ಬ್ಯಾಡಗಿ:
ಕಡ್ಡಾಯವಾಗಿ ಪ್ರತಿಯೊಬ್ಬರೂ ಮತದಾನ ಮಾಡುವಂತೆ ಹಾಗೂ ಯಾವುದೇ ಆಸೆ ಆಮಿಸಗಳಿಗೆ ಬಲಿಯಾಗದಂತೆ ತಮ್ಮ ಮತವನ್ನು ಮಾರಿಕೊಳ್ಳದೇ ಉತ್ತಮ ವ್ಯಕ್ತಿಗಳಿಗೆ ಮತ ನೀಡುವಂತೆ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಪೂಜಾರ ಹೇಳಿದರು.
ಅವರು ಬುಧವಾರ ಇಲ್ಲಿನ ವರ್ತಕರ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಸಭಾಭವನದಲ್ಲಿ ಮತದಾನ ಜಾಗೃತಿ ಅಭಿಯಾನ ಮತ್ತು ಮತದಾರರಿಗೆ ವಿದ್ಯುನ್ಮಾನ ಯಂತ್ರದ ಬಗ್ಗೆ ವಿವರಿಸಿ ಮಾತನಾಡಿದರು. ತಾಲೂಕಿನಲ್ಲಿ ಪ್ರತಿಶತ ಮತದಾನವಾಗಲು ಜಾಗೃತಿ ಅಭಿಯಾನ ಆರಂಭಿಸಲಾಗಿದೆ. ಆದ್ದರಿಂದ ನಿಮ್ಮದು ಕೇವಲ ಒಂದು ಮತವಲ್ಲ. ಅದು ಪ್ರಜಾಪ್ರಭುತ್ವದ ಮೌಲ್ಯವಾಗಿರುತ್ತದೆ. 18 ವರ್ಷ ವಯಸ್ಸಿನ ಪ್ರತಿಯೊಬ್ಬರೂ ಮತದಾರರಾಗಬೇಕು.
ಪ್ರತಿ ಮತದಾರನು ಮತ ಹಾಕುವ ಮೂಲಕ ಪ್ರಜಾಪ್ರಭುತ್ವದಲ್ಲಿ ತಮ್ಮ ಹಕ್ಕನ್ನು ಚಲಾಯಿಸಬೇಕು. ಲೋಕಸಾಭಾ ಚುನಾವಣೆಯ ಈ ಸಂದರ್ಭದಲ್ಲಿ ಪ್ರತಿಯೊಬ್ಬ ಶಿಕ್ಷಕರು ಹಾಗೂ ನೌಕರರು ಸೇರಿದಂತೆ ಎಲ್ಲರೂ ಮತದಾರರ ಮನೆ ಮನೆಗೆ ತೆರಳಿ ಮತದಾನದ ಅರಿವಿನ ಬಗ್ಗೆ ಮತದಾರರನ್ನು ಜಾಗೃತಗೊಳಿಸುವ ಮೂಲಕ ಹೆಚ್ಚಿನ ಮತದಾನವಾಗುಂತೆ ಸಹಕರಿಸುವಂತೆ ತಿಳಿಸಿದರು.
ತಾಲೂಕಾ ಅಕ್ಷರದಾಸೋಹಾಧಿಕಾರಿ ಮಾತನಾಡಿ ಕಡ್ಡಾಯ ಮತದಾನ ನಮ್ಮೆಲ್ಲರ ಜವಾಬ್ದಾರಿ ಮತ್ತು ಹಕ್ಕಾಗಿದೆ. ಜಾಗೃತ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸುವ ಕೆಲಸವಾಗಬೇಕಿದೆ. ಚುನಾವಣೆಯಲ್ಲಿ ಒಂದೊಂದು ಮತವು ನಿರ್ಣಾಯಕವಾಗಲಿದೆ. ತಾವು ಮತ ಚಲಾಯಿಸುವ ಜೊತೆಗೆ ಇತರರೂ ಮತದಾನವನ್ನು ಮಾಡುವಂತೆ ಜನತೆಯನ್ನು ಪ್ರೇರೆಪಿಸುವ ಕಾರ್ಯವನ್ನು ಮಾಡಬೇಕಾಗಿದೆ. ದೇಶದ ಭವಿಷ್ಯತ್ತು ಮತದಾರನ ಕೈಯಲ್ಲಿದೆ ಎಂದರು. ಇದೇ ಸಂದರ್ಭದಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡುವಂತೆ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಭೋಧಿಸಲಾಯಿತು. ಈ ಸಂದರ್ಭದಲ್ಲಿ ವರ್ತಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯರು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
