ಬೆಂಗಳೂರು
ಹಿಂದುತ್ವದ ಹೆಸರಿನಲ್ಲಿ ದೇಶವನ್ನು ಒಡೆದಾಳುವ ನೀತಿಯನ್ನು ಮೋದಿ ಅಮಿತ್ ಶಾ ಅನುಸರಿಸುತ್ತಿದ್ದು ಮುಂದಿನ ದಿನಗಳಲ್ಲಿ ಎದುರಾಗುವ 2024 ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಸ್ಲಿಂ ಸಮುದಾಯವರನ್ನು ಬಂಧಿಸುವ ಉದ್ದೇಶದಿಂದ ಕಾಯ್ದೆ ಜಾರಿಗೆ ತರಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ಗುಡುಗಿದರು.
ನಗರದ ಪುರಭವನ ಮುಂಭಾಗ ಗುರುವಾರ ಪ್ರಜಾಧಿಕಾರ ಹೋರಾಟ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ರಾಜಕೀಯ, ಸಾಮಾಜಿಕ, ನಾಗರೀಕ ಹಾಗೂ ಆರ್ಥಿಕ ಹಕ್ಕುಗಳ ರಕ್ಷಣೆಗಾಗಿ ಪ್ರತಿಭಟನೆಯನ್ನು ದ್ದೇಶಿಸಿ ಅವರು ಮಾತನಾಡಿ ಭಾರತೀಯರಾಗಿ ನಾವು ಸಮನ್ವಯತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಆದರೆ ಮೋದಿ,ಅಮಿತ್ ಶಾ ದೇಶದ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ದೇಶ ಬದಲಾವಣೆ ಆಗಲು ಹಿಂದೂ ಮುಸ್ಲಿಮರು ಕ್ರಿಶ್ಚಿಯನ್ನರು ಪಾರ್ಸಿಗಳು ಒಂದಾಗಬೇಕಾದ ಅವಶ್ಯಕತೆ ಇದೆ ಪೌರತ್ವ ಕಾಯಿದೆ ವಿರೋಧಿಸಲು ನಮಗೂ ಹಕ್ಕಿದೆ. ಚುನಾವಣೆಯ ದೃಷ್ಟಿಯಿಂದ ಮುಸ್ಲಿಮರಿಗೆ ತೊಂದರೆ ಮಾಡುವ ಕನಸನ್ನು ಪ್ರತಿಯೊಬ್ಬರೂ ಮುರಿಯಬೇಕು ಎಂದರು.
ಬಿಜೆಪಿ ಕೆಲ ಮುಖಂಡರು ಮುಸ್ಲಿಂ ಸಮುದಾಯವನ್ನು ದೇಶದಿಂದ ಒಡಿಸಬೇಕು ಎನ್ನುವ ಮಾತುಗಳನ್ನು ಆಡುತ್ತಿದ್ದಾರೆ. ನಮ್ಮ ಹಕ್ಕುಗಳನ್ನು ಕೇಳಲು ನಾವು ಹೆದರಬೇಕಾದ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.ಚಿಂತಕ ಅಲಿಬಾಬಾ ಮಾತನಾಡಿ, ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಆಶಯದಲ್ಲಿ ಸಂವಿಧಾನ ರಚನೆಯಾಗಿದೆ. ಬಹುತ್ವದ ಭಾರತ, ವಿವಿಧತೆಯಲ್ಲಿ ಏಕತೆಯನ್ನು ಸಾರಿದ ಮಹಾತ್ಮ ಗಾಂಧೀಜಿಯವರನ್ನು ಕೊಂದವರು ಅಧಿಕಾರಕ್ಕೆ ಬಂದಿದ್ದಾರೆ. ಮಾನವತ್ವದ ಆಧಾರದಲ್ಲಿದ್ದ ಪೌರತ್ವವನ್ನು ಜಾತಿ, ಧರ್ಮದ ಆಧಾರದಲ್ಲಿ ನೀಡಲು ಬಂದಿದ್ದಾರೆ ಎಂದು ಟೀಕಿಸಿದರು.
ಅನುಮತಿ ನೀಡಿಲ್ಲ?
ಪುರಭವನ ಮುಂಭಾಗ ಪ್ರತಿಭಟನೆ ನಡೆಸಲು ಅನುಮತಿ ಪಡೆದಿಲ್ಲ ಎಂದು ಆರಂಭದಲ್ಲಿ ಪೊಲೀಸರು ತಡೆ ನೀಡಲಾಯಿತು.ಈ ವೇಳೆ,ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಗಾಂಧಿವಾದಿ ಎಚ್ ಎಸ್ ದೊರೆಸ್ವಾಮಿ ಅವರಿಗೆ ಪ್ರತಿಭಟಿಸುವ ಹಕ್ಕಿಲ್ಲವೇ. ಶಾಂತ ರೀತಿಯಲ್ಲಿ ಅಹಿಂಸಾತ್ಮಕ ಮಾರ್ಗದಲ್ಲಿ ದೊರೆಸ್ವಾಮಿ ಅವರು ಪ್ರತಿಭಟಿಸಬಾರದೇ? ಸ್ವಾತಂತ್ರ ತಂದುಕೊಟ್ಟವರಿಗೇ ಹೋರಾಡುವ ಸ್ವಾತಂತ್ರ್ಯವಿಲ್ಲವೆ, ಪ್ರತಿಭಟನೆಯನ್ನು ಬಿಜೆಪಿ ಸರ್ಕಾರವು ಹತ್ತಿಕ್ಕಲು ಪ್ರಯತ್ನಿಸುತ್ತಿರುವುದೇಕೆ ಎಂದು ಹಲವು ಚಿಂತಕರು ಕಿಡಿಕಾರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ