಚಿ.ನಾ.ಹಳ್ಳಿಯಲ್ಲಿ 327 ಪುರುಷ ಹಾಗೂ 190 ಮಹಿಳೆ ಒಟ್ಟು 517 ಮತ ಚಲಾವಣೆಯಾಗಿದೆ. ಹಂದನಕೆರೆಯಲ್ಲಿ 129 ಪುರುಷ, 46 ಮಹಿಳೆ ಒಟ್ಟು 175 ಚಲಾವಣೆಯಾಗಿದೆ, ಶೆಟ್ಟಿಕೆರೆ 115 ಪುರುಷ, 56 ಮಹಿಳೆ ಒಟ್ಟು 171 ಮತ ಚಲಾವಣೆಗೊಂಡಿದೆ. ಹುಳಿಯಾರು 335 ಪುರುಷ, 130 ಮಹಿಳೆ ಒಟ್ಟು 465 ಮತ ಚಲಾವಣೆಗೊಂಡಿದೆ.

   ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಾಬು ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ಮತ ಚಲಾಯಿಸಿದರು. ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಹುಳಿಯಾರಿನಲ್ಲಿ ಮತ ಚಲಾಯಿಸಿದರು.ಸಚಿವ ಜೆ.ಸಿ.ಮಾಧುಸ್ವಾಮಿ ಬಿಜೆಪಿ ಕಾರ್ಯಕರ್ತರು ಶಾಮಿಯಾನ ಹಾಕಿಕೊಂಡಿದ್ದ ಬಳಿ ತೆರಳಿ ಮತದಾನದ ವಿವರಣೆ ಪಡೆದರು.

   ಬಿಜೆಪಿ ಅಭ್ಯರ್ಥಿ ಎಂ.ಚಿದಾನಂದಗೌಡ ಪರವಾಗಿ ಸಚಿವ ಜೆ.ಸಿ.ಮಾಧುಸ್ವಾಮಿ ಬಣ ಹಾಗೂ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಬಣದ ಎರಡು ಕಡೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿ ಹೋಬಳಿಯಲ್ಲೂ ಬೇರೆ, ಬೇರೆ ಶಾಮಿಯಾನ ಹಾಕಿಕೊಂಡು ಮತದಾರರಿಗೆ ಮತ ಚಲಾಯಿಸಲು ಮನವಿ ಮಾಡುತ್ತಿದ್ದರು.

   ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಕಾರ್ಯಕರ್ತರು ಜೆಡಿಎಸ್ ಅಭ್ಯರ್ಥಿ ಚೌಡರೆಡ್ಡಿ ತೂಪಲ್ಲಿ ಪರವಾಗಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಬಾಬು ಪರವಾಗಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಮನವಿ ಮಾಡುತ್ತಿದ್ದರು. ಪಕ್ಷೇತರ ಅಭ್ಯರ್ಥಿ ಶ್ರೀನಿವಾಸ್ ಪರವಾಗಿ ಅವರ ಅಭಿಮಾನಿಗಳು ಮತ ಚಲಾಯಿಸುವಂತೆ ಮತದಾರರಲ್ಲಿ ಮನವಿ ಮಾಡುತ್ತಿದ್ದರು.
ಮತಕೇಂದ್ರದೊಳಗೆ ಬರುವ ವೇಳೆ ಸಿಬ್ಬಂದಿಗಳು ಮತದಾರರಿಗೆ ಥರ್ಮಲ್ ಸ್ಕ್ಯಾನಿಂಗ್ ಹಾಗೂ ಸ್ಯಾನಿಟೈಸರಿಂಗ್ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link