ಕೆಸರು ಮಿಶ್ರಿತ ನೀರು ಸರಬರಾಜು : ಆರೋಪ

ಗುಬ್ಬಿ

    ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಹೇರೂರು ಕೆರೆಯ ನೀರು ಶುದ್ದೀಕರಣವಾಗದೆ ನೇರ ಸಾರ್ವಜನಿಕರಿಗೆ ತಲುಪುತ್ತಿದೆ. ಈ ಅಶುದ್ದ ನೀರು ಬಳಸಿದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ ಎಂದು ಆರೋಪಿಸಿ ಪಟ್ಟಣದ ಕೆಲ ಪ್ರಜ್ಞಾವಂತ ನಾಗರಿಕರು ಸಾಮಾಜಿಕ ಜಾಲತಾಣದಲ್ಲಿ ಇಡೀ ದಿನ ಚಾಟಿಂಗ್ ಮೂಲಕ ಕೊರೋನಾ ಸಂಕಷ್ಟದಲ್ಲಿ ವಿನೂತನ ರೀತಿ ಪ್ರತಿಭಟಿಸಿದ ಘಟನೆ ಕಂಡು ಬಂತು.

     ಪಟ್ಟಣದ ಹಲವು ಬಡಾವಣೆಗಳಿಗೆ ಸರಬರಾಜು ಆದ ಹೇಮಾವತಿ ನೀರು ಕೆಂಪು ಮಣ್ಣಿನಿಂದ ಕೂಡಿದ್ದುದನ್ನು ಕೆಲವರು ಕಂಡು ಫೋಟೋ ತೆಗೆದು ವಾಟ್ಸ್‍ಪ್ ಮೂಲಕ ಚರ್ಚೆ ಆರಂಭಿಸಿದ್ದರು. ಈ ಸುದ್ದಿಗೆ ಸಾಥ್ ನೀಡಿದ ಬಹಳ ಮಂದಿ ಸಾಮಾಜಿಕ ಜಾಲತಾಣದಲ್ಲೆ ತಮ್ಮೆಲ್ಲಾ ಆಕ್ರೋಶ ಹೊರಹಾಕಿದರು. ಜಲ ಶುದ್ದೀಕರಣ ಘಟಕ ಬಹಳ ತಿಂಗಳಿಂದ ಕೆಲಸ ಮಾಡುತ್ತಿಲ್ಲ. ನೀರು ಶುದ್ದಗೊಳಿಸದೆ ಕೆರೆಯ ನೀರು ನೇರವಾಗಿ ಸಾರ್ವಜನಿಕರ ಸಂಪು ಸೇರುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ತಲೆ ಕೆÀಡೆಸಿಕೊಂಡಿಲ್ಲ ಎಂಬ ಕಿಡಿನುಡಿ ವ್ಯಕ್ತವಾಯಿತು.

    ಪಟ್ಟಣದಲ್ಲಿ ವಾಸವಿಲ್ಲದ ಅಧಿಕಾರಿಗಳು ಮೊದಲು ಈ ನೀರು ಕುಡಿಯಬೇಕು. ಹಾಗಾಗಿ ಪಟ್ಟಣದಲ್ಲಿನ ಎಲ್ಲಾ ಸರ್ಕಾರಿ ಕಚೇರಿಗೆ ಪಟ್ಟಣ ಪಂಚಾಯಿತಿ ಒದಗಿಸುವ ನೀರು ಕುಡಿಯಲು ವ್ಯವಸ್ಥೆ ಮಾಡುವುದು ಮತ್ತು ಇದೇ ನೀರು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕುಡಿಸಲು ಒಂದು ಆಂದೋಲನ ಮಾಡಲು ಸಾಮಾಜಿಕ ಕಾರ್ಯಕರ್ತ ನಾಗಸಂದ್ರ ವಿಜಯ್‍ಕುಮಾರ್ ಕರೆ ನೀಡಿದರು.

     ಹೇರೂರು ಕೆರೆ ನೀರು ನೇರವಾಗಿ ಮನೆಯ ಸಂಪಿಗೆ ಬಂದಿದ್ದು, ಆರ್‍ಓ ಅಳವಡಿಸಿಕೊಂಡವರು ನೀರು ಶುದ್ದೀಕರಿಸಿ ಕುಡಿಯಲು ಮುಂದಾದರೆ, ಹಲವು ಬಡ ಕುಟುಂಬಗಳು ಈ ಹೇಮೆ ನೀರನ್ನೇ ಕುಡಿಯಲು ಮತ್ತು ಅಡುಗೆಗೆ ಬಳಸುತ್ತಾರೆ. ಈಗಾಗಲೇ ಕೊರೋನಾದಿಂದ ಕಂಗೆಟ್ಟ ಜನ ಅಶುದ್ದ ನೀರು ಕುಡಿದು ಇನ್ಯಾವ ಕಾಯಿಲೆಗೆ ತುತ್ತಾಗಬೇಕೊ ತಿಳಿಯುತ್ತಿಲ್ಲ. ಆರ್‍ಓ ಬಳಸುವವರಿಗೆ ಫಿಲ್ಟರ್ ಬದಲಿಸುವ ಸ್ಥಿತಿ ಜೇಬಿಗೆ ಬಿದ್ದ ಕತ್ತರಿಯಾಗಿದೆ. ಮೂರು ತಿಂಗಳು ಬರುವ ಫಿಲ್ಟರ್ ಒಂದೇ ತಿಂಗಳಲ್ಲಿ ಬದಲಿಸುವ ಅನಿವಾರ್ಯವನ್ನು ಈ ಕೆರೆ ನೀರು ಮಾಡಿದೆ. ಈ ಬಗ್ಗೆ ಕೇಳಿದರೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೆರೆಯಲ್ಲಿ ಮೀನು ಹಿಡಿಯುವ ಕಾರಣಕ್ಕೆ ಹೀಗೆ ಆಗಿದೆ ಎಂಬ ಹಾಸ್ಯಾಸ್ಪದ ಹೇಳಿಕೆ ನೀಡುತ್ತಾರೆ ಎಂದು ಬಿಜೆಪಿ ಮುಖಂಡ ಭೈರಪ್ಪ ದೂರಿದರು.

     ಪಟ್ಟಣದ ಬಹುತೇಕ ಬಡಾವಣೆಗಳಲ್ಲಿ ಶುಧ್ದೀಕರಣಗೊಳ್ಳದ ಕೆರೆಯ ನೀರು ನೇರವಾಗಿ ಮನೆಗಳ ಸಂಪುಗಳಿಗೆ ಸಂಗ್ರಹವಾಗಿದ್ದು, ಸಂಪಿನ ತಳಭಾಗದಲ್ಲಿ ಚರಂಡಿ ಕೊಚ್ಚೆಯ ವಾಸನೆ ಬರುತ್ತಿದೆ. ಸಂಪನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಬೇಕಾದ ಅನಿರ್ವಾತೆ ಎದುರಾಗಿದೆ. ಅಲ್ಲದೆ ಸಂಪಿನ ತಳದಲ್ಲಿ ಶೇಖರಣೆಯಾಗಿರುವ ಕೊಳಚೆಯನ್ನು ತುಮಕೂರಿನಿಂದ ಯಂತ್ರ ತರಿಸಿ ಸ್ವಚ್ಛಗೊಳಿಸಲಾಗುತ್ತಿದೆ. ಈ ಬಗ್ಗೆ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಆರೋಗ್ಯ ಇಲಾಖೆ ನಿವೃತ್ತ ನೌಕರ ಬಸವರಾಜು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap