ತುಮಕೂರು
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡರು ಸೋಮವಾರ ಮಧ್ಯಾಹ್ನ 2.10 ರಿಂದ 2.30ರ ಸಮಯದೊಳಗೆ ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
ಈ ವಿಷಯ ಖಚಿತಪಡಿಸಿರುವ ಸಚಿವ ಎಸ್.ಆರ್.ಶ್ರೀನಿವಾಸ್ ಸೋಮವಾರ ಬೆಳಗ್ಗೆ 11.30 ಗಂಟೆಗೆ ಬಿ.ಜಿ.ಎಸ್.ವೃತ್ತ ದಲ್ಲಿ ನಡೆಯುವ ಕಾರ್ಯಕರ್ತರ ಸಭೆ ಮೆರವಣಿಗೆ ಸಮಯಕ್ಕೆ ದೇವೆಗೌಡರು ಆಗಮಿಸಿ ಮಾತನಾಡಲಿದ್ದು, ಆ ನಂತರ ಮಧ್ಯಾಹ್ನ 2.10ರ ಸಮಯಕ್ಕೆ ಜಿಲ್ಲಾಧಿ ಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸುವರು ಎಂದು ತಿಳಿಸಿದರು. ದೇವೆಗೌಡರು ಇಂದು ಬೆಳಗ್ಗೆ 11 ಗಂಟೆಗೆ ಶ್ರೀ ಸಿದ್ಧಗಂಗಾ ಕ್ಷೇತ್ರಕ್ಕೆ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದು ನಂತರ ಆದಿಚುಂಚನ ಗಿರಿ ಕ್ಷೇತ್ರಕ್ಕೆ ಭೇಟಿ ನೀಡುವರು.
ಮೈತ್ರಿ ಪಕ್ಷದಲ್ಲಿ ಆದ ತೀರ್ಮಾನದಂತೆ ತುಮಕೂರು ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟು ಕೊಡಲಾಗಿದೆ. ನಾವ್ಯಾರೂ ಕೇಳಿ ರಲಿಲ್ಲ. ಈ ಹಿಂದೆ ಆದ ತೀರ್ಮಾನದ ಪ್ರಕಾರವೇ ಜೆಡಿಎಸ್ ವತಿಯಿಂದ ಇಲ್ಲಿ ಸ್ಪರ್ಧೆ ನಡೆಯುತ್ತಿದೆ. ದೇವೆಗೌಡರೇ ಇಲ್ಲಿ ಅಭ್ಯರ್ಥಿಯಾಗಲಿದ್ದಾರೆ ಎಂದರು. ದಶಕಗಳ ಕಾಲ ಹಾಸನ ಜೊತೆ ರಾಜಕೀಯ ವಾಗಿ ಅವಿನಾಭಾವ ಸಂಬಂಧ ಇರಿಸಿಕೊಂಡಿದ್ದ ದೇವೆಗೌಡರು ಈ ಬಾರಿ ಮೊಮ್ಮಗನಿಗಾಗಿ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ನಂತರ ದೇವೆಗೌಡರು ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಬೆಂಗಳೂರು ಉತ್ತರವೇ ಅಥವಾ ತುಮಕೂರು ಕ್ಷೇತ್ರವೇ ಎಂಬ ಗೊಂದಲ ಇಷ್ಟು ದಿನ ಇದ್ದಿತ್ತು. ಅದೀಗ ಕೊನೆಗೊಳ್ಳುವ ಹಂತಕ್ಕೆ ಬಂದು ನಿಂತಿದೆ.
ದೇವೆಗೌಡರು ತುಮಕೂರಿನಿಂದ ಸ್ಪರ್ಧಿಸುತ್ತಿದ್ದು ಖಚಿತವಾಗಿ ಘೋಷಿಸಲಿ ದ್ದಾರೆ ಎಂದಿದ್ದರು. ಅದು ಈಗ ನಿಜವಾಗಿದೆ. ಬೆಂಗಳೂರು ಉತ್ತರ ಭಾಗದ ಜೆಡಿಎಸ್ ನಾಯಕರು ಕಾರ್ಯಕರ್ತರು ದೇವೆಗೌಡರು ಬೆಂಗಳೂರು ಉತ್ತರದಿಂದ ಸ್ಪರ್ಧಿಸುವಂತೆ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಅದಕ್ಕೂ ಸಹ ಈಗ ತೆರೆ ಬಿದ್ದಿದೆ.
ಕೋಮುವಾದಿಗಳಿಂದ ದೇಶ ರಕ್ಷಿಸಬೇಕು:
ರಾಜ್ಯದ ಜನತೆ ನರೇಂದ್ರ ಮೋದಿಯವರು ಈ ದೇಶಕ್ಕೆ ಮತ್ತು ಕರ್ನಾಟಕ ರಾಜ್ಯಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ತಿಳಿದು ಕೊಳ್ಳಬೇಕು. ಜಾತಿ ಮತ್ತು ಧರ್ಮ ಆಧಾರಿತ ರಾಜಕಾರಣದಲ್ಲಿ ತೊಡಗುವ ರಾಜಕೀಯ ನಾಯಕರಿಗೆ ಪ್ರೋತ್ಸಾಹ ನೀಡಬಾರದು ಎಂದು ಸಿಎಂ ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.
ಕೋಮುವಾದಿ ಶಕ್ತಿಗಳಿಂದ ದೇಶವನ್ನು ಬಚಾವು ಮಾಡಬೇಕು ಎಂದು ಸಿಎಂ ಹೇಳಿದ್ದಾರೆ. ಪ್ರಧಾನ ಮಂತ್ರಿಯವರ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸರ್ಕಾರ ಬೆಂಬಲ ನೀಡಿಲ್ಲ ಎಂಬ ಹಣಕಾಸು ಸಚಿವ ಅರುಣ್ ಜೇಟ್ಲಿಯವರ ಟೀಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ರೈತರ ಹಿತಾಸಕ್ತಿ ಕಾಪಾಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದರು.