ದಾವಣಗೆರೆ:
22 ಕೆರೆಗಳ ಏತ ನೀರಾವರಿ ಯೋಜನೆ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಲು ಅನುವಾಗುವಂತೆ ಹರಿಹರ ತಾಲೂಕಿನ ರಾಜನಹಳ್ಳಿ ಜಾಕ್‍ವೆಲ್ ಬಳಿಯ ತುಂಗಭದ್ರ ನದಿಯಲ್ಲಿ ನಿರ್ಮಿಸುತ್ತಿರುವ ಮುಳುಗಡೆ ತಡೆಗೋಡೆ ಕಾಮಗಾರಿಯನ್ನು ಮಳೆ ಬರುವುದರೊಳಗೆ ಮುಗಿಸಬೇಕೆಂದು ಸಂಸದ ಜಿ.ಎಂ.ಸಿದ್ದೇಶ್ವರ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ತಾಲೂಕಿನ ಮಲ್ಲಶೆಟ್ಟಿಹಳ್ಳಿಯಲ್ಲಿರುವ 22 ಕೆರೆ ಏತನೀರಾವರಿ ಘಟಕ ಹಾಗೂ ಹರಿಹರ ತಾಲೂಕಿನ ರಾಜನಹಳ್ಳಿ ಬಳಿಯ ತುಂಗಭದ್ರಾ ನದಿ ಬಳಿಯಿರುವ 22 ಕೆರೆ ಏತನೀರಾವರಿ ಜಾಕ್‍ವೆಲ್‍ಗೆ ಮಾಯಕೊಂಡ ಶಾಸಕ ಪ್ರೊ.ಎನ್.ಲಿಂಗಣ್ಣ, 22 ಕೆರೆ ಹೋರಾಟ ಸಮಿತಿ ಅಧ್ಯಕ್ಷ ಡಾ. ಮಂಜುನಾಥ್‍ಗೌಡ ಹಾಗೂ ಮುಖಂಡರೊಂದಿಗೆ ಸೋಮವಾರ ಭೇಟಿ ನೀಡಿ, ಕಾಮಗಾರಿ ವೀಕ್ಷಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕುಡಿಯಲು ನೀರು ಸಹ ಇಲ್ಲದೇ, ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನೀರಿನ ಬವಣೆ ತಪ್ಪಿಸಲು 22 ಕೆರೆ ಏತ ನೀರಾವರಿ ವ್ಯಾಪ್ತಿಯ ಕೆರೆಗಳಿಗೆ ನೀರು ತಂಬಿಸಿದರೆ, ಅಂತರ್ಜಲ ಮಟ್ಟ ಹೆಚ್ಚಿ, ಕೊಳವೆ ಬಾವಿಗಳಲ್ಲಿ ನೀರು ಬರಲಿದೆ. ಆದ್ದರಿಂದ ಮಳೆ ಬರುವುದರೊಳಗೆ 22ಕೆರೆ ಏತ ನೀರಾವರಿ ಯೋಜನೆಯ ಹರಿಹರ ತಾಲೂಕಿನ ರಾಜನಹಳ್ಳಿ ಜಾಕ್‍ವೆಲ್-1ರ ಬಳಿಯ ತುಂಗಭದ್ರಾ ನದಿಗೆ ಅಡ್ಡವಾಗಿ ನಿರ್ಮಿಸುತ್ತಿರುವ ಮುಳುಗಡೆ ತಡೆಗೋಡೆ ಹಾಗೂ ಮಲ್ಲಶೆಟ್ಟಿಹಳ್ಳಿಯ ಜಾಕ್‍ವೆಲ್-2ರನ ನೀರು ಸಂಗ್ರಹ ಮಿನಿಟ್ಯಾಂಕ್ ಕಾಮಗಾರಿ ತಿಂಗಳೊಳಗೆ ಮುಗಿಸಬೇಕೆಂದು ತಾಕೀತು ಮಾಡಿದರು.
ಕಳೆದ ವರ್ಷ ಅಂದರೆ, 2018ರಲ್ಲಿ ಭಾರೀ ಮಳೆಬಂದರೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಹಾಗೂ ಎಲ್‍ಎನ್‍ಟಿ ಕಂಪನಿ ಕಾಮಗಾರಿ ಲೋಪದಿಂದ ಕೆರೆಗಳನ್ನು ಸಂಪೂರ್ಣವಾಗಿ ತುಂಬಿಸಲಾಗಲಿಲ್ಲ. ತದನಂತರ ಎಂಎಲ್‍ಎ ಚುನಾವಣೆ ಎದುರಾಯಿತು. 2019ರಲ್ಲಿ ಲೋಕಸಭಾ ಚುನಾವಣೆಯಿಂದಾಗಿ ಏತ ನೀರಾವರಿ ಯೋಜನೆ ಪೂರ್ಣಗೊಳ್ಳುತ್ತಲೇ ಇಲ್ಲ. ಆದ್ದರಿಂದ ಈ ಬಾರಿ ಯಾವಾಗ ಬೇಕಾದರೂ ಮಳೆ ಬರುವ ಸಾಧ್ಯತೆಯಿ ಇದೆ. ಆದ್ದರಿಂದ ಗುತ್ತಿಗೆದಾರರು, ಅಧಿಕಾರಿಗಳು ಶತಾಯಗತಾಯ ಈ ತಿಂಗಳೊಳಗೆ ಅಪೂರ್ಣಗೊಂಡಿರುವ ಕಾಮಗಾರಿ ಪೂರ್ಣಗೊಳಿಸಿ, ಕೆರೆ ತುಂಬಿಸಲು ನೆರವಾಗಬೇಕೆಂದು ಸಲಹೆ ನೀಡಿದರು.
ಕಳೆದ ನಾಲ್ಕೈದು ತಿಂಗಳ ಹಿಂದೆ ತರಳಬಾಳು ಜಗದ್ಗುರು ಡಾ.ಶ್ರೀಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಅಧಿಕಾರಿಗಳ ಸಭೆ ನಡೆಸಿ, ಕಳೆದ ಬಾರಿ ನದಿ ತುಂಬಿದಾಗಲೂ ನಮ್ಮಲ್ಲಿನ ಸಂಪನ್ಮೂಲಗಳ ಕೊರತೆಯಿಂದ ಕೆರೆಗಳನ್ನು ತುಂಬಿಸಿಕೊಳ್ಳಲಾಗಲಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನಲೆಯಲ್ಲಿ ರಾಜನಹಳ್ಳಿ ಜಾಕ್‍ವೆಲ್ ಬಳಿ ಸುಮಾರು 10 ಕೋಟಿ ವೆಚ್ಚದಲ್ಲಿ ಮುಳುಗಡೆ ತಡೆಗೋಡೆ ನಿರ್ಮಾಣ ಮಾಡಲು ತೀರ್ಮಾನಿಸಲಾಯಿತು. ಮುಳುಗು ತಡೆಗೋಡೆಯು ಸುಮಾರು 330 ಮೀಟರ್ ಉದ್ದ ಹಾಗೂ 4.3 ಮೀಟರ್ ಎತ್ತರದಲ್ಲಿ ಇರಲಿದ್ದು, ಅದರಲ್ಲಿ 6 ಕ್ರಸ್ಟ್‍ಗೇಟ್‍ಗಳನ್ನು ನಿರ್ಮಿಸಲಾಗುವುದು. ಇದರಿಂದ ಮಳೆ ನೀರು ಹೆಚ್ಚಾದಾಗ ಹೊರಬಿಡಬಹುದು. ಕಡಿಮೆ ಇದ್ದಲ್ಲಿ ಹಿಡಿದಿಟ್ಟುಕೊಳ್ಳಲು ಅನುಕೂಲವಾಗಲಿದೆ ಎಂದರು.
ಇಲ್ಲಿ ವಿದ್ಯುತ್ ಇದ್ದಾಗ, ಮಲ್ಲಶೆಟ್ಟಿಹಳ್ಳಿ ಬಳಿಯ ಜಾಕ್‍ವೆಲ್ 2ರಲ್ಲಿ ವಿದ್ಯುತ್ ಇರುತ್ತಿರಲಿಲ್ಲ. ಇದರಿಂದ ನೀರನ್ನು ಸಮರ್ಪಕವಾಗಿ ಶೇಖರಿಸಿಡಲು ತೊಂದರೆಯಾದ ಪರಿಣಾಮವಾಗಿ ಮಲ್ಲಶೆಟ್ಟಿಹಳ್ಳಿ ಜಾಕ್‍ವೆಲ್ 2ರಲ್ಲಿ 5 ಕೋಟಿ ವೆಚ್ಚದಲ್ಲಿ ಸುಮಾರು 12 ಎಕರೆ ವಿಸ್ತೀರ್ಣದಲ್ಲಿ ಸುಮಾರು 0.039 ಸಾಮಾಥ್ರ್ಯದ ಕೆರೆ (ಮಿನಿ ಟ್ಯಾಂಕ್) ನಿರ್ಮಿಸಲಾಗುತ್ತಿದೆ ಎಂದರು.
ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವ ಮುನ್ನ ಮೂರು ದಿನ ಮುಂಚೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಟೆಂಡರ್ ಕರೆದಿರುವ ಪರಿಣಾಮ, ಕಾಮಗಾರಿ ಶೇ. 20 ಮಾತ್ರವಾಗಿದೆ. ಗುತ್ತಿಗೆದಾರರೂ ಜೂನ್ 15ರೊಳಗೆ ಮುಗಿಸಿಕೊಡುವುದಾಗಿ ಹೇಳಿದ್ದಾರೆ. ಆದರೆ, ಅಲ್ಲಿಯವರೆಗೂ ಕಾಯುತ್ತ ಕೂತರೆ ಮಳೆ ಬಂದು ಕಾಮಗಾರಿ ಅಪೂರ್ಣಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಶತಾಯಗತಾಯ ಇದೇ ತಿಂಗಳ ಅಂತ್ಯದೊಳಗೆ ಕಾಮಗಾರಿಒ ಪೂರ್ಣಗೊಳಿಸಬೇಕೆಂದು ಹೇಳಿದರು.
ಈಗ ಮೋಟರ್ ಮೂಲಕ ನೀರು ಪಂಪ್ ಮಾಡುತ್ತಿರುವುದನ್ನು ತಡೆಗೋಡೆ ನಿರ್ಮಾಣವಾಗುತ್ತಿದ್ದಂತೆ, ತೆಗೆದುಹಾಕುವ ಮೂಲಕ ವಿದ್ಯುತ್ ಉಳಿತಾಯ ಮಾಡಲಾಗುವುದು. ಅಲ್ಲದೆ, 22 ಕೆರೆ ಏತನೀರಾವರಿ ಯೋಜನೆಯೂ ಎಲ್ಲಿರಿಗೂ ಸಂಬಂಧಿಸಿದೆ. ಆದರೆ, ಕೆಲ ರೈತರು ಮತ್ತೊಂದು ಕೆರೆಗೆ ನೀರು ಹೋಗದಂತೆ ಕ್ರಸ್ಟ್‍ಗೇಟ್ ಮುರಿಯುವಂತ ಕಾರ್ಯ ಮಾಡುತ್ತಿರುವುದು ಸರಿಯಲ್ಲ. ಎಲ್ಲರೂ ಸಮಾಧಾನದಿಂದ ನೀರು ಸದುಪಯೋಗ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮಾಯಕೊಂಡ ಶಾಸಕ ಪ್ರೊ.ಎನ್.ಲಿಂಗಣ್ಣ, 22 ಕೆರೆಗೆಳ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಡಾ.ಮಂಜುನಾಥಗೌಡ, ಮುಖಂಡರಾದ ಹೊನ್ನೂರು ಮುನಿಯಪ್ಪ, ನಿಜಲಿಂಗಪ್ಪ, ತಿಪ್ಪೇಸ್ವಾಮಿ, ಚಂದ್ರಣ್ಣ, ಶಿವಕುಮಾರ್, ಸಂಗಣ್ಣ, ಬಸವರಾಜ್, ಕಂದನಕೋವಿ ಬಸವರಾಜ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
