ತುಮಕೂರು
ನಗರದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಗಳಿಂದ ಸಾರ್ವಜನಿಕರಲ್ಲಿ ಗೊಂದಲಗಳು ಉಂಟಾಗಿದ್ದು, ನಗರದ ಎಲ್ಲಾ ರಸ್ತೆಗಳಲ್ಲಿ ಅಗೆದಿರುವ ಗುಂಡಿಗಳಿಂದ ಸಾರ್ವಜನಿಕರಿಗೆ ತೀವ್ರತರವಾಗಿ ಸಮಸ್ಯೆಗಳು ಎದುರಾಗುತ್ತಿವೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಆಕ್ರೋಶ ವ್ಯಕ್ತ ಪಡಿಸಿದರು.
ನಗರದ ಪಾಲಿಕೆ ಆವರಣದಲ್ಲಿರುವ ಶಾಸಕರ ಕಚೇರಿಯಲ್ಲಿ ನಡೆದ ವಿವಿಧ ಇಲಾಖಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈಗ ಮಾಡಲಾಗುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಗೊಂದಲಮಯವಾಗಿದ್ದು, ರಸ್ತೆಗಳಲ್ಲಿ ಅಗೆದಿರುವ ಗುಂಡಿಗಳನ್ನು ಮುಚ್ಚದೇ ಇದ್ದು, ಇದರಿಂದ ಸಾರ್ವಜನಿಕರಿಗೆ ಸಮಸ್ಯೆಗಳು ಎದುರಾಗುತ್ತಿವೆ. ಯಾವುದೇ ಕಾಮಗಾರಿ ಮಾಡಬೇಕಾದರೆ ಅಲ್ಲಿನ ಸಮಸ್ಯೆಗಳನ್ನು ಅರಿತುಕೊಂಡು ಯೋಜನೆ ರೂಪಿಸಬೇಕು. ಜನಪ್ರತಿನಿಧಿಗಳ ಸಲಹೆ ಸೂಚನೆಗಳನ್ನು ಪಡೆಯಬೇಕು. ಅದೇನು ಪಡೆಯದೆ ಏಕಾಏಕಿ ಹಳ್ಳ ತೆಗೆದು ಸಮಸ್ಯೆಯನ್ನು ಸೃಷ್ಠಿ ಮಾಡುವುದು ಸರಿಯಲ್ಲ ಎಂದರು.
ಪ್ರಸ್ತುತ ಮಾಡಲಾಗುತ್ತಿರುವ ರಸ್ತೆ ಕಾಮಗಾರಿಗಳಲ್ಲಿ ಮೊದಲು ಬಿಎಚ್ ರಸ್ತೆ ಹಾಗೂ ಅಶೋಕ ರಸ್ತೆಗಳನ್ನು ಸರಿಪಡಿಸಬೇಕು. ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಿ ಆ ರಸ್ತೆಗಳನ್ನು ಮಾದರಿಯನ್ನಾಗಿಟ್ಟುಕೊಂಡು ಉಳಿದ ರಸ್ತೆಗಳನ್ನು ಪೂರ್ಣಗೊಳಿಸಬೇಕು. ವಿವೇಕಾನಂದ ರಸ್ತೆಯಲ್ಲಿ ಹೆಚ್ಚಿನ ಸಮಸ್ಯೆಗಳು ಕಂಡು ಬರುತ್ತಿದ್ದು, ಬಡಾವಣೆಗಳಲ್ಲಿ ಅಭಿವೃದ್ಧಿ ಮಾಡುವಾಗ ಗಮನಹರಿಸಬೇಕು ಎಂದರು.
ಸುಮಾರು 300 ಕೋಟಿ ರೂಗಳ ವೆಚ್ಚದಲ್ಲಿ ರಿಂಗ್ ರಸ್ತೆ ಸೇರಿ ನಗರದ ಪ್ರಮುಖ ರಸ್ತೆಗಳು ಹಾಗೂ ವಿವಿಧ ಬಡಾವಣೆಗಳಲ್ಲಿ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿತ್ತು. ಈ ಪ್ರಕಾರ ಒಂದೊಂದೆ ರಸ್ತೆಯನ್ನು ಅಭಿವೃದ್ಧಿ ಪಡಿಸಿದ್ದರೆ ಜನರಿಗೆ ಯಾವುದೇ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಒಂದೇ ಬಾರಿ ನಗರದ ಎಲ್ಲಾ ಪ್ರಮುಖ ರಸ್ತೆಗಳು ಸೇರಿದಂತೆ ಬಡಾವಣೆಗಳಲ್ಲಿನ ಸಣ್ಣಪುಟ್ಟ ರಸ್ತೆಗಳನ್ನು ಅಗೆದಿರುವುದು ಅವೈಜ್ಞಾನಿಕವಾಗಿದೆ ಎಂದರು.
ಸ್ಮಾರ್ಟ್ ಸಿಟಿ ಕಾಮಗಾರಿಗಳಲ್ಲಿ ಸುಖಾಸುಮ್ಮನೆ ಹಣ ಪೋಲು ಮಾಡುವುದು ಸರಿಯಲ್ಲ. ಸ್ಮಾರ್ಟ್ ಸಿಟಿಯ ಕಾಮಗಾರಿಗಳಿಗೆ ಹಣ ವ್ಯರ್ಥವಾಗದಂತೆ ಎಚ್ಚರಿಕೆ ವಹಿಸಿ ಉತ್ತಮ ಗುಣಮಟ್ಟದ ರೀತಿಯಲ್ಲಿ ಕಾಮಗಾರಿಗಳನ್ನು ನಡೆಸಬೇಕು. ಈಗಾಗಲೇ ಮಾಡಲಾಗುತ್ತಿರುವ ಕಾಮಗಾರಿಗಳನ್ನು ನಿರ್ದಿಷ್ಠ ಸಮಯದಲ್ಲಿ ಪೂರ್ಣಗೊಳಿಸಬೇಕು. ಜನಸಾಮಾನ್ಯರಿಗೆ ಸಮಸ್ಯೆಗಳಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಪ್ರಸ್ತುತ ನಗರದಲ್ಲಿ ಮಾಡಲಾಗುತ್ತಿರುವ ಚೇಂಬರ್ ಕಾಮಗಾರಿಗಳನ್ನು ನಿಲ್ಲಿಸುವಂತೆ ಈ ಹಿಂದೆಯೇ ಸೂಚನೆ ನೀಡಲಾಗಿತ್ತು. ಇದೀಗ ಮತ್ತೊಮ್ಮೆ ಹೇಳುತ್ತಿದ್ದು, ಚೇಂಬರ್‍ಗಳಲ್ಲಿ ಅಳವಡಿಸಬೇಕಾದ ಕೇಬಲ್‍ಗಳನ್ನು ಜೋಡಿಸಿ ನಂತರ ಅವುಗಳನ್ನು ಮುಚ್ಚಬೇಕು. ಮತ್ತೆ ಎಲ್ಲಿಯೂ ರಸ್ತೆಯನ್ನು ಅಗೆಯುವ ಪ್ರಮೇಯ ಬರಬಾರದು ಎಂದು ತಿಳಿಸಿದರು.
ಬೆಸ್ಕಾಂ ಇಲಾಖಾ ಅಧಿಕಾರಿಗಳೊಂದಿಗೆ ಮಾತನಾಡಿದ ಶಾಸಕರು ಬೆಸ್ಕಾಂನಲ್ಲಿ ಅನುದಾನ ಇಲ್ಲದ ಕಾರಣ ಈಗ ಎಷ್ಟರ ಮಟ್ಟಿಗೆ ಸಾಧ್ಯತೆ ಇದೆಯೋ ಅಷ್ಟನ್ನು ಚೇಂಬರ್‍ಗಳ ಮೂಲಕ ವಿದ್ಯುತ್ ಕೇಬಲ್‍ಗಳನ್ನು ಅಳವಡಿಕೆ ಮಾಡಲಿ. ಆದರೆ ಮುಂದೆ ವಿದ್ಯುತ್ ಕೇಬಲ್‍ಗಳನ್ನು ಹಾಕುವಾಗ ರಸ್ತೆಗಳನ್ನು ಅಗೆಯಬಾರದು ಎಂದರು.
ಸ್ಮಾರ್ಟ್ ಸಿಟಿಯಿಂದ ನಗರದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸುವ ಬಗ್ಗೆ ಮಾತನಾಡಿದ ಶಾಸಕರು, ನಗರದಾದ್ಯಂತ ಆಯಾ ವಾರ್ಡುಗಳಲ್ಲಿ ಪಾಲಿಕೆ ಸದಸ್ಯರೊಂದಿಗೆ ಚರ್ಚೆ ಮಾಡಿ ವಾರ್ಡುವಾರು ಎಷ್ಟು ದೀಪಗಳು ಬೇಕಾಗುತ್ತದೆ ಎಂಬುದನ್ನು ಪಟ್ಟಿ ತಯಾರಿಸಿ ಅವರ ಬೇಡಿಕೆಯಂತೆ ವಿದ್ಯುತ್ ಸೌಲಭ್ಯ ದೊರಕಿಸಿಕೊಡಬೇಕು.
ಇದಕ್ಕೆ ಬೆಸ್ಕಾಂ ಇಲಾಖೆಯವರು ಸಹಕರಿಸಬೇಕು. ಸ್ಮಾರ್ಟ್ ಸಿಟಿಯಿಂದ ಕೆಎಸ್‍ಆರ್‍ಟಿಸಿ ಹಾಗೂ ಮಹಾತ್ಮಗಾಂಧಿ ಕ್ರೀಡಾಂಗಣಕ್ಕೆ ಅನುದಾನ ನೀಡಿದಂತೆ ಪಾಲಿಕೆಗೆ ಅನುದಾನ ನೀಡಿದಲ್ಲಿ ವಿದ್ಯುತ್ ದೀಪಗಳ ಸೌಲಭ್ಯವನ್ನು ಪಾಲಿಕೆ ವತಿಯಿಂದ ಒದಗಿಸಲಾಗುವುದು. ನಂತರ ಅದರ ನಿರ್ವಹಣೆಯನ್ನು ಅವರೇ ನೋಡಿಕೊಳ್ಳುತ್ತಾರೆ. ಈ ಬಗ್ಗೆ ಒಮ್ಮೆ ಪರಿಶೀಲಿಸಿ, ಅದರ ಅಂದಾಜು ಖರ್ಚು ವೆಚ್ಚಗಳ ಬಗ್ಗೆ ಚರ್ಚಿಸಿ ತೀರ್ಮಾನವನ್ನು ತಿಳಿಸಿ ಎಂದರು.
ನಗರದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸುವಾಗ ಒಂದೇ ರೀತಿಯ ಬಲ್ಬ್‍ಗಳನ್ನು ಅಳವಡಿಸಬೇಕು. ಅದು ಒಂದೇ ಕಂಪನಿಯ ಉತ್ತಮ ಗುಣಮಟ್ಟದ ಬಲ್ಬ್‍ಗಳನ್ನು ಅಳವಡಿಸಬೇಕು. ಇವುಗಳನ್ನು ಅಳವಡಿಸುವ ಮುನ್ನ ಅದರ ಗುಣಮಟ್ಟತೆ ಎಲ್ಲದನ್ನೂ ಪರಿಶೀಲಿಸಿ ಶಾಸಕರಿಗೆ ಮಾಹಿತಿ ನೀಡಬೇಕು ಎಂದು ಪಾಲಿಕೆಯ ಪ್ರಭಾರ ಆಯಕ್ತ ಸಿ.ಎಲ್.ಶಿವಕುಮಾರ್ ತಿಳಿಸಿದರು.
ಇದರ ನಡುವೆ ಪಾಲಿಕೆ ಸದಸ್ಯ ನಯಾಜ್ ಅಹಮ್ಮದ್ ಮಾತನಾಡಿ, ಮಂಡಿಪೇಟೆ ಹಿಂಭಾಗದಲ್ಲಿ ಇದ್ದಂತಹ ಚರಂಡಿ ಪಕ್ಕದಲ್ಲಿಯೇ ಇದೀಗ ಪೈಪ್‍ಲೈನ್ ಅಳವಡಿಕೆ ಮಾಡಿ ಚರಂಡಿ ನೀರು ಪೈಪ್ ಮೂಲಕ ಹರಿಸಲು ಕಾಮಗಾರಿ ಮಾಡುತ್ತಿದ್ದಾರೆ. ಈ ಹಿಂದೆ ಒಳಚರಂಡಿ ಮಂಡಳಿಯಿಂದ ಕೋಟ್ಯಂತರ ಹಣ ಖುರ್ಚು ಮಾಡಿ ಮಾಡದ ಚರಂಡಿಗಳನ್ನು ಮುಚ್ಚಿದರೆ ಅದು ವ್ಯರ್ಥವಾಗುತ್ತದೆ ಎಂದಾಗ ಅದಕ್ಕೆ ಶಾಸಕರು ಮಾತನಾಡಿ, ಚರಂಡಿ ಇಲ್ಲದ ಕಡೆಯಲ್ಲಿ ಜಾಗದ ಸಮಸ್ಯೆ ಇದ್ದಾಗ ಅಲ್ಲಿ ಚರಂಡಿ ನಿರ್ಮಾಣದ ಬದಲಾಗಿ ಚರಂಡಿ ನೀರು ಹರಿಯಲು ಪೈಪ್‍ಲೈನ್ ಮಾಡಬೇಕು ಎಂದರು.
ಸ್ಮಾರ್ಟ್ ಸಿಟಿಯೊಂದಿಗೆ ವಿವಿಧ ಇಲಾಖೆಗಳ ನಡುವೆ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿದ್ದು, ಇದರಿಂದ ಕಾಮಗಾರಿಗಳು ನಡೆಯುವಲ್ಲಿ ವಿಳಂಭವಾಗುತ್ತಿದೆ. ಈ ನಿಟ್ಟಿನಲ್ಲಿ ಸೋಮವಾರದಂದು ಸ್ಮಾರ್ಟ್ ಸಿಟಿ ಅಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದ್ದು, ಈ ಸಭೆಯಲ್ಲಿ ಕೂಲಂಕಷವಾಗಿ ಚರ್ಚೆ ಮಾಡುತ್ತೇವೆ. ಚರ್ಚೆ ನಡೆಸಿ ಯಾವ ಕಾಮಗಾರಿಗಳನ್ನು ಯಾವ ರೀತಿಯಲ್ಲಿ ಮಾಡಿದರೆ ಅನುಕೂಲವಾಗುತ್ತದೆ ಎಂಬುದನ್ನು ಸ್ಮಾರ್ಟ್ ಸಿಟಿಯವರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದರು.
ಸಭೆಯಲ್ಲಿ ಮೇಯರ್ ಲಲಿತಾರವೀಶ್, ಉಪ ಮೇಯರ್ ರೂಪಶ್ರೀ ಶೆಟ್ಟಾಳಯ್ಯ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರಾದ ಗಿರಿಜಾ ಧನಿಯಾಕುಮಾರ್, ನರಸಿಂಹರಾಜು, ಎಂ.ರಮೇಶ್, ನಯಾಜ್ ಅಹಮ್ಮದ್, ಸ್ಮಾರ್ಟ್ ಸಿಟಿಯ ಯೋಜನಾ ಮುಖ್ಯಸ್ಥ ಪವನ್‍ಕುಮಾರ್ ಸೈನಿ, ಕಾರ್ಯಪಾಲಕ ಅಭಿಯಂತರಾದ ಬಸವರಾಜುಗೌಡ, ಪಾಲಿಕೆ ಎಂಜಿನಿಯರ್ ಆಶಾ ಸೇರಿದಂತೆ ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿಯ ಎಂಜಿನಿಯರ್‍ಗಳು, ಬೆಸ್ಕಾಂ ಎಂಜಿನಿಯರ್‍ಗಳು ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ