ಹುಳಿಯಾರು
ಸದನದಲ್ಲಿ ಶಾಸಕ ಜೆ.ಸಿ.ಮಾಧುಸ್ವಾಮಿ ಅವರು ಕೆರೆಯ ಮಣ್ಣಿನ ಬಗ್ಗೆ ಪ್ರಸ್ತಾಪ ಮಾಡಿರುವುದಕ್ಕೆ ಸಾಮಾಜಿಕ ಜಾಲ ತಾಣದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಬೆಳಗಾವಿ ಅಧಿವೇಶನದ ಪ್ರಶ್ನೋತ್ತರ ಸಮಯದಲ್ಲಿ ಶಾಸಕ ಅನ್ನದಾನಿಯವರು ಸಭಾಪತಿಯವರಲ್ಲಿ ಕೆರೆಯಲ್ಲಿ ಮಣ್ಣು ತೆಗೆಯುತ್ತಿರುವ ಬಗ್ಗೆ ಪೊಲೀಸರು ದೂರು ದಾಖಲಿಸುತ್ತಿದ್ದು ಈ ಬಗ್ಗೆ ಗಮನ ಹರಿಸುವಂತೆ ಕೇಳಿದರು.
ಈ ಸಂದರ್ಭದಲ್ಲಿ ಚಿಕ್ಕನಾಯಕನಹಳ್ಳಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ ಸಹ ಅನ್ನದಾನಿಯವರನ್ನು ಬೆಂಬಲಿಸಿ ಹುಳಿಯಾರಿನಲ್ಲಿ ಉಪವಿಭಾಗಾಧಿಕಾರಿಗಳು ಕೆರೆಯಲ್ಲಿ ತಮ್ಮ ಜಮೀನುಗಳಿಗೆ ಬಳಸಲು ಕೆರೆಯಲ್ಲಿ ಹೂಳು ತುಂಬುತ್ತಿದ್ದ ರೈತರ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಆಪಾದಿಸಿದರು.
ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಒಳಪಟ್ಟಿದ್ದು ಕೆಲವರು ಉಪವಿಭಾಗಾಧಿಕಾರಿಗಳ ಕ್ರಮವನ್ನು ಸಮರ್ಥಿಸಿದ್ದಾರೆ ಮತ್ತೆ ಕೆಲವರು ಶಾಸಕರು ರೈತರ ಬಗ್ಗೆ ತೆಗೆದುಕೊಂಡಿರುವ ಕಾಳಜಿಯನ್ನು ಅಭಿನಂದಿಸುತ್ತಿದ್ದಾರೆ ಪ್ರಾಮಾಣಿಕವಾಗಿ ನಿಭಾಯಿಸಿ ಶಾಸನ ಸಭೆಯಲ್ಲಿ ಅಂಗೀಕರಿಸಿ ಅನುಮೋದನೆ ನೀಡಿ ಅಂಕಿತಗೊಂಡಿರುವ ಕಾನೂನಿನ ಘನತೆಯನ್ನು ಕಾಪಾಡಿದ್ದಾರೆ. ಸಂವಿಧಾನವನ್ನೂ ರಕ್ಷಿಸಲು ಅವರು ಕೈಗೊಂಡಿರುವ ಕ್ರಮ ಶ್ಲಾಘನೀಯ ಎಂಬ ಮಾತು ಕೇಳಿ ಬಂದಿದೆ.
ಇದೇ ವೇಳೆ ಶಾಸಕರು ಹೇಳಿದಂತೆ ಕೆರೆಯಲ್ಲಿ ಹೂಳು ಎತ್ತಲು ಸರ್ಕಾರವೇ ಲಕ್ಷಾಂತರ ರೂಪಾಯಿ ವ್ಯಯಿಸುತ್ತಿದ್ದು ಈ ನಿಟ್ಟಿನಲ್ಲಿ ರೈತರು ಸೇರಿದಂತೆ ಯಾರೇ ಆಗಲಿ ತಮ್ಮ ಸ್ವಂತ ಖರ್ಚಿನಲ್ಲಿ ಹೂಳು ಎತ್ತುವುದು ತಪ್ಪಲ್ಲ. ಆದರೆ ಹೂಳಿನ ನೆಪದಲ್ಲಿ ಮರಳು ತೆಗೆಯುವುದು ತರವಲ್ಲ, ಯಾವುದೇ ಕಾರಣಕ್ಕೂ ಮರಳು ತೆಗೆಯಲು ಅವಕಾಶವೇ ಇಲ್ಲ ಎಂದಿರುವುದು ಸರಿ ಇದೆ ಎಂಬ ಸಮರ್ಥನೆ ನೀಡುತ್ತಿದ್ದಾರೆ. ಒಟ್ಟಾರೆ ಮರಳು ಹಾಗೂ ಮಣ್ಣನ್ನು ಬೇರ್ಪಡಿಸುವುದು ಹೇಗೆ ಹಾಗೂ ಹೂಳು ಎಂದರೆ ಏನು ಯಾವಯಾವ ಕೆರೆಯಲ್ಲಿ ಎಷ್ಟೆಷ್ಟು ಹೂಳು ತುಂಬಿದೆ ಎಂದು ಪತ್ತೆಹಚ್ಚುವುದು ಹೇಗೆ ಎಂಬುದು ಯಕ್ಷಪ್ರಶ್ನೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ