ತಾಯಂದಿರು ಮಕ್ಕಳಿಗೆ ಬಾಲ್ಯದಲ್ಲಿಯೇ ರಾಷ್ಟ್ರ ಪ್ರೇಮ ತುಂಬಿ

ತುರುವೇಕೆರೆ

     ತಾಯಂದಿರು ರಾಷ್ಟ್ರ ಪ್ರೇಮವನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ತುಂಬಬೇಕು ಎಂದು ಪ್ರೊ. ಬಸವರಾಜು ಕಿವಿಮಾತು ಹೇಳಿದರು.
ತಾಲ್ಲೂಕಿನ ದುಂಡ ಗ್ರಾಮ ದೇವತೆ ಶ್ರೀ ಕೆಂಪಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ “ನಮ್ಮ ಸೇನೆ-ನಮ್ಮ ಹೆಮ್ಮೆ” ವೀರ ಮರಣ ಹೊಂದಿದ ಸೈನಿಕರ ಕುಟುಂಬ ಮತ್ತು ದುಂಡ ಗ್ರಾಮದ ಹಾಲಿ ಹಾಗು ಮಾಜಿ ಸೈನಿಕರಿಗೆ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇಶ ರಕ್ಷಣೆಯ ಯೋಧರನ್ನು ಗುರ್ತಿಸಿ ಅವರನ್ನು ಅಭಿನಂದಿಸುವ ಕಾರ್ಯ ನಿಜವಾಗಿಯೂ ಪುಣ್ಯದ ಕೆಲಸವೇ ಸರಿ.

    ಜೈ ಜವಾನ್ ಜೈ ಕಿಸಾನ್ ಅಂದರೆ ಗಡಿ ಕಾಯುವ ಸೈನಿಕ ಹಾಗು ಅನ್ನ ಕೊಡೋ ರೈತ ಇವರಿಬ್ಬರು ದೇಶದ ಎರಡು ಕಣ್ಣುಗಳು. ಚಳಿ, ಗಾಳಿ, ಮಳೆ, ಬಿಸಿಲನ್ನು ಸಹ ಲೆಕ್ಕಿಸದೆ ತಮ್ಮ ಜೀವನವನ್ನೇ ಮುಡಿಪಾಗಿಡುವ ಇವರನ್ನು ವರ್ಣಿಸಲು ಪದಗಳೇ ಸಾಲದು. ಇವರಿಗೆ ಸ್ಪೂರ್ತಿ ನೀಡುವಂತಹ ಕೆಲಸವಾಗಬೇಕಿದೆ. ಆ ನಿಟ್ಟಿನಲ್ಲಿ ಗ್ರಾಮದ ಯುವಕರು ಇಂತಹ ಒಂದು ಮಹತ್ತರವಾದ ಕಾರ್ಯಕ್ಕೆ ಮುಂದಾಗಿರುವುದು ಸ್ಪೂರ್ತಿದಾಯಕವಾಗಿದೆ. ಅಲ್ಲದೆ ತಾಲ್ಲೂಕಿನಲ್ಲಿಯೇ ಹೆಚ್ಚು ಯೋಧರನ್ನು ಹೊಂದಿದ ಗ್ರಾಮ ಇದಾಗಿದೆ ಎಂದರು.
ಯೋಧ ಸ್ವಗ್ರಾಮದ ಡಿ.ಸಿ.ನವೀನ್ ಮಾತನಾಡಿ, ಯೋಧರು ನಿರ್ವಹಿಸುವ ಕರ್ತವ್ಯ ಹಾಗು ಜವಾಬ್ದಾರಿ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

    ಇದೇ ಸಂದರ್ಭದಲ್ಲಿ ಕರ್ತವ್ಯದ ವೇಳೆ ವೀರಮರಣ ಹೊಂದಿದ ತಾಲ್ಲೂಕಿನ ಕುಣಿಕೇನಹಳ್ಳಿ ಚಂದ್ರಶೇಖರ್, ಕರಡಿಗೆರೆ ವೆಂಕಟೇಶ್, ಗೊಟ್ಟಿಕೆರೆ ಬಸವಣ್ಣನವರ ಕುಟುಂಬ ಹಾಗೂ ದುಂಡ ಗ್ರಾಮದ ಮಾಜಿ ಯೋಧರಾದ ದುಂಡ ರೇಣುಕಯ್ಯ, ಡಿ.ಟಿ.ಪಾಶ್ರ್ವನಾಥ್, ದೊರೈರಾಜ್ ಹಾಗೂ ಹಾಲಿ ಯೋಧ ಡಿ.ಸಿ.ನವೀನ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

      ಕಾರ್ಯಕ್ರಮಕ್ಕೂ ಮೊದಲು ಯೋಧರು ಹಾಗೂ ಯೋಧರ ಕುಟುಂಬದವರನ್ನು ಕೆಂಪಮ್ಮ ದೇವರ ದೇವಾಲಯದಿಂದ ನೂರಾರು ಯುವಕರು ಭಾರತ್ ಮಾತಾಕಿ ಜೈ ಘೊಷಣೆಯೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತಂದದ್ದು ವಿಶೇಷವಾಗಿತ್ತು. ಮಲ್ಲಿಕಾರ್ಜುನ್ ಪ್ರಾಸ್ತಾವಿಕ ನುಡಿಗಳನ್ನಾಡಿದರೆ, ಮೋಹನ್ ಕುಮಾರ್ ಸ್ವಾಗತಿಸಿ, ಸುರೇಶ್ ವಂದಿಸಿದರು. ಗ್ರಾಮದ ಮುಖಂಡರು ಹಾಗೂ ಯುವಕರು ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಂಗವಾಗಿ ನ್ಯೂಸ್ಟೈಲ್ ಆರ್ಕೆಸ್ಟ್ರಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap