ತುಮಕೂರು
ತುಮಕೂರು ನಗರ ಸೇರಿದಂತೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಕಳೆದ ಒಂದು ವಾರದಿಂದ ಘಟಿಸುತ್ತಿರುವ ಅಪರಾಧ ಪ್ರಕರಣಗಳು ಹಾಗೂ ಆನ್‍ಲೈನ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಮೋಸದಾಟ ಪ್ರಕರಣಗಳು ನಾಗರಿಕರ ನಿದ್ರೆಗೆಡಿಸಿವೆ.
ತುಮಕೂರು ನಗರದಲ್ಲಿ ಒಂದು ವಾರದ ಅವಧಿಯಲ್ಲಿ ಹಾಡ ಹಗಲಲ್ಲೇ ಅದೂ ಸಹ ಎರಡು ಪ್ರಮುಖ ಸ್ಥಳಗಳಲ್ಲೇ, ಎರಡು ಪ್ರಮುಖ ಅಪರಾಧ ಪ್ರಕರಣಗಳು ನಡೆದಿರುವುದು ಸಹಜವಾಗಿಯೇ ತುಮಕೂರು ನಗರದ ಜನರನ್ನು ತಲ್ಲಣಗೊಳಿಸಿದೆ.
ಜಿಲ್ಲಾಡಳಿತದ ಕೇಂದ್ರವಾದ ಮಿನಿ ವಿಧಾನಸೌಧದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲೇ ಒಂದು ವಂಚನೆ ಪ್ರಕರಣ ನಡೆದಿದ್ದರೆ, ನಗರದ ಅತ್ಯಂತ ಜನನಿಬಿಡ ಹಾಗೂ ಪ್ರಮುಖ ರಸ್ತೆಯೆನಿಸಿದ ಮಹಾತ್ಮಗಾಂಧಿ ರಸ್ತೆಯಲ್ಲೇ ಹಣದ ಬ್ಯಾಗ್ ದೋಚಿ ಪರಾರಿಯಾಗಿರುವ ಘಟನೆ ಜರುಗಿದ್ದು, ಇದು ಜನರನ್ನು ಆತಂಕಕ್ಕೆ ದೂಡಿದೆ.
ಡಿ.ಸಿ. ಹೆಸರಿನಲ್ಲಿ ವಂಚನೆ
ಮೊದಲನೇ ಪ್ರಕರಣ ನವೆಂಬರ್ 28 ರಂದು ತುಮಕೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಅದೂ ಜಿಲ್ಲಾಧಿಕಾರಿಗಳ ಹೆಸರನ್ನು ಬಳಸಿಕೊಂಡೇ ನಡೆದಿತ್ತು ! ತುರುವೇಕೆರೆ ನಿವಾಸಿ ಕೆ.ಎಸ್.ನಿಂಗಣ್ಣ ಎಂಬುವವರು ತುರುವೇಕೆರೆಯಲ್ಲಿರುವ ತಮಗೆ ಸೇರಿದ ನಿವೇಶನವೊಂದರ ಹಳೆಯ ವಿವಾದದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ವಿಚಾರಣೆಗೆಂದು ಬಂದಿದ್ದಾಗ ಯಾರೋ ಆಗಂತುಕ ಜಿಲ್ಲಾಧಿಕಾರಿ ಹಾಗೂ ಅವರ ಆಪ್ತ ಸಹಾಯಕನ ಹೆಸರಿನಲ್ಲಿ 1 ಲಕ್ಷ 15 ಸಾವಿರ ರೂಗಳನ್ನು `ಶುಲ್ಕ ಪಾವತಿ’ಗೆಂದು ಪಡೆದು ಸಲೀಸಾಗಿ ವಂಚಿಸಿ ಪರಾರಿಯಾಗಿದ್ದ ! ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾಧಿಕಾರಿ ಕೊಠಡಿ ಹಾಗೂ ಅವರ ಆಪ್ತ ಸಹಾಯಕರ ಕೊಠಡಿ ಬಳಿ ಹಾಡಹಗಲೇ ಈ ವಂಚನೆ ಪ್ರಕರಣ ನಿರಾತಂಕವಾಗಿ ನಡೆದಿದ್ದುದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿತ್ತು.
ಎಂ.ಜಿ.ರಸ್ತೆಯಲ್ಲಿ ಹಣ ಕಸಿದು ಪರಾರಿ
ಈ ಪ್ರಕರಣ ಇನ್ನೂ ಹಸಿರಾಗಿರುವಾಲೇ, ಇತ್ತ ತುಮಕೂರು ನಗರದ ಅತ್ಯಂತ ಜನನಿಬಿಡ ರಸ್ತೆಯಾದ ಮಹಾತ್ಮಗಾಂಧಿ ರಸ್ತೆಯಲ್ಲಿ ಬೈಕ್‍ನಲ್ಲಿ ಬಂದ ಆಗಂತುಕರು ಬ್ಯಾಂಕ್ ಗ್ರಾಹಕರೊಬ್ಬರಿಂದ 3 ಲಕ್ಷ ರೂ. ನಗದು ಇದ್ದ ಕ್ಯಾಷ್‍ಬ್ಯಾಗ್ ಕಸಿದುಕೊಂಡು ಬೈಕ್‍ನಲ್ಲಿ ಪರಾರಿಯಾಗಿರುವ ಘಟನೆ ಸಂಭವಿಸಿದ್ದು, ಸಾರ್ವಜನಿಕರಲ್ಲಿ ಗಾಬರಿ ಉಂಟುಮಾಡಿದೆ.
ಮಹಾತ್ಮಗಾಂಧಿ ರಸ್ತೆಯಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಬಳಿ ಡಿ. 4 ರಂದು ಮಧ್ಯಾಹ್ನ 2-45 ರಲ್ಲಿ ಜನದಟ್ಟಣಿಯ ನಡುವೆಯೇ ಈ ಘಟನೆ ಜರುಗಿದೆಯೆಂಬುದು ಜನರ ಆತಂಕಕ್ಕೆ ಕಾರಣವಾಗಿದೆ. ಬಿದರೆ ಗ್ರಾಮದ ಬಿ.ವಿ. ಉಮಾಶಂಕರ್ ಎಂಬುವವರು ಕೊಳವೆ ಬಾವಿ ಕೊರೆಸುವ ಸಲುವಾಗಿ 3 ಲಕ್ಷ ರೂ.ಗಳನ್ನು ಬ್ಯಾಂಕ್‍ನಿಂದ ಬಿಡಿಸಿಕೊಂಡು, ಬ್ಯಾಂಕ್‍ನಿಂದ ಹೊರಬಂದು ಸ್ನೇಹಿತನೊಂದಿಗೆ ಬೈಕ್ ಹತ್ತುವಾಗ ಹಿಂದಿನಿಂದ ಬಂದ ಬೈಕ್ ಸವಾರರು ಇವರ ಕೈನಲ್ಲಿದ್ದ ಕ್ಯಾಷ್‍ಬ್ಯಾಗ್ ಕಸಿದುಕೊಂಡು, ಮಹಾತ್ಮಗಾಂಧಿ ರಸ್ತೆ ಕಡೆಗೆ ಬೈಕ್‍ನಲ್ಲಿ ವೇಗವಾಗಿ ಹೊರಟುಹೋಗಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ರಕ್ಷಣೆಯ ಕಾರಣದಿಂದ ಪೊಲೀಸ್ ಇಲಾಖೆಯು ತುಮಕೂರು ನಗರಾದ್ಯಂತ ರಾತ್ರಿ 10 ಗಂಟೆಗೆಲ್ಲ ಅಂಗಡಿ ಮುಂಗಟ್ಟುಗಳನ್ನು ಕಡ್ಡಾಯವಾಗಿ ಬಂದ್ ಮಾಡಿಸುತ್ತಿರುವ ಬೆನ್ನಲ್ಲೇ, ಇತ್ತ ಇಂಥ ಎರಡು ಅಪರಾಧ ಪ್ರಕರಣಗಳು ಹಾಡಹಗಲಲ್ಲೇ ನಗರದ ಹøದಯ ಭಾಗದಲ್ಲಿ ನಡೆದಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಡಿ.ಸಿ. ಕಚೇರಿಗೆ ಪೊಲೀಸ್ ಭದ್ರತೆ ಬೇಕಲ್ಲವೇ?
“ನಗರದ ಮಿನಿ ವಿಧಾನಸೌಧವು ಜಿಲ್ಲಾಡಳಿತದ ಕೇಂದ್ರವಾಗಿದೆ. ಜಿಲ್ಲಾಧಿಕಾರಿ ಕಚೇರಿ ಸೇರಿ ಅನೇಕ ಜಿಲ್ಲಾ ಮಟ್ಟದ ಇಲಾಖಾಧಿಕಾರಿಗಳ ಕಚೇರಿಗಳು ಇಲ್ಲಿವೆ. ಮುಂಭಾಗ ಮತ್ತು ಹಿಂಭಾಗ ಪ್ರವೇಶದ್ವಾರವಿದೆ. ಪ್ರತಿನಿತ್ಯ ಸಾವಿರಾರು ನಾಗರಿಕರು ವಿವಿಧ ಕೆಲಸ ಕಾರ್ಯಗಳಿಗಾಗಿ ಇಲ್ಲಿಗೆ ಬಂದು ಹೋಗುತ್ತಾರೆ. ಆಡಳಿತಕ್ಕೆ ಸಂಬಂಧಿಸಿದ ಅಸಂಖ್ಯಾತ ದಾಖಲಾತಿಗಳು ಇಲ್ಲಿರುತ್ತವೆ. ಇಂತಹ ಪ್ರಾಮುಖ್ಯತೆ ಇರುವ ಮಿನಿವಿಧಾನ ಸೌಧಕ್ಕೆ ಪ್ರತಿನಿತ್ಯ ಲೀಸ್ ಭದ್ರತೆ ಒದಗಿಸಬೇಕಲ್ಲವೇ?” ಎಂಬ ಪ್ರಶ್ನೆಯೊಂದು ಈ ವಂಚನೆ ಪ್ರಕರಣ ನಡೆದ ಬಳಿಕ ಚರ್ಚೆಗೊಳ್ಳುತ್ತಿದೆ.
“ಪೊಲೀಸರು ಇಲ್ಲಿದ್ದರೆ ಆಕಸ್ಮಿಕವಾಗಿ ಏನಾದರೂ ಘಟನೆ ನಡೆದಾಗ ಸಾರ್ವಜನಿಕರಾಗಲಿ, ಅಧಿಕಾರಿಗಳಾಗಲಿ ತಕ್ಷಣವೇ ಇಲ್ಲಿನ ಪೊಲೀಸರನ್ನು ಸಂಪರ್ಕಿಸಬಹುದು. ಪೆÇಲೀಸರ ಹಾಜರಾತಿಯಿಂದಲೇ ಅನೇಕ ಅಪರಾಧದ ಘಟನೆಗಳನ್ನು ತಡೆಗಟ್ಟಬಹುದಾಗಿದೆ. ಆದ್ದರಿಂದ ಇಲ್ಲಿ ಪೆÇಲೀಸ್ ಹಾಜರಿ ಇರಬೇಕು” ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಹಗಲಿನಲ್ಲಿ ಪೊಲೀಸ್ ಗಸ್ತು ನಡೆದಿದೆಯೇ?
ನಗರದ ಮಹಾತ್ಮಗಾಂಧಿ ರಸ್ತೆಯಲ್ಲಿ ನಡೆದ ಫಟನೆಯ ಬಳಿಕ -“ಹಗಲು ಹೊತ್ತಿನಲ್ಲಿ ನಗರದ ವಿವಿಧ ರಸ್ತೆಗಳಲ್ಲಿ, ಪ್ರಮುಖ ವತ್ತಗಳಲ್ಲಿ ಟ್ರಾಫಿಕ್ ಪೊಲೀಸ್ ಸೇರಿದಂತೆ ಇತರ ಪೊಲೀಸರ ಗಸ್ತು ಎಷ್ಟು ಪರಿಣಾಮಕಾರಿಯಾಗಿ ಇದೆ?” ಎಂಬುದೂ ಈಗ ಜನರು ಕೇಳುತ್ತಿರುವ ಪ್ರಶ್ನೆಯಾಗಿದೆ.
“ಮೊದಲೆಲ್ಲ ಪೊಲೀಸ್ ಅಧಿಕಾರಿಗಳು, ಪೊಲೀಸರು ಹಗಲು ಹೊತ್ತಿನಲ್ಲೂ ವಿವಿಧ ಬಡಾವಣೆಗಳಲ್ಲಿ, ರಸ್ತೆಗಳಲ್ಲಿ ವಾಹನಗಳಲ್ಲಿ ಸಂಚರಿಸುತ್ತಿದ್ದರು. ಅಲ್ಲದೆ ನಗರದ ಅನೇಕ ಪ್ರಮುಖ ರಸ್ತೆಗಳಲ್ಲಿ (ಉದಾಹರಣೆಗೆ ಶೆಟ್ಟಿಹಳ್ಳಿ ರಿಂಗ್ ರಸ್ತೆ) ನಿಗದಿತ ಸ್ಥಳಗಳಲ್ಲಿ ಪೊಲೀಸರು ಹಾಜರಿದ್ದು, ವಾಹನ ಸಂಚಾರಿಗಳತ್ತ ಗಮನ ಹರಿಸುತ್ತಿದ್ದರು. ವಿಶೇಷವಾಗಿ ಸಂಜೆ ವೇಳೆ ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸರು ನಗರದ ಎಲ್ಲೆಡೆ ಸಂಚರಿಸುತ್ತಿದ್ದುದನ್ನು ಕಾಣಬಹುದಿತ್ತು. ಆದರೆ ಇತ್ತೀಚೆಗೆ ತುಮಕೂರಿನಲ್ಲಿ ಅಂತಹ ವಾತಾವರಣ ಹಗಲು ಹೊತ್ತಿನಲ್ಲಿ ಕಂಡುಬರುತ್ತಿಲ್ಲ” ಎಂಬ ಆಕ್ಷೇಪ ಸಣ್ಣಗೆ ಕೇಳಿಬರಲಾರಂಭಿಸಿದೆ.
“ನಗರದಲ್ಲಿ ಪೊಲೀಸರು ಸೈಕಲ್‍ನಲ್ಲಿ ಸಂಚರಿಸುವ ತಂಡವೊಂದನ್ನು ರಚಿಸಲಾಗಿದೆಯೆಂದು ಈ ಹಿಂದೆ ಪೊಲೀಸ್ ಇಲಾಖೆಯು ಪ್ರಕಟಿಸಿತ್ತು. ಆದರೆ ಇಂತಹ ತಂಡ ಕಾರ್ಯನಿರ್ವಹಿಸುತ್ತಿರುವುದು ನಗರದಲ್ಲೆಲ್ಲೂ ಕಾಣುತ್ತಲೇ ಇಲ್ಲ” ಎಂದೂ ದೂರಲಾಗುತ್ತಿದೆ.
ಡಿ.11 ರಂದು ಮತ್ತೆರಡು ಪ್ರಕರಣಗಳು ವರದಿಯಾಗಿವೆ. ಗುಬ್ಬಿ ತಾಲ್ಲೂಕು ಕಡಬ ಬಸ್ ನಿಲ್ದಾಣದ ಪಕ್ಕದಲ್ಲೇ ಇರುವ ಜ್ಯೂಯಲರಿ ಅಂಗಡಿಯ ಗೋಡೆ ಕೊರೆದು ಒಳನುಗ್ಗಿರುವ ಕಳ್ಳರು, ಚಿನ್ನ ಹಾಗೂ ಬೆಳ್ಳಿಯ ಒಡವೆಗಳನ್ನು ಕದ್ದಿದ್ದಾರೆ. ತುಮಕೂರು ನಗರದಲ್ಲಿ ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ಬ್ಯಾಂಕ್‍ವೊಂದರ ಎಟಿಎಂ ದರೋಡೆಗೆ ವಿಫಲ ಯತ್ನ ನಡೆದಿದೆ. ಡಿ.9 ರಂದು ಮಧ್ಯರಾತ್ರಿ ಈ ದರೋಡೆ ಯತ್ನ ನಡೆದಿದ್ದು, ರಾಷ್ಟ್ರೀಯ ಹೆದ್ದಾರಿ ಬದಿಯೇ ಇರುವ ಈ ಸ್ಥಳದಲ್ಲಿ ಕೃತ್ಯ ನಡೆದಿರುವುದು ಆ ಭಾಗದ ನಾಗರಿಕರನ್ನು ಆತಂಕವನ್ನುಂಟು ಮಾಡಿದೆ.
ಇನ್ನು ಮಾಜಿ ಶಾಸಕರೊಬ್ಬರ ಖಾತೆಯಿಂದ ಆನ್‍ಲೈನ್ ವ್ಯವಹಾರದಲ್ಲಿ 25 ಸಾವಿರ ರೂ.ಗಳನ್ನು ದೋಚಿರುವುದು ಗಾಬರಿ ತರಿಸಿದೆ.
ಒಂದು ಕಡೆ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದರೆ, ಮತ್ತೊಂದು ಕಡೆ ತಮ್ಮ ಖಾತೆಯಲ್ಲಿರುವ ಹಣವನ್ನು ಆನ್‍ಲೈನ್ ಪೇಮೆಂಟ್ ಮೂಲಕ ದೋಚುತ್ತಿರುವುದು ನಾಗರಿಕರಿಗೆ ಜೀರ್ಣಿಸಿಕೊಳ್ಳಲಾಗದ ಸಂಗತಿಗಳಾಗಿವೆ.