ಕೃಷಿ ಹೊಂಡ ಅವ್ಯವಹಾರ:ತಾಪಂ ಸಭೆಯಲ್ಲಿ ಗಂಭೀರ ಚರ್ಚೆ

ಮಧುಗಿರಿ

      ಕರ್ನಾಟಕ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತುಮಕೂರು ಮತ್ತು ತಾಲ್ಲೂಕು ಪಂಚಾಯಿತಿ ಮಧುಗಿರಿ ವತಿಯಿಂದ ಫೆ. 20 ರಂದು ಬೆಳಗ್ಗೆ 11-00 ಗಂಟೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಹಾಗೂ ತಾಪಂ ಸದಸ್ಯರ ಸಾಮಾನ್ಯ ಸಭೆ (ಕೆ.ಡಿ.ಪಿ.ಸಭೆ) ನಡೆಯಿತು.

         ಅಧ್ಯಕ್ಷತೆಯನ್ನು ತಾ.ಪಂ ಅಧ್ಯಕ್ಷೆ ಇಂದಿರಾ ದೇನಾನಾಯ್ಕ್ ವಹಿಸಿದ್ದರು. ಸಭೆಯಲ್ಲಿ ವಿಶೇಷವಾಗಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ನಿರ್ಮಿತಿ ಕೇಂದ್ರದ ಅಧಿಕಾರಿಯ ಕಾರ್ಯವೈಖರಿ ಹಾಗೂ ಕಾಮಗಾರಿಗಳ ವಿಳಂಬ ಕುರಿತು ಚರ್ಚಿಸಲಾಯಿತು. ನಂತರ ತಾಲ್ಲೂಕಿನ ಎಷ್ಟು ಕೆರೆಗಳಿಗೆ ಎತ್ತಿನ ಹೊಳೆ ನೀರು ಬರಲಿದೆ? ಎಷ್ಟು ಕೆರೆಗಳಿಗೆ ನೀರು ಬರುವುದಿಲ್ಲ. ನೀರು ಬಾರದೆ ಇರುವ ಕೆರೆಗಳಿಗೆ ಪರ್ಯಾಯ ಮಾರ್ಗ ಏನು ಎಂಬ ಬಗ್ಗೆಯೂ ಚರ್ಚೆ ನಡೆಯಿತು.

         ಎತ್ತಿನ ಹೊಳೆ ನೀರನ್ನು ಕೊರಟಗೆರೆ, ಮಧುಗಿರಿ, ಪಾವಗಡ ತಾಲ್ಲೂಕುಗಳಿಗೆ ಕೆಲವು ಕಡೆ ಪೈಪ್‍ಲೈನ್ ಮೂಲಕ ತರಲು ಈಗಾಗಲೇ ಆನ್‍ಲೈನ್‍ನಲ್ಲಿ ಎರಡು ಹಂತದ ಟೆಂಡರ್‍ನಲ್ಲಿ ಒಟ್ಟು 1214 ಕೋಟಿ ರೂ. ಗಳ ಟೆಂಡರ್ ಕರೆಯಲಾಗಿದೆ. ಕೊರಟಗೆರೆ ತಾಲ್ಲೂಕಿನ 11 ಕೆರೆಗಳಿಗೆ ಪೆನ್ನಾರ್ ಯೋಜನೆ ಮೂಲಕ ನೀರು ಹೆಚ್ಚುವರಿಯಾಗಿ ಹರಿಸಲಾಗುವುದು. ಪಾವಗಡ ತಾಲ್ಲೂಕಿನ 26 ಕೆರೆಗಳಿಗೆ ಎತ್ತಿನಹೊಳೆ ನೀರನ್ನು ತುಂಬಿಸಲಾಗುವುದು.

           ಮಧುಗಿರಿ ತಾಲ್ಲೂಕಿನ ಆರು ಹೋಬಳಿಗಳಲ್ಲಿ ಕೃಷಿ ಅಧಿಕಾರಿಗಳಾರೂ ಸಹ ತಾಲ್ಲೂಕು ಸಹಾಯಕ ಕೃಷಿ ಅಧಿಕಾರಿಗಳ ಮಾತು ಕೇಳುತ್ತಿಲ್ಲ ಎಂದು ಬಹುತೇಕ ಎಲ್ಲಾ ತಾ.ಪಂ ಸದಸ್ಯರುಗಳ ಒಟ್ಟಾರೆ ಅಭಿಪ್ರಾಯ ಸಭೆಯಲ್ಲಿ ಮೂಡಿ ಬಂದಿತು. ಮಿಡಿಗೇಶಿ ತಾಪಂ ಸದಸ್ಯೆ ಯಶೋಧಮ್ಮ ಎಸ್.ಎನ್.ರಾಜು, ಕೃಷಿ ಹೊಂಡಗಳನ್ನು ರೈತರೆ ನಿರ್ಮಿಸಿಕೊಂಡು, ಸನುದಾನ ಪಡೆಯುವುದು ಒಚಿದೆಡೆಯಾದರೆ, ಮತ್ತೊಂದೆಡೆ ಕೃಷಿ ಅಧಿಕಾರಿಗಳ ಹಾಗೂ ಅವರ ಹಿಂಬಾಲಕರಿಂದ ಕೆಲವು ಗ್ರಾಮಗಳಲ್ಲಿ ಕೃಷಿ ಹೊಂಡ ನಿರ್ಮಿಸದೆಯೇ ಅನುದಾನ ಬಿಲ್‍ಗಳನ್ನು ನೀಡಲಾಗಿದೆ.

           ಮತ್ತೆ ಕೆಲವರು ಕಳೆದ ಸಾಲಿನಲ್ಲಿ ಕೃಷಿಹೊಂಡ ತೆಗೆದಿದ್ದು ಅನುದಾನ ಪಡೆದಿದ್ದು, ಮತ್ತೆ ಈಗ ಅದೇ ಕೃಷಿ ಹೊಂಡಗಳನ್ನು ನವೀಕರಣ ಮಾಡಿ ,ಮತ್ತೆ ನುದಾನ ಪಡೆಯುತ್ತಿದ್ದಾರೆ ತಿಳಿದು ಬಂದಿದೆ. ಈ ಆರೋಪಕ್ಕೆ ತಾಲ್ಲೂಕಿನ ಎಲ್ಲಾ ಸದಸ್ಯರು ದ್ವನಿ ಗೂಡಿಸಿದರು. ತಾಪಂ ಅಧ್ಯಕ್ಷೆ ಇಂದಿರಾ ದೇನಾನಾಯ್ಕ್, ಕೃಷಿ ಇಲಾಖೆಯಲ್ಲಿನ ಮಹಿಳಾ ನೌಕರರು ಸೇರಿದಂತೆ ಕೆಲವರು ರೈತರಿಗೆ ಒಂದಿಷ್ಟೂ ಸರಿಯಾದ ಮಾಹಿತಿ ನೀಡುತ್ತಿಲ್ಲ. ಕಚೆರಿಯಲ್ಲಿ ಕಾಲು ಮೇಲೆ ಕಾಲನ್ನು ಹಾಕಿಕೊಂಡು ಕುಳಿತುಕೊಳ್ಳುವುದರೊಂದಿಗೆ ಏಕ ಚಕ್ರಾಧಿಪತ್ಯ ನಡೆಸುತ್ತಿದ್ದಾರೆ. ಇದೇ ರೀತಿ ನಡೆದಲ್ಲಿ ಕೃಷಿ ಇಲಾಖೆಗಳಲ್ಲಿ ನಡೆಯುತ್ತಿರುವ ಅಕ್ರಮ, ಅನ್ಯಾಯ, ಲಂಚಾವತಾರದ ಬಗ್ಗೆ ಲೋಕಾಯುಕ್ತ ಹಾಗೂ ಎ.ಸಿ.ಬಿ. ಇಲಾಖೆಗೆ ದೂರು ನೀಡುವುದಾಗಿ ಎಚ್ಚರಿಸಿದರು.

        ತಾಲ್ಲೂಕಿನ ಕೊಡಿಗೇನಹಳ್ಳಿ ಹಾಗೂ ಮಿಡಿಗೇಶಿ ಕೃಷಿ ಇಲಾಖೆಯಲ್ಲಿನ ಲಂಚಾವತಾರ ಮಿತಿ ಮೀರಿರುವುದಾಗಿ ಏರಿದ ಧ್ವನಿಯಲ್ಲಿ ಸಭೆಯಲ್ಲಿ ಚರ್ಚೆಯಾಯಿತು. ಕೃಷಿ ಹೊಂಡಗಳನ್ನು ನಿರ್ಮಿಸುತ್ತಿರುವುದು ರೈತರಲ್ಲ. ರೈತರಿಗೆ ಅಷ್ಟೊ ಇಷ್ಟೊ ಹಣ ನೀಡಿ ಪಹಣಿ ಪಡೆದು ಕೃಷಿ ಹೊಂಡ ಮಾಡುವುದಕ್ಕಾಗಿಯೆ ಎಂಬಂತಹ ದಳ್ಳಾಳಿಗಳಿದ್ದಾರೆ. ಅವರದೆ ಪ್ರಮುಖ ಪಾತ್ರ.

         ಒಂದು ಕೃಷಿ ಹೊಂಡ ನಿರ್ಮಿಸಲು ಅಧಿಕಾರಿಗಳಿಗೆ ಹತ್ತು ಸಾವಿರ ರೂ. ಲಂಚನೀಡಲೇ ಬೇಕಾದ ಪರಿಸ್ಥಿತಿ ತಾಲ್ಲೂಕಿನಲ್ಲಿ ಇದೆ. ಒಂದು ಟಾರ್ಪಾಲಿನ್ ಬೆಲೆ ಸರ್ಕಾರದ್ದು 990 ರೂ. ಸಾಮಾನ್ಯ ವರ್ಗದವರಿಗೆ, ಎಸ್.ಸಿ ಮತ್ತು ಎಸ್.ಟಿ ವರ್ಗದವರಿಗೆ ಒಂದಕ್ಕೆ 200 ರೂ. ಮಾತ್ರ ಇದೆ. ಆದರೆ ಸರ್ಕಾರದಿಂದ ನಿಗದಿಯಾದ ದರಕ್ಕಿಂತ ಹೆಚ್ಚಿನ ಬೆಲೆಗೆ ಟಾರ್ಪಾಲಿನ್‍ಗಳನ್ನು ಯಾವುದೇ ಮೇಲಧಿಕಾರಿಗಳ ಭಯವಿಲ್ಲದೆಯೇ ಮಾರಾಟ ನಡೆಯುತ್ತಿರುವ ಬಗ್ಗೆ ಸಿಂಗನ ಹಳ್ಳಿ ಗ್ರಾಪಂ ಅಧ್ಯಕ್ಷ ಕಾಂತರಾಜ ಆಕ್ರೋಶ ವ್ಯಕ್ತಪಡಿಸಿದರು.

         ಜೊತೆಗೆ ಕೊಡಿಗೇನಹಳ್ಳಿ ಕೃಷಿ ಇಲಾಖಾ ವ್ಯಾಪ್ತಿಯ ರಾಜಕೀಯ ಧುರೀಣರೊಬ್ಬರ ಮನೆಯಲ್ಲಿ 18 ಟಾರ್ಪಾಲಿನ್‍ಗಳಿದ್ದು, ತಲಾ 1800 ರೂ. ನಂತೆ ಮಾರಾಟ ನಡೆಯುತ್ತಿದೆ. ಸದರಿ ರಾಜಕೀಯ ಧುರೀಣನಿಗೆ ಕೃಷಿ ಇಲಾಖೆಯ ಟಾರ್ಪಾಲಿನ್‍ಗಳನ್ನು ವಿತರಿಸಿದ ಅಧಿಕಾರಿಯ ಮೇಲೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಯವರಿಗೆ ತಾಲ್ಲೂಕು ಪಂಚಾಯಿತಿ ವತಿಯಿಂದ ದೂರನ್ನು ನೀಡಲಾಗುವುದು ಎಂದರು.

         ಆಗ ರೈತರಿಗೆ ನೀಡಬೇಕಾದ ಟಾರ್ಪಾಲಿನ್‍ಗಳನ್ನು ಕೃಷಿ ಇಲಾಖೆಯ ಅಧಿಕಾರಿಗಳು ಮಾರಿಕೊಳ್ಳುತ್ತಿರುವುದಕ್ಕೆ ನಾಚಿಕೆ ಆಗುವುದಿಲ್ಲವೆ? ಮಾನ ಮರ್ಯಾದೆ ಇರಬೇಡವೇ ಎಂಬುದಾಗಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಗುಡುಗಿದರು. ಮುಂದುವರಿದು ಮಾತನಾಡಿದ ಇಂದಿರಾ ದೇನಾನಾಯ್ಕ್, ಹೊಸಕೆರೆಯಿಂದ ಐ.ಡಿ.ಹಳ್ಳಿ ಗ್ರಾಮಕ್ಕೆ ಹಾದು ಹೋಗುವ ಮಾರ್ಗದ ಬ್ರಹ್ಮಸಂದ್ರ ಗ್ರಾಮದ ಸಮೀಪ ಯಾವುದೇ ಮೂಲದಿಂದ ನೀರು ಸಂಗ್ರಹಣೆಯಾಗುವ ಮಾರ್ಗವಿಲ್ಲದ ಕಡೆ ಕೃಷಿ ಹೊಂಡ ನಿರ್ಮಿಸಿರುವುದು, ಇಲಾಖಾ ಅಧಿಕಾರಿಗಳು ಕಾಮಗಾರಿ ನಡೆಯುತ್ತಿರುವ ಕಡೆ ಭೇಟಿ ನೀಡಿರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಕೃಷಿ ಇಲಾಖೆಯಲ್ಲಿ ಬಿತ್ತನೆಗೆ ಕಡ್ಲೆಕಾಯಿ ವಿತರಿಸಿರುವುದು ಹುಳು ಬಿದ್ದಿರುವಂತಹುದಾಗಿದೆ. ರೈತರಿಗೆ ದೊರೆಯಬಹುದಾದ ಸೌಲಭ್ಯಗಳನ್ನು ಎಲ್ಲೆಂದರಲ್ಲಿ ವಿತರಿಸದೆಯೇ ನಿಗದಿತ ಇಲಾಖೆಯ ಬಳಿ ವಿತರಿಸುವಂತೆ ಎಚ್ಚರಿಸಿದರು.

       ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜಿಲ್ಲಾ ಪಂಚಾಯಿತಿ ತುಮಕೂರು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಮಧುಗಿರಿ ಇಲಾಖೆಯ ಅಧಿಕಾರಿ ಹೊನ್ನೇಶಪ್ಪ ತಾಲ್ಲೂಕಿನ ಕುಡಿಯುವ ನೀರಿನ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು. ಆಗ ತಾಪಂ ಅಧ್ಯಕ್ಷೆ ಜನ ಸಾಮಾನ್ಯರುಗಳಿಗೆ ಕುಡಿಯುವ ನೀರಿನ ತೊಂದರೆಯಾದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳವರಿಗೆ ತಾಲ್ಲೂಕು ಪಂಚಾಯಿತಿಯಿಂದ ಲಿಖಿತ ದೂರನ್ನು ನೀಡುವ ಎಚ್ಚರಿಕೆ ನೀಡಿದರು.

        ಮಧುಗಿರಿ ತಾಲ್ಲೂಕು ಆರೋಗ್ಯ ಇಲಾಖೆಯಿಂದ ದೊರೆಯಬಹುದಾದ ಸೌಲಭ್ಯಗಳ ಬಗ್ಗೆ ತಾಲ್ಲೂಕು ಆರೋಗ್ಯಾಧಿಕಾರಿ ವಿವರಣೆ ನೀಡಿದರು. ಡಾ. ಶರತ್ ಮನೋರೋಗ ತಜ್ಞರು ಮಾತನಾಡಿ, ಮಾನಸಿಕ ರೋಗಿಗಳು, ವಾಯುಪೀಡಿತ ಕಾಯಿಲೆಯವರಿಗೆ ಘನ ಸರ್ಕಾರ ತಾಲ್ಲೂಕು ಕೇಂದ್ರಸ್ಥಾನಗಳಲ್ಲೇ ಚಿಕಿತ್ಸೆ ನೀಡಲು ಮುಂದಾಗಿದೆ. ಪ್ರತಿ ತಿಂಗಳ ಮೂರನೆ ಮಂಗಳವಾರದಂದು ಮನೋರೋಗ ತಜ್ಞರು ಚಿಕಿತ್ಸೆ ನೀಡಲಿದ್ದು ಇದರ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳವಂತೆ ಮನವಿ ಮಾಡಿದರು.ಇದೇ ದಿನ ತಾಲ್ಲೂಕು ಪಂಚಾಯಿತಿ ಸ್ಥಾಯಿಸಮಿತಿ ಅಧ್ಯಕ್ಷರ ಬದಲಾವಣೆ ಸರ್ವ ಸದಸ್ಯರ ಸಮ್ಮುಖದಲ್ಲಿ ನಡೆಯಿತು. ರಾಮಣ್ಣ ಬದಲಾಗಿ ಕೆ.ಸಿ.ರಾಜುರವರು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link