ಹಾನಗಲ್ಲ :
ತಾಲೂಕಿನಾದ್ಯಂತ 190 ಶಾಲಾ ಕೊಠಡಿಗಳನ್ನು ದುರಸ್ಥಿ ಹೆಸರಿನಲ್ಲಿ ಕೆಡವಿ ಹಾಕಿದ್ದು, ಕೊಠಡಿಗಳ ಮರು ನಿರ್ಮಾಣಕ್ಕೆ ರಾಜ್ಯ ಸರಕಾರ ಅನುದಾನ ಬಿಡುಗಡೆಗೊಳಿಸುತ್ತಿಲ್ಲ. ಹೀಗಾಗಿ ಶೈಕ್ಷಣಿಕ ಅಭಿವೃದ್ಧಿಗೆ 43 ಕೋಟಿ ರೂ ವೆಚ್ಚದಲ್ಲಿ ಶೈಕ್ಷಣಿಕ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದರು.
ತಾಲೂಕಿನ ಕೊಂಡಲ್ಲಿ ಗ್ರಾಮದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ 17 ಸಾವಿರ ಮನೆಗಳ ಬರಬೇಕಾಗಿದ್ದು, ಮೊದಲ ಕಂತಿನಲ್ಲಿ 426 ಮನೆಗಳು ಮಂಜೂರಾಗಿವೆ. ಹಿರಿತನದ ಆಧಾರದ ಮೇಲೆ ಪ್ರಾಮಾಣಿಕವಾಗಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಜನಸಂಖ್ಯೆ ಹೆಚ್ಚಾದಂತೆ ಬೇಡಿಕೆಗಳು ಹೆಚ್ಚಾಗುತ್ತಿವೆ. ರಸ್ತೆ, ಶಾಲೆ, ವಿದ್ಯುತ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯಾದಲ್ಲಿ ಗ್ರಾಮೀಣಾಭಿವೃದ್ಧಿ ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಪಟ್ಟಣಗಳ ಮಾದರಿಯಲ್ಲಿ ಹಳ್ಳಿಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.
ಮಳೆ ಯಾರ ಕೈಯಲ್ಲೂ ಇಲ್ಲ ಪ್ರಕೃತಿ ಮುನಿಸಿಕೊಂಡರೆ ಯಾರು ಏನು ಮಾಡೋಕಾಗಲ್ಲ. ಮುಂದಿನ ದಿನಗಳಲ್ಲಿ ಕೆರೆ ಕಟ್ಟೆಗಳನ್ನು ತುಂಬಿಸುವುದೆ ಮೊದಲ ಆದ್ಯತೆಯಾಗಿದೆ. ಸಮುದ್ರಕ್ಕೆ ಹರಿದು ಹೋಗುವ ನೀರನ್ನು ತಡೆದು ಗ್ರಾಮೀಣ ಭಾಗದ ಕೆರೆಗಳನ್ನು ತುಂಬಿಸುವ ಕಾರ್ಯ ಮಾಡಲಾಗುವುದು. ರೈತರು ಮಳೆ ನೀರನ್ನು ಇಂಗಿಸುವ ಕಾರ್ಯ ಮಾಡಬೇಕು. ಇದರಿಂದ ಅಂತರ್ಜಲ ಹೆಚ್ಚಾಗಿ ಕೊಳವೆ ಭಾವಿಗಳಲ್ಲಿ ನೀರು ಹೆಚ್ಚಾಗುತ್ತದೆ.
ಹಿಂದೆ ಭತ್ತ ಬಿಟ್ಟು ಬೇರೆ ಬೆಳೆ ಬೆಳೆಯಲು ರೈತರು ಹಿಂದೇಟು ಹಾಕುತ್ತಿದ್ದರು. ಆದರೆ ಇಂದು ಎಲ್ಲ ಬೆಳೆ ಬೆಳೆಯಲು ರೈ ಮುಂದಾಗುತ್ತಿದ್ದಾನೆ. ಕೇವಲ 10 ಇಂಚು ಮಳೆಯಾಗುವ ದೇಶಗಳು ಕೃಷಿಯಲ್ಲಿ ಅಭಿವರದ್ಧಿ ಸಾಧಿಸಿವೆ. ರೈತರು ಆ ದೇಶದ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದ ಸಿ.ಎಂ.ಉದಾಸಿ, ಶೈಕ್ಷಣಿಕವಾಗಿ ತಾಲೂಕಿನಲ್ಲಿ ಎಲ್ಲ ಕಾಲೇಜುಗಳನ್ನು ತೆರೆಯಲಾಗಿದೆ ಉನ್ನತ ವ್ಯಾಸಂಗಕ್ಕಾಗಿ ಬೇರೆ ಕಡೆಗಳಲ್ಲಿ ಅಲೆಯಬೇಕಾಗಿಲ್ಲ ಎಂದರು.
ಪದ್ಮಾವತಿ ಬುಡ್ಡನವರ, ನೀಲವ್ವ ಅರಿಷಿಣಗುಪ್ಪಿ, ರಾಜಣ್ಣ ಗೌಳಿ, ಉದಯ ವಿರುಪಣ್ಣನವರ, ಚಿದಾನಂದಪ್ಪ ಪೂಜಾರ, ಮಲ್ಲೇಶಪ್ಪ ಬುಡ್ಡನವರ, ಛತ್ರಪತಿ ಚಿಕ್ಕಣ್ಣನವರ, ಮಂಜು ಅರಿಷಿಣಗುಪ್ಪಿ ಮೊದಲಾದವರು ಈ ಸಂದರ್ಭದಲ್ಲಿದ್ದರು.