ಬೆಂಗಳೂರು
ಮಿಂಟೋ ಆಸ್ಪತ್ರೆ ವೈದ್ಯರ ಮೇಲೆ ಹಲ್ಲೆ ಪ್ರಕರಣ ಸಂಬಂಧ ಕಿರಿಯ ವೈದ್ಯರು ಕರೆ ನೀಡಿದ ರಾಜ್ಯಾದ್ಯಂತ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವೈದ್ಯರು ಕರ್ತವ್ಯಕ್ಕೆ ಹಾಜರಾದ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದ್ದರಿಂದ ರೋಗಿಗಳಿಗೆ ಹೆಚ್ಚಿನ ತೊಂದರೆ ಉಂಟಾಗಲಿಲ್ಲ
ಮಂಗಳವಾರ ಬೆಳಿಗ್ಗೆ 6 ಗಂಟೆಯಿಂದ ತುರ್ತುಸೇವೆಗಳನ್ನು ಹೊರತುಪಡಿಸಿ ಹೊರರೋಗಿಗಳ ವಿಭಾಗ(ಒಪಿಡಿ) ಸೇರಿದಂತೆ ಉಳಿದ ಸೇವೆಗಳನ್ನು ಸ್ಥಗಿತ ಮಾಡುವಂತೆ ವೈದ್ಯರು ಕರೆ ನೀಡಿದ್ದರಾದರೂ ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದ ಪರಿಣಾಮ ಬಹುತೇಖ ವೈದ್ಯರು ಎಂದಿನಂತೆ ಸೇವೆಗೆ ಹಾಜರಾಗಿದ್ದರು.
ವೈದ್ಯರ ಪ್ರತಿಭಟನೆ ಹಿನ್ನೆಲೆಯಲ್ಲಿ ರೋಗಿಗಳಿಗೆ ತೊಂದರೆಯಾಗದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುನ್ನೆಚ್ಚರಿಕೆ ಕೈಗೊಂಡು, ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿತ್ತು. ಇದರಿಂದಾಗಿ ವಿಕ್ಟೋರಿಯಾ, ಕೆ.ಸಿ. ಜನರಲ್, ಜಯನಗರ ಸರ್ಕಾರಿ ಆಸ್ಪತ್ರೆ, ವಾಣಿವಿಲಾಸ ಸೇರಿದಂತೆ ವಿವಿಧ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳವಾಗಿದ್ದರೂ ವೈದ್ಯಕೀಯ ಸೇವೆಯಲ್ಲಿ ಯಾವುದೇ ವ್ಯತ್ಯಯ ಕಂಡುಬರಲಿಲ್ಲ.
ಮುಂದುವರೆದ ಪ್ರತಿಭಟನೆ
ಸತತ ಐದನೇ ದಿನವೂ, ಮಿಂಟೋ ಆಸ್ಪತ್ರೆಯ ಕಿರಿಯ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಮಾತ್ರ ಪ್ರತಿಭಟನೆ ಮುಂದುವರೆಸಿದರು. ಇನ್ನೂ, ತಪ್ಪಿತಸ್ಥ ಕಾರ್ಯಕರ್ತರನ್ನು ಬಂಧನ ಮಾಡುವರೆಗೂ ತಮ್ಮ ಹೋರಾಟ ಮುಂದುವರೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜುಲೈ ತಿಂಗಳಲ್ಲಿ 24 ಮಂದಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಆಗಿತ್ತು. ನಂತರ ಕಣ್ಣಿಗೆ ಹಾಕಿದ ಡ್ರಾಪ್‌ನಿಂದ ಸಮಸ್ಯೆ ಆಗಿ, ಕಣ್ಣು ಕಳೆದುಕೊಂಡಿದ್ದರು. 10 ಜನರ ಕಣ್ಣಿನ ದೃಷ್ಟಿ ಸಂಪೂರ್ಣವಾಗಿ ಹೋಗಿದೆ. ಇನ್ನಷ್ಟು ಜನಕ್ಕೆ ದೃಷ್ಟಿ ದೋಷ ಆಗಿದೆ. ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಿಂಟೋ ಆಸ್ಪತ್ರೆ ವೈದ್ಯರ ನಡುವೆ ಘರ್ಷಣೆ ನಡೆದಿತ್ತು.
ಸೋಮವಾರ ಪ್ರತಿಭಟನಾ ಸ್ಥಳಕ್ಕೆ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಭೇಟಿ ನೀಡಿ ಮಾತುಕತೆ ನಡೆಸಿದ್ದರು.ಆದರೆ, ಈ ವೇಳೆ ವೈದ್ಯರ ಮನವೋಲಿಕೆಯ ಪ್ರಯತ್ನ ಕೈಗೂಡಲಿಲ್ಲ. ಇದರ ಬೆನ್ನಲ್ಲೇ ಮಂಗಳವಾರ ರಾಜ್ಯಾದ್ಯಂತ ಮುಷ್ಕರಕ್ಕೆ ವೈದ್ಯರ ಸಂಘಟನೆಗಳು ಕರೆ ನೀಡಿದ್ದವು.
ಕಿರಿಯ ವೈದ್ಯರ ಮೇಲೆ ಹಲ್ಲೆ ಆರೋಪ ಪ್ರಕರಣ ಸಂಬಂಧ ಸರ್ಕಾರಿ ಆಸ್ಪತ್ರೆ ಜೊತೆಗೆ ಖಾಸಗಿ ಆಸ್ಪತ್ರೆಗಳು ಬಂದ್ ಆಗಲಿದ್ದು, ನಾಳಿದ್ದು(ಗುರುವಾರ ರಾಜ್ಯದ ಎಲ್ಲಾ ಖಾಸಗಿ ಆಸ್ಪತ್ರೆಯಲ್ಲಿ ಒಪಿಡಿ ಸೇವೆ ಬಂದ್ ಮಾಡಲಾಗುವುದು ಎಚ್ಚರಿಕೆ ನೀಡಲಾಗಿದೆ.ಅದೇ ರೀತಿ, ಕಿರಿಯ ವೈದ್ಯರಿಗೆ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಬೆಂಬಲ ನೀಡಿದ್ದು, ನಾಳೆ ಎಲ್ಲಾ ಖಾಸಗಿ ಆಸ್ಪತ್ರೆಯಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಕೇಸ್ ಮುಚ್ಚುವ ಯತ್ನ
ಮೂರು ತಿಂಗಳ ಹಿಂದೆ ಮಿಂಟೋ ವೈದ್ಯರ ನಿರ್ಲಕ್ಷ ದಿಂದ ದೃಷ್ಟಿ ಕಳೆದುಕೊಂಡ ಪೈಕಿ ಕೆಲವರು ಇಲ್ಲಿನ ವಿವಿಪುರಂ ಪೊಲೀಸ್ ಠಾಣೆಗೆ ದೂರು ನೀಡಿ, ಪ್ರಕರಣ ದಾಖಲಿಸಿ ಕೊಂಡಿದ್ದರು.ಇದನ್ನು ಮಚ್ಚಿಹಾಕಲು ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ