ಜಾನಪದ ವಿಶ್ವವಿದ್ಯಾಲಯ ಅಭಿವೃದ್ಧಿಗೆ ಹೆಚ್ಚು ಅನುದಾನ ಬಿಡುಗಡೆ : ಬಸವರಾಜ ಬೊಮ್ಮಾಯಿ

ಹಾವೇರಿ

   ಜಾನಪದ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಬರುವ ಆಯವ್ಯದಲ್ಲಿ ಹೆಚ್ಚಿನ ಅನುದಾನ ಘೋಷಿಸಲಾಗುವುದು ಎಂದು ಗೃಹ ಮತ್ತು ಸಹಕಾರಿ ಸಚಿವರಾದ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

    ಶಿಗ್ಗಾಂವ ತಾಲೂಕಿನ ಗೊಟಗೋಡಿಯ ಮಲ್ಲಿಗೆ ದಂಡೆ ಸಭಾಭವನದಲ್ಲಿ ಸೋಮವಾರ ನಡೆದ ಕರ್ನಾಟಕ ಜಾನಪದ ವಿಶವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಜಾನಪದ ವಿಶ್ವವಿದ್ಯಾಲಯದ ಮ್ಯೂಸಿಯಂ ಅಭಿವೃದ್ಧಿಗೆ ಒಂದು ಕೋಟಿ ಹಾಗೂ ಕಲಾಭವನಕ್ಕೆ ಒಂದು ಕೋಟಿ ರೂ. ಅನುದಾನ ಸೇರಿದಂತೆ ವಿವಿಗೆ ಅಗತ್ಯವಿರುವ ಇತರೆ ಸೌಲಭ್ಯಗಳು ಹಾಗೂ ವಿವಿಧ ವಸತಿ ನಿಲಯಗಳ ಮಂಜೂರಾತಿಗೆ ಅಗತ್ಯ ಅನುದಾನ ಒದಗಿಸುವ ಭರವಸೆ ನೀಡಿದರು.

     ನಮ್ಮ ನಾಡಿನಲ್ಲಿ ದೊಡ್ಡಾಟ, ಸಣ್ಣಾಟ, ಜಗ್ಗಲಗಿ, ಡೊಳ್ಳು ಕುಣಿತ ಮುಂತಾದಂತಹ ಶ್ರೀಮಂತ ಜನಪದ ಕಲೆಗಳಿವೆ. ಜನಪದ ಕಲೆಗೆ ಭಾಷೆಯಿಲ್ಲ, ಅದು ಭಾಷಾರಹಿತ ಸಾಹಿತ್ಯವಾಗಿದೆ. ಜನಪದವು ನಮ್ಮ ಬದುಕನ್ನು ರೂಪಿಸಿದೆ, ಮನಸ್ಸು ಮತ್ತು ಮಾತಿಗೂ ನೇರವಾದ ಸಂಬಂಧವನ್ನು ಕಲಿಸಿಕೊಟ್ಟಿದೆ. ಮಾನವಕುಲ ಎಲ್ಲಿವರೆಗೂ ಭೂಮಿಯಲ್ಲಿ ಇರುತ್ತೋ ಅಲ್ಲಿವರೆಗೂ ಜನಪದ ಅಸ್ತತ್ವದಲ್ಲಿರುತ್ತದೆ ಎಂದು ಹೇಳಿದರು.

     ಜನಪದ ವಿವಿಯು ಅಭಿವೃದ್ಧಿ ಹೊಂದುವವರೆಗೂ ಬೇರೆ ಯಾವ ಕಡೆಯೂ ಹೊಸಸೆಂಟರ್‍ಗಳನ್ನು ತೆರೆಯಬಾರದು ಎಂದು ವಿವಿಯ ಸಿಂಡಿಕೇಟ್ ಸದಸ್ಯರಿಗೆ ಎಚ್ಚರಿಸಿದರು.ಜನಪದ ವಿವಿಯಲ್ಲಿ ಸ್ಥಳೀಯರಿಗೆ ಕಲಾ ಪ್ರದರ್ಶನ ಮಾಡಲು ಅವಕಾಶ ಸಿಗಬೇಕು. ಈ ನಿಟ್ಟಿನಲ್ಲಿ ನಾವು ವಿಶ್ವವಿದ್ಯಾಲಯಕ್ಕೆ ಕಂಪೌಂಡ್ ಹಾಗೂ ಗೇಟ್‍ಗಳ ವ್ಯವಸ್ಥೆ ಮಾಡಬಾರದೆಂದು ಹೇಳಿದ್ದೇವು. ಜನಪದ ಕಲೆ ಜನರಿಂದ ಬಂದಿದ್ದು, ಇಲ್ಲಿ ಮುಕ್ತವಾಗಿ ಎಲ್ಲರೂ ಬಂದು ಕಲೆಗಳನ್ನು ಪ್ರದರ್ಶಿಸಬಹುದು. ಸ್ಥಳೀಯ ಕಲಾವಿದರಿಗೆ ಚಟುವಟಿಕೆ ಮಾಡಲು ಶೀಘ್ರದಲ್ಲಿಯೇ ಕಲಾಕೇಂದ್ರವನ್ನು ತೆರೆಯಬೇಕು. ವಿಸಿ ನೇತೃತ್ವದಲ್ಲಿ ಈ ಕೆಲಸ ಆರಂಭವಾಗಬೇಕು ಎಂದು ಅವರು ಹೇಳಿದರು.

      ಶಿಕ್ಷಣ ಇಲಾಖೆಯಿಂದ ಸಭೆ: ಜನಪದ ವಿವಿಯಲ್ಲಿ ಕಲಿತ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಆರ್ಥಿಕವಾಗಿ ಹಾಗೂ ಸಾಂಸ್ಕøತಿಕವಾಗಿಯಾದರೂ ಕಲಿತಿರುವುದನ್ನು ಬಳಸಿಕೊಳ್ಳಬೇಕು. ಶಿಕ್ಷಣ ಇಲಾಖೆಯು ಗುರುತಿಸುವಂತಹ ಕೋರ್ಸುಗಳು ವಿವಿಯಲ್ಲಿ ಆರಂಭವಾಗಬೇಕು. ಉಪನ್ಯಾಸಕರಾಗಿ ಕೆಲಸ ಮಾಡುವ ಅವಕಾಶಗಳಿದ್ದರೆ ಮುಂದಿನ ಪೀಳಿಗೆ ಜನಪದ ವಿವಿಗೆ ಕಲಿಯಲು ಮುಂದೆ ಬರುತ್ತಾರೆ. ಇದು ಅವರನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಪೆಬ್ರುವರಿಯಲ್ಲಿ ಜಾನಪದ ವಿವಿ ಹಾಗೂ ಶಿಕ್ಷಣ ಇಲಾಖೆ ಸಭೆಗಳನ್ನು ಕರೆಯಲಾಗುವುದು. ಸಭೆಯಲ್ಲಿ ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದಂತೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

      ಉದ್ಘಾಟನೆ ನೆರವೇರಿಸಿದ ಶಿವಮೊಗ್ಗ ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಪಿ.ವೀರಭದ್ರಪ್ಪ ಅವರು ಮಾತನಾಡಿ, ಕರ್ನಾಟಕದಲ್ಲಿ ಜನಪದ ಗಣಿಯಿದೆ. ಅವುಗಳನ್ನು ಸಂಸ್ಕರಿಸಿ ನಾಡಿನಾದ್ಯಂತ ನೀಡುವ ಕೆಲಸವನ್ನು ಜನಪದ ವಿವಿಗಳು ಮಾಡುತ್ತೀವೆ. ಡೊಳ್ಳುಕುಣಿತ, ವೀರಗಾಸೆ, ಕಂಸಾಳೆ, ಗೊಲ್ಲರು, ಹೀಗೆ ವಿವಿಧ ಬಗೆಯ ಜನಪದ ಕಲಾವೈಭವಗಳಿವೆ. ಇಂತಹ ಕಲೆಗಳನ್ನು ರಾಜ್ಯಾದ್ಯಂತ ಹಾಗೂ ಭಾರತದಾದ್ಯಂತ ಪರಿಚಯಿಸುವ ಕೆಲಸ ಜಾನಪದ ವಿವಿಯಿಂದ ಆಗಬೇಕು ಎಂದು ಹೇಳಿದರು.ವಿವಿಗಳು ಹೊರತಂದ 18 ಗ್ರಂಥಗಳನ್ನು ವಿವಿಯ ಸಿಂಡಿಕೇಟ್ ಸದಸ್ಯರಾದ ಕೆ.ವಸಂತಕುಮಾರ ಅವರು ಲೋಕಾರ್ಪಣೆಗೊಳಿಸಿದರು.

ಗ್ರಂಥಗಳ ವಿವರ:

       ವಿಶ್ವವಿದ್ಯಾಲಯದ ವಿಸ್ತರಣೆ ಹಾಗೂ ಸಲಹಾ ಕೇಂದ್ರದಿಂದ ಪ್ರಕಟಣೆಗೊಂಡು ಲಂಬಾಣಿ ಜನಪದ ಸಾಹಿತ್ಯ -ಪ್ರೊ. ಡಿ.ಬಿ. ನಾಯಕ, ದೊಡ್ಡಾಟಗಳು –ಸಂ: ಎಂ.ಎಸ್.ಮಾಳವಾಡ, ಕೃಷಿ ಜ್ಞಾನ ಪ್ರದೀಪಿಕೆ -ಸಂ: ಸಂಗಮೇಶ ಸವದತ್ತಿಮಠ, ಶಿವಮೊಗ್ಗ ಜಿಲ್ಲೆಯ ಮುಳುಗಡೆ ಸಮುದಾಯದ ಸ್ಥಿತಿಗತಿಗಳು –ಡಾ. ಆಂಜನಪ್ಪ ಬಿ.ಹೆಚ್, ಬಾರವ್ವ ಸೋಬಾನೆ ಪದಹೇಳು -ಸಂ: ಜಿ. ನಾಗರಾಜ, ಬಸಪ್ಪ ಮಾಯಣ್ಣವರ ಹಾಡಿರುವ ಡೊಳ್ಳಿನ ಹಾಡುಗಳು -ಸಂ:ಡಾ. ಹನಮಪ್ಪ ಎಸ್. ಘಂಟಿ, ಚೆಂಚು ಬುಡಕಟ್ಟು ಸಂಸ್ಕøತಿ –ಡಾ. ಮಲ್ಲಿಕಾರ್ಜುನ ಬಿ. ಮಾನ್ಪಡೆ, ನಮ್ಮೂರು ಮರಸು ಹೊಸಹಳ್ಳಿ –ಡಾ. ಹೊಸಹಳ್ಳಿ ರಾಜೇಗೌಡ, ನಮ್ಮೂರು ಅಕ್ಕೂರು ಹೊಸಹಳ್ಳಿ -ಹೊಸಹಳ್ಳಿ ದಾಳೇಗೌಡ, ತುಳುನಾಡಿನ ಕಂಬುಲ -ಡಾ. ಇಂದಿರಾ ಹೆಗ್ಗಡೆ, ಶಿಗ್ಗಾವಿ ತಾಲೂಕಿನ ದರಗಾಗಳು –ಡಿ. ಅಬ್ದುಲ್ ನಿಶಾರ್, ಜನಪದ ಔಷಧಿ -ಡಾ|| ಶಿವಾಜಿ ಚವ್ಹಾಣ, ಕರ್ನಾಟಕ ಜನಪದ ಚಿತ್ರಕಲೆ –ಡಾ. ಎಸ್.ಸಿ. ಪಾಟೀಲ, ಹಾವೇರಿ ಜಿಲ್ಲೆಯ ಜನಪದ ಕ್ರೀಡೆಗಳು –ಡಾ. ಎಚ್.ಎಚ್. ನದಾಫ್ ಹಾಗೂ ಪ್ರೊ.ಡಿ.ಬಿ. ನಾಯಕ & ಡಾ.ಹರಿಲಾಲ ಪವಾರ ಅವರ ಸಂಪಾದಕತ್ವದ ಲಂಬಾಣಿ ಒಗಟುಗಳು, ಲಂಬಾಣಿ ಗಾದೆಗಳು, ಭೀಮಾಸತಿ ಕಥನ ಕಾವ್ಯ, ಹೂನಾಸತಿ ಕಥನ ಕಾವ್ಯ ಎಂಬೆಲ್ಲಾ ಕೃತಿಗಳನ್ನು ಈ ಸಮಯದಲ್ಲಿ ವಿವಿಯ ಸಿಂಡಿಕೇಟ್ ಸದಸ್ಯರಾದ ಶ್ರೀ ಕೆ.ವಸಂತಕುಮಾರ್ ಅವರು ಬಿಡುಗಡೆಗೊಳಿಸಿದರು.

      ಬಾಗಲಕೋಟೆಯ ಕರ್ನಾಟಕ ಬಯಲಾಟ ಅಕಾಡೆಮಿಯ ಮಾನ್ಯ ಅಧ್ಯಕ್ಷರಾದ ಡಾ.ಟಿ.ಬಿ.ಸೊಲಬಕ್ಕನವರ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link